ಎಲ್‌ಡಿಎಫ್-ಯುಡಿಎಫ್ ರಹಸ್ಯ ಮೈತ್ರಿ: ಸಂಸದ ನಳಿನ್ ಆರೋಪ

Update: 2016-05-14 18:22 GMT

ಕಾಸರಗೋಡು, ಮೇ 14: ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ಬಿಜೆಪಿ ಗೆಲುವು ನಿಚ್ಛಳವಾಗುತ್ತಿದ್ದಂತೆ ಎಲ್‌ಡಿಎಫ್ ಮತ್ತು ಯುಡಿಎಫ್ ರಹಸ್ಯ ಮೈತ್ರಿ ಮಾಡಿಕೊಂಡಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಉಭಯ ರಂಗಗಳಿಂದ ಹೊಂದಾಣಿಕೆ ರಾಜಕೀಯದಿಂದ ಮತದಾರರು ಈ ಬಾರಿ ಬದಲಾವಣೆಗೆ ಮುಂದಾಗಿದ್ದಾರೆ. ಹಾಗಾಗಿ ಬಿಜೆಪಿಗೆ ಅಚ್ಚರಿಯ ಜಯ ಲಭಿಸಲಿದೆ. ಇದನ್ನು ತಡೆಯಲು ಎರಡೂ ಪಕ್ಷಗಳಿಂದ ಒಳ ಒಪ್ಪಂದವಾಗಿದ್ದು, ಅವರ ಹೊಂದಾಣಿಕೆ ತಂತ್ರ ಫಲಿಸದು ಎಂದರು.

  ಮಂಗಳೂರು ಸಾಕಷ್ಟು ಅಭಿವೃದ್ಧಿ ಕಂಡಿದೆ. ರಸ್ತೆ, ಆಸ್ಪತ್ರೆ, ಕಾಲೇಜುಗಳಿಗೆ ಕಾಸರಗೋಡಿನವರು ಮಂಗಳೂರಿಗೆ ಬರುತ್ತಾರೆ. ಕಾಸರಗೋಡು ಅಭಿವೃದ್ಧಿಯಲ್ಲಿ ತೀರಾ ಹಿಂದೆ ಉಳಿದಿದೆ. ರಸ್ತೆ, ಸರಿಯಾದ ಆಸ್ಪತ್ರೆ , ಶೈಕ್ಷಣಿಕ ಸಂಸ್ಥೆಗಳಿಲ್ಲ. ಉಪ್ಪುನೀರು ಸಮಸ್ಯೆ ಇದೆ. ವೈದ್ಯಕೀಯ ಕಾಲೇಜು ಕಾಮಗಾರಿ ಶಿಲಾನ್ಯಾಸ ಹಂತದಲ್ಲೇ ಉಳಿದಿದೆ. ಉಮ್ಮನ್‌ಚಾಂಡಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸೋಲಾರ್, ಬಾರ್ ಸೇರಿದಂತೆ ಹಲವಾರು ಸಮಸ್ಯೆಗಳಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ನಿಕ್, ಪಿ. ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News