ಯುವ ಭಾರತ್ ವಾಟ್ಸ್‌ಆ್ಯಪ್ ಗ್ರೂಪ್‌ನಿಂದ ‘ನೇತ್ರಾವತಿ ಉಳಿಸಿ’ ಜಾಗೃತಿ ವೀಡಿಯೊ ಬಿಡುಗಡೆ

Update: 2016-05-14 12:17 GMT

ಪುತ್ತೂರು, ಮೇ 14: ಜೀವನದಿ ನೇತ್ರಾವತಿಯನ್ನು ತಿರುಗಿಸಿದರೆ ಎದುರಾಗುವ ಅಪಾಯದ ಕುರಿತು ಜಾಗೃತಿ ಮೂಡಿಸುವ ವೀಡಿಯೊವನ್ನು ಪುತ್ತೂರು ಯುವ ಭಾರತ್ ವಾಟ್ಸ್ ಆ್ಯಪ್ ಗ್ರೂಪ್ ಸದಸ್ಯರು ಶನಿವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು.

ಈ ವೀಡಿಯೊವನ್ನು ವಾಟ್ಸ್‌ಆ್ಯಪ್ ಮತ್ತು ಯೂಟ್ಯೂಬ್‌ನಲ್ಲಿ ಹಾಕುವ ಮೂಲಕ ಜನಜಾಗೃತಿ ಮೂಡಿಸಲಾಗುವುದು ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಮುದಾಯವೇ ಇರುವ ಯುವ ಭಾರತ್ ಗ್ರೂಪ್, ಎತ್ತಿನಹೊಳೆ ಯೋಜನೆ ವಿರುದ್ಧ ಜನಜಾಗೃತಿ ಮೂಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ವೀಡಿಯೊ ರಚಿಸಿದ್ದು, ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ಅಪ್‌ಲೋಡ್ ಆಗಲಿದೆ. ಜಿಲ್ಲೆಯ ಜೀವನದಿಯನ್ನು ಉಳಿಸುವ ಬಗ್ಗೆ ವೀಡಿಯೊ ಮೂಲಕ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದರು.

ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ಎದುರಾಗಬಹುದಾದ ಹಾನಿಯ ಬಗ್ಗೆ ಇನ್ನೂ ಜನತೆ ಎಚ್ಚೆತ್ತುಕೊಂಡಿಲ್ಲ. ಆದ್ದರಿಂದ ಮೇ 16ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮಕ್ಕೆ ಹೆಚ್ಚು ಜನರನ್ನು ಸೇರಿಸುವ ಉದ್ದೇಶದಿಂದ ವೀಡಿಯೊ ಬಿಡುಗಡೆ ಮಾಡಲಾಗಿದೆ. ಧರ್ಮಗುರುಗಳಾದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಎಸ್.ಬಿ.ದಾರಿಮಿ, ಆಲ್ಫ್ರೆಡ್ ಜೆ. ಪಿಂಟೊ, ನೇತ್ರಾವತಿ ನದಿ ತಿರುವಿನ ವಿರುದ್ಧ ಹೋರಾಟ ಸಮಿತಿಯ ಡಾ.ಪ್ರಸಾದ್ ಭಂಡಾರಿ, ಡಾ.ನಿರಂಜನ್ ರೈ, ಎಂ.ಜಿ.ಹೆಗ್ಡೆ ಸಂದೇಶ ನೀಡಿದ್ದಾರೆ. ಇವೆಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗುವುದು ಎಂದರು.

ನೇತ್ರಾವತಿ ಉಳಿಸುವ ನಿಟ್ಟಿನಲ್ಲಿ ಈ ಹಿಂದೆ ಉಪ್ಪಿನಂಗಡಿಯಲ್ಲಿ ಹೋರಾಟ ನಡೆದಿತ್ತು. ಬಳಿಕ 2ನೆ ಹಂತವಾಗಿ ಮಂಗಳೂರಿನಲ್ಲಿ ಮತ್ತು 3ನೆ ಹಂತವಾಗಿ ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಹೋರಾಟ ನಡೆಸಲಾಗಿತ್ತು. ಆದರೆ ಈ ಹೋರಾಟಕ್ಕೆ ಯಾವುದೇ ಮನ್ನಣೆ ಸಿಗದಿರುವ ಕಾರಣ ನೇತ್ರಾವತಿ ಉಳಿಸಿ ಸಂಯುಕ್ತ ಸಮಿತಿ ವತಿಯಿಂದ ಹೋರಾಟ ಮುಂದುವರಿಸಲಾಗುತ್ತಿದೆ ಎಂದರು.

ಮೇ 16ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನೇತ್ರಾವತಿ, ಎತ್ತಿನ ಹೊಳೆ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಆಂದೋಲನ ನಡೆಸಲಾಗುವುದು. ಈ ಆಂದೋಲನವು ಸತ್ಯಜಿಲ್ ಸುರತ್ಕಲ್‌ರ ಸಂಚಾಲಕತ್ವದಲ್ಲಿ ಎಲ್ಲಾ ಧರ್ಮಗಳ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಲಿದೆ. ಬಳಿಕ ಮೇ 19ರಂದು ಸ್ವಯಂ ಪ್ರೇರಿತ ದ.ಕ. ಜಿಲ್ಲಾ ಬಂದ್‌ಗೆ ಕರೆ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಯುವ ಭಾರತ್ ವಾಟ್ಸ್ ಆ್ಯಪ್ ಗ್ರೂಪ್‌ನ ಅಡ್ಮಿನ್‌ಗಳಾದ ಪ್ರದೀಪ್, ಚಿನ್ಮಯ್, ಸದಸ್ಯ ದಿನೇಶ್ ಜೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News