ಎಂಆರ್‌ಪಿಎಲ್: ಭೂ ಸ್ವಾಧೀನ ಪ್ರಸ್ತಾಪಕ್ಕೆ ಶೇ. 85ರಷ್ಟು ಗ್ರಾಮಸ್ಥರ ವಿರೋಧ

Update: 2016-05-14 18:20 GMT

ಮಂಗಳೂರು, ಮೆ 14: ಎಂಆರ್‌ಪಿಎಲ್‌ನ ವಿಸ್ತರಣಾ ಯೋಜನೆಗಾಗಿ ಉದ್ದೇಶಿತ ಭೂ ಸ್ವಾಧೀನತೆಯ ಪ್ರಸ್ತಾಪವನ್ನು ವಿರೋಧಿಸಿ ಶೇ. 85ರಷ್ಟು ಸ್ಥಳೀಯರು ವಿರೋಧಿಸಿದ್ದಾರೆ. ಸಂಬಂಧಿಸಿದ ಗ್ರಾಮ ಪಂಚಾಯತ್‌ಗಳಲ್ಲಿ ನಡೆದ ಸಾಮಾನ್ಯ ಹಾಗೂ ಗ್ರಾಮ ಸಭೆಗಳಲ್ಲಿ ಈ ಪ್ರಸ್ತಾಪವನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕರು ಭೂಸ್ವಾಧೀನ ಪ್ರಕ್ರಿಯೆಗೆ ‘ಗ್ರಾಮಸ್ಥರ ಒಪ್ಪಿಗೆ ಪಡೆಯಲಾಗಿದೆ’ ಎನ್ನುವ ಪ್ರಕಟನೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದನ್ನು ಕೃಷಿ ಭೂಮಿ ಸಂರಕ್ಷಣಾ ಸಮಿತಿ ವಿರೋಧಿಸುತ್ತದೆ ಎಂದು ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

  ಕಂಪೆನಿ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಜನರನ್ನು ಮತ್ತು ಸರಕಾರವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ಎಂಆರ್‌ಪಿಎಲ್ ಕಂಪೆನಿ ಎಸ್‌ಇಝೆಡ್ ಭೂಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ಮಾಡಿದಂತೆ ಸರಕಾರಕ್ಕೆ ಸ್ಥಳೀಯ ಜನರ ಅಭಿಪ್ರಾಯವನ್ನು ಸರಿಯಾಗಿ ತಿಳಿಸದೆ, ಜನರನ್ನು ಕತ್ತಲಲ್ಲಿಟ್ಟು ಭೂಸ್ವಾಧೀನ ಮಾಡಲಾಗಿದೆ. ಈ ಬಾರಿಯೂ ಅದೇ ರೀತಿ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಭೂಮಿ ಬಿಟ್ಟುಕೊಡಲು ಗ್ರಾಮಸ್ಥರ ಮೇಲೆ ಒತ್ತಡ ಹೇರಲಾಗುತ್ತಿದೆ. ಕೆಐಡಿಬಿ ಭೂಸ್ವಾಧೀನ ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಶಾಮೀಲಾಗಿದ್ದಾರೆ. 2013ರ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯ ಪ್ರಕಾರ ಭೂಸ್ವಾಧೀನ ಅಧಿಸೂಚನೆ ಹೊರಡಿಸುವ ಮೊದಲು ಸಾಮಾಜಿಕ ಪರಿಣಾಮಗಳ ಅಧ್ಯಯನ, ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಬೇಕಾಗಿದೆ. ಈಗಾಗಲೇ ಭೂಸ್ವಾಧೀನ ಪಡಿಸಿಕೊಂಡ ಭೂಮಿಯಲ್ಲಿ ಎಂಆರ್‌ಪಿಎಲ್ ವಿಸ್ತರಣಾ ಯೋಜನೆಯನ್ನು ಹಮ್ಮಿಕೊಳ್ಳಬಹುದಾಗಿದೆ. ಈ ಹಿಂದೆ ಎಂಆರ್‌ಪಿಎಲ್‌ಗಾಗಿ ರೈತರಿಂದ ಪಡೆದ ಭೂಮಿಯನ್ನು ಹಲವು ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗ ಇರುವ ಧಾರಣಾ ಸಾಮರ್ಥ್ಯದ ಪ್ರಕಾರ ಇನ್ನೂ ಇಲ್ಲಿ ಯಾವುದೇ ಹೊಸ ಕೈಗಾರಿಕೆಗಳನ್ನು ಮಾಡಲು ಸಾಧ್ಯವಿಲ್ಲ ಎನ್ನುವ ವರದಿ ಇದ್ದರೂ ಎಂಆರ್‌ಪಿಎಲ್‌ನ ವಿಸ್ತರಣೆಗಾಗಿ ಕೃಷಿಕರ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಡುತ್ತಿರುವುದು ಜನ ವಿರೋಧಿಯಾದ ಕ್ರಮವಾಗಿದೆ ಎಂದರು.

ಪೆರ್ಮುದೆ ಮತ್ತು ಕುತ್ತೆತ್ತೂರು ಗ್ರಾಪಂ ಸಾಮಾನ್ಯ ಹಾಗೂ ಗ್ರಾಮಸಭೆಗಳಲ್ಲಿ ಮಾ.9ರಂದು ಹಾಗೂ ಮೇ 5ರಂದು ಭೂ ಸ್ವಾಧೀನವನ್ನು ಕೈ ಬಿಡಬೇಕು ಎಂದು ನಿರ್ಣಯವನ್ನು ಕೈ ಗೊಳ್ಳಲಾಗಿದೆ. ಸ್ಥಳೀಯ ಜನರು ಭೂ ಸ್ವಾಧೀನತೆಯನ್ನು ವಿರೋಧಿಸಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ನೀಡಿದ್ದಾರೆ. ಈ ಅಭಿಪ್ರಾಯವನ್ನು ಸಂಗ್ರಹಿಸಿ ಸರಕಾರಕ್ಕೆ ಎಲ್ಲ ಅಧಿಕಾರಿಗಳಿಗೆ, ಸಚಿವರಿಗೆ ಸಲ್ಲಿಸಲಾಗಿದೆ ಎಂದು ಮಧುಕರ ಅಮೀನ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಲಾರನ್ಸ್ ಡಿಕುನ್ಹ, ಉಪಾಧ್ಯಕ್ಷರಾದ ವಿಲಿಯಂ ಡಿಸೋಜ, ಹೇಮಲತಾ ಎಸ್. ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News