ಯುವಜನತೆಗೆ ದೇಶ ಮುನ್ನಡೆಸುವ, ರಕ್ಷಿಸುವ ಜವಾಬ್ದಾರಿ : ನ್ಯಾ. ಸಂತೋಷ್ ಹೆಗ್ಡೆ

Update: 2016-05-15 10:13 GMT

ಮಂಗಳೂರು, ಮೇ 15 : ದೇವರು ನೀಡಿದ ವಿದ್ಯೆಯ ಅನುಗ್ರಹ ಹಾಗು ಸರಕಾರ ನೀಡುವ ವೇತನ, ಭತ್ತೆಗಳಲ್ಲಿ ತೃಪ್ತಿ ಕಂಡುಕೊಂಡು ಬಡವರ ಬದುಕು ಹಸನು ಮಾಡುವ ಮನಸ್ಸು ನಮ್ಮ ಸಮಾಜದಲ್ಲಿ ಕಾಣೆಯಾಗಿದೆ. ಇದರಿಂದ ಇಲ್ಲಿನ ಎಲ್ಲ ಕ್ಷೇತ್ರಗಳ ಹೆಚ್ಚಿನ ಜನರಿಗೆ ದುರಾಸೆಯ ಕಾಯಿಲೆ ಬಂದುಬಿಟ್ಟಿದೆ. ಅದು ನಮ್ಮ ಸಮಾಜದಲ್ಲಿ ಮಾನವೀಯತೆ ಮಾಯವಾಗುವಂತೆ ಮಾಡಿಬಿಟ್ಟಿದೆ. ಇದರಿಂದ ದೇಶವನ್ನು ರಕ್ಷಿಸುವ ಮತ್ತು ಮಾನವೀಯತೆಯ ಅಂತ:ಕರಣವುಳ್ಳ ಸಮಾಜವನ್ನು ರೂಪಿಸುವ ಸವಾಲು ಹಾಗು ಜವಾಬ್ದಾರಿ ಇಂದಿನ ಯುವಪೀಳಿಗೆಗೆ ಇದೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಅವರು ಕರೆ ನೀಡಿದ್ದಾರೆ. ಅವರು ಇಲ್ಲಿನ ಇನೋಳಿಯಲ್ಲಿರುವ ಬ್ಯಾರೀಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಾಲ್ಕನೇ ಪದವಿ ದಿನಾಚರಣೆ ಹಾಗು ಹಳೆ ವಿದ್ಯಾರ್ಥಿಗಳ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

 ಲೋಕಾಯುಕ್ತರಾಗಿ ಕಾರ್ಯನಿರ್ವಹಿಸಿದ ಸಂದರ್ಭದ ಹಲವು ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಹಂಚಿಕೊಂಡು ನ್ಯಾ.ಹೆಗ್ಡೆ ಅವರು ಸಮಾಜದ ದುರ್ಬಲ ವರ್ಗಗಳ ಜನರೆಡೆಗಿನ ಸಂವೇದನೆಯನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಳೆದುಕೊಳ್ಳುತ್ತಿರುವುದು ನಮ್ಮ ದುರಂತವಾಗಿದೆ. ಮತ್ತಷ್ಟು ಬೇಕು, ಇನ್ನಷ್ಟು ಬೇಕು ಎಂಬ ದುರಾಸೆ ನಮ್ಮ ಜನರಿಗೆ ಕುಡಿಯುವ ನೀರನ್ನು ಇಲ್ಲದಂತಹ ಪರಿಸ್ಥಿತಿಯನ್ನು ತಂದಿಟ್ಟಿದೆ. ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಿಲ್ಲದ ನಾವು ಲಕ್ಷ ಕೋಟಿಗಟ್ಟಲೆ ರೂಪಾಯಿಗಳನ್ನು ಭ್ರಷ್ಟಾಚಾರದಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಈ ಭ್ರಷ್ಟ ವ್ಯವಸ್ಥೆಯನ್ನು ಸರಿದಾರಿಗೆ ತರುವುದು ಹಾಗು ಮಾನವೀಯ ಸಮಾಜದ ನಿರ್ಮಾಣ ಮಾಡುವುದು ಇಂದಿನ ಯುವಪೀಳಿಗೆಯ ಕರ್ತವ್ಯವಾಗಿದೆ. ಏಕೆಂದರೆ ನಾವು ಅದರಲ್ಲಿ ವಿಫಲರಾಗಿದ್ದೇವೆ ಎಂದು ಅವರು ಮಾರ್ಮಿಕವಾಗಿ ನುಡಿದರು.

  ಬಿಐಟಿ ಪದವೀಧರರಿಗೆ ಆಹ್ವಾನ ನೀಡಿದ ಫೈಝಲ್ ದುಬೈಯ ಪ್ರತಿಷ್ಠಿತ ಕೆಇಎಫ್ ಹೋಲ್ಡಿಂಗ್ಸ್ ಕಂಪೆನಿಯ ಸ್ಥಾಪಕಾಧ್ಯಕ್ಷ ಫೈಝಲ್ ಕೊಟ್ಟಿಕೊಲ್ಲನ್ ಮಾತನಾಡಿ ಪದವೀಧರರು ಹಣದ ಹಿಂದೆ ಹೋಗಬಾರದು. ನಾನೆಂದಿಗೂ ಹಣದ ಹಿಂದೆ ಹೋಗಲಿಲ್ಲ. ಹಣ ಕೂಡಿಟ್ಟು ಐಶಾರಾಮದ ಬದುಕು ಸಾಗಿಸುವುದು ನಮ್ಮ ಅಂತಿಮ ಉದ್ದೇಶವಾಗಬಾರದು. ನಾವಿರುವ ಸಮಾಜಕ್ಕೆ ಏನಾದರೂ ಹಿಂದಿರುಗಿಸುವ, ಅಲ್ಲಿನ ಜನರ ಬದುಕನ್ನು ಇನ್ನಷ್ಟು ಉತ್ತಮಗೊಳಿಸುವ ಕುರಿತು ಚಿಂತಿಸಬೇಕು ಎಂದು ಹೇಳಿ ತಮ್ಮ ವೃತ್ತಿ ಬದುಕಿನ ಅನುಭವಗಳನ್ನು , ಪ್ರಿಕಾಸ್ಟ್ ನಿರ್ಮಾಣ ಕ್ಷೇತ್ರದಲ್ಲಿ ತಮ್ಮ ಕಂಪೆನಿ ಮಾಡುತ್ತಿರುವ ಯೋಜನೆಗಳ ವಿವರಗಳನ್ನು ಹಂಚಿಕೊಂಡರು. ನನ್ನ ಎಲ್ಲ ಯೋಜನೆಗಳಲ್ಲಿ ನನ್ನ ಪತ್ನಿ ನನ್ನ ಜೊತೆ ತಂಡವಾಗಿ ಕೆಲಸ ಮಾಡಿ ಸಹಕರಿಸುತ್ತಾರೆ ಎಂದು ಅವರು ಹೇಳಿದರು. ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತಮ್ಮ ಕಂಪೆನಿ ಸೇರುವಂತೆ ಆಹ್ವಾನ ನೀಡಿದರು. ಅವರ ಪತ್ನಿ ಶಬಾನಾ ಫೈಝಲ್ ಉಪಸ್ಥಿತರಿದ್ದರು.

ಉದ್ಯಮಿಗಳಾಗಿ : ಪ್ರೊ. ಗೋಪಾಲ್ ಅಗರ್ತಲದ ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್‌ಟೆಕ್ನಾಲಜಿಯ ನಿರ್ದೇಶಕ ಪ್ರೊ. ಗೋಪಾಲ್ ಮುಗೆರಾಯ ಅವರು ಮಾತನಾಡಿ ಬದುಕಿನಲ್ಲಿ ಸಂತಸದಿಂದಿರಬೇಕಾದರೆ ಇತರರು ಯಾಕೆ ಸಂತಸದಿಂದಿದ್ದಾರೆ ಎಂದು ನೋಡಿ ನಾವು ಕಲಿಯಬೇಕು. ಇತರರನ್ನು ದುಖ:ದಲ್ಲಿ ನೋಡಿ ನಾವು ಸಂತಸ ಪಡುವ ಮನೋಸ್ಥಿತಿ ಬೆಳೆಸಿಕೊಳ್ಳಬಾರದು. ಇಂಜಿನಿಯರಿಂಗ್ ಪದವೀಧರರು ಎಲ್ಲರು ಉದ್ಯೋಗ ಕೇಳುವವರಾಗದೆ ಉದ್ಯೋಗ ನೀಡುವ ಉದ್ಯಮಿಗಳಾಗುವತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

 ನಾಗರೀಕ ಸೇವಾ ಪರೀಕ್ಷೆ ಬರೆಯಿರಿ : ಸೈಯದ್ ಬ್ಯಾರಿ
  ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ವೀ 110 ವರ್ಷಗಳನ್ನು ಪೂರೈಸುತ್ತಿರುವ ಬ್ಯಾರೀಸ್ ಗ್ರೂಪ್‌ಗೆ ಸಹಕರಿಸಿದವರನ್ನು ಸ್ಮರಿಸಿದರು. ಯಶಸ್ಸಿಗಾಗಿ ತ್ಯಾಗ ಮಾಡಬೇಕು. ಉದ್ಯೋಗ ಸೃಷ್ಟಿಸುವ ದೂರದೃಷ್ಟಿಯನ್ನು ಪದವೀಧರರು ಬೆಳೆಸಿಕೊಳ್ಳಬೇಕು. ಇಂಜಿನಿಯರಿಂಗ್ ಪದವೀಧರರು ನಾಗರೀಕ ಸೇವಾ ಪರೀಕ್ಷೆಗಳನ್ನು ಎದುರಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.
      ಸಂಸ್ಥೆಯ ಪ್ರಾಂಶುಪಾಲ ಡಾ.ಕೆ.ಪಾಲಕ್ಷಪ್ಪ ಸ್ವಾಗತಿಸಿದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು 110 ವರ್ಷಗಳ ಯಶೋಗಾಥೆಯ ಫಲಕವನ್ನು ನ್ಯಾ.ಸಂತೋಷ್ ಹೆಗ್ಡೆ ಅನಾವರಣಗೊಳಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ರೂಪಿಸಿರುವ ಹೈಬ್ರಿಡ್ ಕಾರಿನಲ್ಲಿ ಫೈಝಲ್ ಕೊಟ್ಟಿಕೊಲ್ಲನ್ ಅವರು ಪ್ರಯಾಣಿಸಿ ಅಭಿನಂದಿಸಿದರು. ಸಂಸ್ಥೆಯ ಸ್ಮರಣ ಸಂಚಿಕೆಯನ್ನು ಪ್ರೊ.ಗೋಪಾಲ್ ಮುಗೆರಾಯ ಬಿಡುಗಡೆ ಮಾಡಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅತಿಥಿಗಳು ಸ್ಮರಣಿಕೆ ನೀಡಿದರು.
  ಟ್ರಸ್ಟಿ ಮಝರ್ ಬ್ಯಾರಿ, ಹಿರಿಯ ಸಲಹೆಗಾರ ಡಾ. ಎಸ್.ಕೆ.ರಾಯ್ಕರ್, ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಬೋಳಿಯಾರ್ ಗ್ರಾ.ಪಂ. ಅಧ್ಯಕ್ಷ ಸತೀಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಡಾ.ಅಝೀಝ್ ಮುಸ್ತಫ ವಂದಿಸಿದರು. ಅಸಿಸ್ಟೆಂಟ್ ಪ್ರೊ. ಮ್ರಣಿಳಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News