ಮೂಡುಬಿದಿರೆಯಲ್ಲಿ ಈಜುಕೊಳ ಲೋಕಾರ್ಪಣೆ

Update: 2016-05-14 13:15 GMT

ಮೂಡುಬಿದಿರೆ, ಮೇ 14: ಭಾರತವು ಅಭಿವೃದ್ಧಿಯ ಜೊತೆಗೆ ಕ್ರೀಡೆಯಲ್ಲೂ ಜಗತ್ತಿಗೆ ಸ್ಪರ್ಧೆ ನೀಡುವಂತಾಗಬೇಕು. ಸರಕಾರವು ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯ ಹಾಗೂ ಪ್ರೋತ್ಸಾಹ ನೀಡಬೇಕು. ಖಾಸಗಿ ಸಂಸ್ಥೆಗಳು ಸಹಭಾಗಿತ್ವ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.

ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಸ್ವರಾಜ್ಯ ಮೈದಾನದ ಬಳಿ ನಿರ್ಮಿಸಿದ ಅಂತಾರಾಷ್ಟ್ರೀಯ ಗುಣಮಟ್ಟದ ಸುಮಾರು 25 ಅಡಿ ಉದ್ದದ ಸುಸಜ್ಜಿತ ಈಜುಕೊಳ ಸಂಕೀರ್ಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಕ್ಷೇತ್ರದಲ್ಲಿ ಭಾರತವು ಹಿಂದುಳಿಯಲು ಕ್ರೀಡಾಪಟುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದಿರುವುದೇ ಕಾರಣವಾಗಿದೆ. ಸರಕಾರವು ಎಲ್ಲಾ ಕ್ರೀಡೆಗಳಿಗೆ ಪ್ರೋತ್ಸಾಹ ಧನ ನೀಡಬೇಕು. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಹೆಚ್ಚುವರಿ ಹಾಜರಿ, ಕೃಪಾಂಕವನ್ನು ನೀಡಬೇಕು. ಕರ್ನಾಟಕ ಸರಕಾರವು ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ದೇಶದಲ್ಲಿ ಮಾದರಿಯಾಗುವಂತೆ ಕ್ರೀಡೆಗೆ ಅನುದಾನವನ್ನು ನೀಡುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಕ್ರೀಡಾ ಸಚಿವನಾಗಿ ಜಿಲ್ಲೆಗೆ ಹೆಚ್ಚಿನ ಕ್ರೀಡಾ ಸೌಲಭ್ಯ, ಅನುದಾನ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಕಾಯಕಲ್ಪ ನೀಡಲು ಸಾಧ್ಯವಾಗಿದೆ ಎಂದು ರಾಜ್ಯದಲ್ಲಿ ನಡೆದ ಕ್ರೀಡಾ ಬೆಳವಣಿಗೆಗೆ ಕೈಗೊಂಡ ಯೋಜನೆಗಳ ಕುರಿತು ವಿವರ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಉತ್ತಮ ಕ್ರೀಡಾಪಟುಗಳನ್ನು ರೂಪಿಸಲು ಈಜುಕೊಳ ಒಂದು ಭಾಗ. ಈಜುಕೊಳವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ಅದನ್ನು ಸಂರಕ್ಷಿಸಬೇಕು ಎಂದರು.

ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಮಾತನಾಡಿ, ಈಜುಕೊಳ ನಿರ್ಮಿಸಿದರೆ ಸಾಲದು ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಸರಕಾರ ಪೂರಕ ಸೌಲಭ್ಯವನ್ನು ಒದಗಿಸಬೇಕು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಸಚಿವ ಅಭಯಚಂದ್ರ ಜೈನ್ ಕ್ರೀಡಾ ಸಚಿವರಾದ ಬಳಿಕ ರಾಜ್ಯದಲ್ಲಿ ಏಳು ಹೊಸ ಸಿಂಥೆಟಿಕ್ ಟ್ರ್ಯಾಕ್‌ಗಳನ್ನು ನಿರ್ಮಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಯುವ ಕ್ರೀಡಾಪಟುಗಳಿಗೆ ಕ್ರೀಡಾರತ್ನ ಪ್ರಶಸ್ತಿ, ಸಾಧಕ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಪುರಸಭಾಧ್ಯಕ್ಷೆ ರೂಪಾ ಎಸ್.ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಜಿ.ಪಂ. ಸದಸ್ಯ ಸುಚರಿತ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ.ಥೋಮಸ್, ತಹಶೀಲ್ದಾರ್ ಮುಹಮ್ಮದ್ ಇಸಾಕ್, ಜಿಲ್ಲಾ ಕ್ರೀಡಾ ಉಪನಿರ್ದೇಶಕ ಪಾಂಡುರಂಗ ಗೌಡ, ಉಡುಪಿ ಜಿಲ್ಲಾ ಕ್ರೀಡಾ ಉಪನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂಧರ್ದಲ್ಲಿ ಯುಪಿಎಸ್‌ಸಿ ರ್ಯಾಂಕ್ ವಿಜೇತೆ ಮಿಶಲ್ ಕ್ವೀನಿ ಡಿಕೋಸ್ತಾ ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಎಂಟು ಮಂದಿ ಈಜು ಪಟುಗಳನ್ನು ಗೌರವಿಸಲಾಯಿತು. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News