ಜೂ.1ರವರೆಗೆ ಉಡುಪಿಗೆ ಸ್ವರ್ಣೆಯಿಂದ ಕುಡಿಯುವ ನೀರು: ಪ್ರಮೋದ್ ಮಧ್ವರಾಜ್

Update: 2016-05-14 18:17 GMT

ಉಡುಪಿ, ಮೇ 14: ಸ್ವರ್ಣ ನದಿಗೆ ಶಿರೂರು ಬಳಿ ನಿರ್ಮಿಸಿರುವ ಅಣೆಕಟ್ಟು ಪ್ರದೇಶದಿಂದ ಬಜೆ ಅಣೆಕಟ್ಟು ಪ್ರದೇಶದವರೆಗೆ ತಗ್ಗು ಪ್ರದೇಶಗಳಲ್ಲಿ ನಿಂತಿರುವ ನೀರನ್ನು ಪಂಪ್ ಮೂಲಕ ಹರಿಸುವ ಕಾರ್ಯ ನಡೆದಿದ್ದು, ಇದರಿಂದ 15ರಿಂದ 17ದಿನಗಳವರೆಗೆ ಉಡುಪಿ ನಗರಸಭಾ ವ್ಯಾಪ್ತಿಯ ಪ್ರದೇಶಕ್ಕೆ ಕುಡಿಯುವ ನೀರು ನೀಡಲು ಸಾಧ್ಯವಾಗುವುದರಿಂದ ಜೂ.1ರವರೆಗೆ ನಗರಕ್ಕೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಶಾಸಕ ಪ್ರಮೋದ್ ಮಧ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಣೆಯಿಂದ ಕೆಳಗೆ ಭಂಡಾರಿಬೆಟ್ಟು ಗುಂಡ್ಯಡ್ಕದಲ್ಲಿ ಮೂರು ಪಂಪ್‌ಗಳನ್ನು ಬಳಸಿ ನೀರು ಹರಿಸುವ ಪ್ರಕ್ರಿಯೆ ನಡೆದಿರುವ ಪ್ರದೇಶಕ್ಕೆ ಉಡುಪಿ ನಗರಸಭಾ ಪೌರಾಯುಕ್ತರು, ಸದಸ್ಯರು ಹಾಗೂ ಪಕ್ಷದ ನಾಯಕರೊಂದಿಗೆ ತೆರಳಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಉಡುಪಿ ನಗರಸಭೆಗೆ ನೀರುಣಿಸುವ ಬಜೆ ಅಣೆಕಟ್ಟಿನಲ್ಲಿ ಇಂದು 2.08ಮೀ. ನೀರಿದ್ದು, ಇದು ಇನ್ನು 3-4 ದಿನಗಳಿಗೆ ಸಾಕಾಗುತ್ತದೆ. ಹೀಗಾಗಿ ಗುಂಡ್ಯಡ್ಕದಿಂದ ಕೆಳಗೆ ನಿಂತಿರುವ ನೀರನ್ನು ಕೆಳಗೆ ಅಂದರೆ ಬಜೆ ಪಂಪಿಂಗ್ ನಡೆಯುವ ಪ್ರದೇಶಕ್ಕೆ ಹರಿಸುವ ಕಾರ್ಯ ಈಗ ನಡೆಯುತ್ತಿದೆ. ಇರುವ ನೀರನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಜೂ.5ರವರೆಗೂ ಇದು ಸಾಕಾಗಬಹುದು ಎಂದರು.

ಬಜೆಯಿಂದ ಸುಮಾರು ಐದು ಕಿ.ಮೀ. ಮೇಲಕ್ಕಿರುವ ಗುಂಡ್ಯಡ್ಕದಲ್ಲಿ ಈಗ ಮೂರು ಬೋಟುಗಳಲ್ಲಿ ತಲಾ 110 ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಗಳಿಂದ ನೀರನ್ನು ಕೆಳಗೆ ಹರಿಸಲಾಗುತ್ತಿದೆ. ಇಲ್ಲಿನ ನೀರನ್ನು ಇನ್ನು ಮೂರು ದಿನಗಳಲ್ಲಿ ಕೆಳಗೆ ಹರಿಸಬಹುದು ಎಂದು ನಗರಸಭೆಯ ಇಂಜಿನಿಯರ್‌ಗಳಾದ ಶಶಿಧರ್, ಗಣೇಶ ಉಪ್ಪೂರು ತಿಳಿಸಿದರು.

ಇಲ್ಲಿಂದ ನೀರು ಖಾಲಿಯಾಗುತ್ತಿದ್ದಂತೆ ಪುತ್ತಿಗೆ ಸೇತುವೆ ಬಳಿ ಇರಿಸಿರುವ ಒಟ್ಟು 330 ಎಚ್‌ಪಿ ಸಾಮರ್ಥ್ಯದ ಮೂರು ಪಂಪ್‌ಗಳಿಂದ ನೀರನ್ನು ಮುಂದಕ್ಕೆ ಹರಿಸಲಾಗುವುದು. ಆ ಬಳಿಕ ಮುಂದೆ ಪುತ್ತಿಗೆ ಮಠದ ಬಳಿ ಇದೇ ರೀತಿ ನೀರನ್ನು ಪಂಪ್ ಮಾಡಿ ಬಜೆ ಅಣೆಕಟ್ಟು ಪ್ರದೇಶಕ್ಕೆ ಹರಿಸಲಾಗುವುದು ಎಂದು ಪ್ರಮೋದ್ ಹೇಳಿದರು. ಪುತ್ತಿಗೆ ಮಠದ ಬಳಿ ಇರುವ ತಗ್ಗು ಪ್ರದೇಶದಲ್ಲಿ ಭಾರೀ ಪ್ರಮಾಣದ ನೀರಿನ ಸಂಗ್ರಹವಿದ್ದು, ಇದನ್ನು ಹರಿಸುವುದರಿಂದ ಮುಂಗಾರು ಜಿಲ್ಲೆಗೆ ಕಾಲಿರಿಸು ವವರೆಗೆ ಉಡುಪಿ ನಗರಕ್ಕೆ ನೀರು ನೀಡಲು ಸಾಧ್ಯವಾಗುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಇಂಜಿನಿಯರ್‌ಗಳು ತಿಳಿಸಿದರು. ಮೇ 30-ಜೂ.1ರ ಸುಮಾರಿಗೆ ಈ ಸಲದ ಮುಂಗಾರು ರಾಜ್ಯ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.

ಸ್ವರ್ಣ ನದಿಯಲ್ಲಿರುವ ನೀರು ಜೂ.1ರವರೆಗೆ ಲಭ್ಯವಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈಗಿನಂತೆ ಉಡುಪಿ ನಗರಕ್ಕೆ ದಿನ ಬಿಟ್ಟು ದಿನ ನೀರು ನೀಡುವುದನ್ನು ಮುಂದುವರಿಸಲಾಗುವುದು. ಬಜೆ ಅಣೆಕಟ್ಟಿನಿಂದ ಉಡುಪಿ ನಗರಸಭೆಯ 35 ವಾರ್ಡುಗಳಿಗೆ ಮಾತ್ರವಲ್ಲದೇ ಆಸುಪಾಸಿನ ಏಳು ಗ್ರಾಪಂ - ಕೋಡಿಬೆಟ್ಟು, ಬೊಮ್ಮರಬೆಟ್ಟು, ಆತ್ರಾಡಿ, 80 ಬಡಗುಬೆಟ್ಟು, ಅಲೆವೂರು, ಅಂಬಲಪಾಡಿ ಹಾಗೂ ಕಡೆಕಾರು-ಗಳಿಗೂ ನೀರನ್ನು ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News