ಚುನಾವಣೆಗೆ ಕಾಸರಗೋಡು ಜಿಲ್ಲೆ ಸನ್ನದ್ಧ

Update: 2016-05-15 12:15 GMT

ಕಾಸರಗೋಡು, ಮೇ 15: ರಾಜ್ಯ ವಿಧಾನಸಭಾ ಚುನಾವಣೆ ಸೋಮವಾರ ನಡೆಯಲಿದೆ. ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 9,90,513 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸುವರು. ಬೆಳಗ್ಗೆ 7ರಿಂದ ಸಂಜೆ 6ರ ತನಕ ಮತದಾನ ನಡೆಯಲಿದೆ. ಬಿಸಿಲು ಮತ್ತು ತಾಪಮಾನದ ಹಿನ್ನಲೆಯಲ್ಲಿ ಮತದಾನದ ಅವಧಿಯನ್ನು ಈ ಬಾರಿ ಒಂದು ಗಂಟೆ ಹೆಚ್ಚಿಸಲಾಗಿದೆ.

ಮತದಾನಕ್ಕಾಗಿ ಜಿಲ್ಲೆಯಲ್ಲಿ 799 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ವಿಧಾನಸಭೆ ಚುನಾವಣೆ ಅಂಗವಾಗಿ ಮತಯಂತ್ರ ಸಾಮಗ್ರಿಗಳ ವಿತರಣೆ ಇಂದು ನಡೆದಿದ್ದು, ಆಯಾ ಮತಗಟ್ಟೆಗೆ ತಲುಪಿಸಲಾಗಿದೆ.

ಮಂಜೇಶ್ವರ, ಕಾಸರಗೋಡು, ಉದುಮ ಕ್ಷೇತ್ರಗಳಿಗೆ ಕಾಸರಗೋಡು ಸರಕಾರಿ ಕಾಲೇಜಿನಲ್ಲೂ, ಕಾಞಂಗಾಡು, ತ್ರಿಕ್ಕರಿಪುರ ಕ್ಷೇತ್ರಗಳಿಗೆ ಪಡನ್ನಕ್ಕಾಡು ನೆಹರೂ ಕಾಲೇಜಿನಲ್ಲಿ ಮತಯಂತ್ರ ಮತ್ತಿತರ ಸಾಮಗ್ರಿಗಳ ವಿತರಣೆ ನಡೆಯಿತು.

ಸುಮಾರು 26 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಬಿಗಿ ಭದ್ರತೆಯಲ್ಲಿ ಮತದಾನ ನಡೆಯಲಿದೆ. ಮಹಿಳಾ ಸಿಬ್ಬಂದಿ ಮಾತ್ರ ಇರುವ ಹತ್ತು ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಇದರ ಜೊತೆಗೆ 30 ಮಾದರಿ ಮತಗಟ್ಟೆಗಳು ಕಾರ್ಯಾಚರಿಸಲಿವೆ. ಭದ್ರತೆಗಾಗಿ ಕೇರಳ ಪೊಲೀಸ್ ಅಲ್ಲದೆ ಕೇಂದ್ರ ಪಡೆಯನ್ನು ನಿಯೋಜಿಸಲಾಗಿದೆ.

ನಕಲಿ ಮತದಾನ ತಡೆಯಲು ಎಲ್ಲಾ ರೀತಿಯ ಭದ್ರತೆ ಕಲ್ಪಿಸಲಾಗಿದೆ. ನೂರರಷ್ಟು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 46 ಅಭ್ಯರ್ಥಿಗಳು

ಜಿಲ್ಲೆಯಲ್ಲಿ ಒಟ್ಟು 46 ಅಭ್ಯರ್ಥಿಗಳಿದ್ದಾರೆ. ಮಂಜೇಶ್ವರ 8, ಕಾಸರಗೋಡು 7, ಉದುಮ 10, ಕಾಞಂಗಾಡ್ 12 ಮತ್ತು ತ್ರಿಕ್ಕರಿಪುರದಲ್ಲಿ 9 ಅಭ್ಯರ್ಥಿಗಳಿದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಎಲ್ಡಿಎಫ್ ಹಾಗೂ ಯುಡಿಎಫ್ ಹೊರತುಪಡಿಸಿ ಎನ್‌ಡಿಎ ಒಕ್ಕೂಟವೂ ಪ್ರಬಲ ಸ್ಪರ್ಧೆ ಒಡ್ಡಿರುವುದರಿಂದ ಚುನಾವಣಾ ಕಣ ಕುತೂಹಲ ಮೂಡಿಸಿದೆ.

ಕಳೆದ 60 ವರ್ಷಗಳಿಂದ ಯುಡಿಎಫ್ (ಐಕ್ಯ ಪ್ರಜಾಸತ್ತಾತ್ಮಕ ರಂಗ) ಮತ್ತು ಎಲ್ಡಿಎಫ್ (ಎಡ ಪ್ರಜಾಸತ್ತಾತ್ಮಕ ರಂಗ ) ರಾಜಕೀಯ ಒಕ್ಕೂಟಗಳ ಭದ್ರಕೋಟೆಯಾಗಿದ್ದ ಕೇರಳ ಈ ಬಾರಿ ಎನ್‌ಡಿಎ ಒಳಗೊಂಡಂತೆ ತ್ರಿಕೋನ ಚುನಾವಣಾ ಜಿದ್ದಾಜಿದ್ದಿಗೆ ಸಾಕ್ಷಿಯಾಗುತ್ತಿದೆ. ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ ಮಂಜೇಶ್ವರ ಮತ್ತು ಕಾಸರಗೋಡು ಬಿಜೆಪಿಗೆ ನಿರ್ಣಾಯಕವಾಗಿದೆ. ಬಿಜೆಪಿ ಮಂಜೇಶ್ವರದಲ್ಲಿ ಖಾತೆ ತೆರೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಕಾಸರಗೋಡಿನಲ್ಲೂ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದೆ. ಮುಸ್ಲಿಂ ಲೀಗ್‌ನ ಭದ್ರಕೋಟೆಯಾಗಿದ್ದ ಮಂಜೇಶ್ವರದಲ್ಲಿ 2006 ರಲ್ಲಿ ಸಿಪಿಎಂ ನ ಸಿ.ಎಚ್. ಕುಂಞಂಬು ಗೆಲ್ಲುವ ಮೂಲಕ ಅಚ್ಚರಿ ಹುಟ್ಟಿಸಿದ್ದರು. 2011 ರಲ್ಲಿ ಮತ್ತೆ ಮುಸ್ಲಿಂ ಲೀಗ್ ಈ ಸ್ಥಾನವನ್ನು ಪಡೆದುಕೊಂಡಿತ್ತು.

ಈ ಬಾರಿ ಹಾಲಿ ಶಾಸಕ ಪಿ.ಬಿ. ಅಬ್ದುರ್ರಝಾಕ್, ಸಿಪಿಎಂನಿಂದ ಸಿ.ಎಚ್. ಕುಂಞಂಬು ಮತ್ತು ಬಿಜೆಪಿಯಿಂದ ಕೆ.ಸುರೇಂದ್ರನ್ ಕಣಕ್ಕಿಳಿದಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ಕನ್ನಡಿಗರ ಮತ ಇಲ್ಲಿ ನಿರ್ಣಾಯಕ

ಬಿಜೆಪಿಗೆ ಅವಕಾಶ ಇರುವ ಕಾಸರಗೋಡು ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಕಾಣಿಸುತ್ತಿದೆ. ಕನ್ನಡಿಗ ರವೀ ತಂತ್ರಿ ಕುಂಟಾರನ್ನು ಬಿಜೆಪಿ ಕಣಕ್ಕಿಳಿಸಿದೆ. ಹಾಲಿ ಶಾಸಕ ಎನ್.ಎ. ನೆಲ್ಲಿಕುನ್ನು ಯುಡಿಎನ (ಮುಸ್ಲಿಂ ಲೀ) ಅಭ್ಯರ್ಥಿ. ವೈದ್ಯ ಎ.ಎ. ಅಮೀನ್  ಎಲಡಿಎಫ್  ಘಟಕ ಪಕ್ಷ ಇಂಡಿಯನ್ಯಾಷನಲ್ ಲೀನ (ಐಎಎಲ) ಅಭ್ಯರ್ಥಿಯಾಗಿದ್ದಾರೆ.

ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ಎಲ್ಲ ರೀತಿಯ ತಂತ್ರ, ಪ್ರತಿತಂತ್ರ ಕಾಣಿಸುತ್ತಿದೆ. ಹಾಗಾಗಿ ಇಲ್ಲಿ ಯಾರಿಗೂ ಗೆಲುವು ಸುಲಭವಲ್ಲ. ಆದರೆ ಉದುಮ, ಕಾಞಂಗಾಡ್ ಮತ್ತು ತ್ರಿಕ್ಕರಿಪುರದಲ್ಲಿ ಯುಡಿಎಫ್ ಮತ್ತು ಎಲ್ಡಿಎಫ್ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಇಲ್ಲಿ ಎನ್‌ಡಿಎ ಪ್ರಬಲವಾಗಿಲ್ಲ. ಆದರೆ ಎನ್‌ಡಿಎ ಪಡೆಯುವ ಮತಗಳ ಮೇಲೆ ಎರಡೂ ಪಕ್ಷಗಳ ಸೋಲು  ಗೆಲುವು ನಿರ್ಧರಿಸಲ್ಪಡುತ್ತದೆ. 

ಕಾಸರಗೋಡಿನ ಐದು ಕ್ಷೇತ್ರಗಳ ಅಭ್ಯರ್ಥಿಗಳು

ಮಂಜೇಶ್ವರ

ಪಿ.ಬಿ. ಅಬ್ದುರ್ರಝಾಕ್                  (ಮುಸ್ಲಿಂ ಲೀಗ್  ಯುಡಿಎಫ್)

ಸಿ.ಎಚ್.ಕುಂಞಂಬು                    (ಸಿಪಿಎಂ ಎಲ್ ಡಿಎಫ್ )

ಕೆ. ಸುರೇಂದ್ರನ್                         (ಬಿಜೆಪಿ  ಎನ್ ಡಿ ಎ)

ರವಿಚಂದ್ರ                                 (ಬಿಎಸ್‌ಪಿ)

ಬಶೀರ್ ಅಹ್ಮದ್ ಎಸ್.ಎಂ.             ( ಪಿ ಡಿ ಪಿ)

ಜೋನ್ ಡಿಸೋಜ ಐ.                   (ಪಕ್ಷೇತರ)

 ಮುನೀರ್ ಕೆ.ಪಿ.                         (ಪಕ್ಷೇತರ)

ಕೆ. ಸುಂದರ                               (ಪಕ್ಷೇತರ)

ಕಾಸರಗೋಡು

ಎನ್.ಎ. ನೆಲ್ಲಿಕುನ್ನು                     (ಮುಸ್ಲಿಂ ಲೀಗ್  ಯುಡಿಎಫ್ )

ವಿಜಯಕುಮಾರ್ ಬಿ.                    (ಬಿಎಸ್‌ಪಿ)

ರವೀಶ ತಂತ್ರಿ ಕುಂಟಾರು               (ಬಿಜೆಪಿ  ಎನ್‌ಡಿಎ )

 ಡಾ. ಎ.ಎ. ಅಮೀನ್                   (ಐಎನ್‌ಎಲ್ ಎಲ್ಡಿಎಫ್ )

ಎ. ದಾಮೋದರ                         (ಪಕ್ಷೇತರ)

ಮುನೀರ್ ಮುನಂಬ                     (ಪಕ್ಷೇತರ)

ರೋಶನ್ ಕುಮಾರ್                     (ಪಕ್ಷೇತರ )

ಉದುಮ

ಕೆ. ಕುಂಞಿರಾಮನ್                      (ಸಿಪಿಎಂ  ಎಲ್ಡಿಎಫ್)

 ಕೆ. ಶ್ರೀಕಾಂತ್                            (ಬಿಜೆಪಿ  ಎನ್‌ಡಿಎ)

 ಕೆ .ಸುಧಾಕರನ್                          (ಕಾಂಗ್ರೆಸ್  ಯುಡಿಎಫ್ )

 ಗೋಪಿ ಕುದಿರಕಲ್                       (ಪಿಡಿಪಿ)

ಗೋವಿಂದನ್ ಬಿ.                          (ಎಪಿಐ)

 ಮುಹಮ್ಮದ್ ಪಾಕ್ಯರ್                   (ಎಸ್‌ಡಿಪಿಐ)

ಅಬ್ಬಾಸ್ ಮುದಲಪ್ಪಾರ                  (ಪಕ್ಷೇತರ)

ಕೆ. ಕುಂಞಿರಾಮನ್                       (ಪಕ್ಷೇತರ)

ದಾಮೋದರ ಪಿ.                           (ಪಕ್ಷೇತರ)

ಸುಧಾಕರ                                   (ಪಕ್ಷೇತರ)

ಕಾಂಞಂಗಾಡ್

ಇ. ಚಂದ್ರಶೇಖರನ್                      (ಸಿಪಿಐ  ಎಲ್ಡಿಎಫ್ )

ಧನ್ಯಾ ಸುರೇಶ್                           (ಕಾಂಗ್ರೆಸ್  ಯುಡಿಎಫ್)

ಚಂದ್ರನ್ ಪರಪ್ಪ                           (ಬಿಎಸ್‌ಪಿ )

 ಹುಸೈನಾರ್ ಮುಟ್ಟತ್ತಲ                 (ಪಿಡಿಪಿ )

ಬಾಲಚಂದ್ರ ಕರಿಂಬಿಲ್                   (ಶಿವಸೇನೆ)

ಎಂ.ಪಿ. ರಾಘವನ್                        (ಬಿಡಿಜೆಎಸ್  ಎನ್‌ಡಿಎ )

ರಾಘವನ್ ಬಿ. ಪುಡಂಗಲ್                (ಎಪಿಐ )

ಕೆ.ಯು.ಕೃಷ್ಣ ಕುಮಾರ್                    (ಪಕ್ಷೇತರ)

ಎಂ. ದಾಮೋದರನ್                      (ಪಕ್ಷೇತರ)

ಬಾಲಕೃಷ್ಣ ಕೂಕಲ್                        (ಪಕ್ಷೇತರ)

ಮುಹಮ್ಮದ್ ವಿ.ವಿ.                        (ಪಕ್ಷೇತರ)

ಸಜೀವನ್ ಆರ್.                            (ಪಕ್ಷೇತರ)

ತ್ರಿಕ್ಕರಿಪುರ

ಕೆ.ಪಿ, ಕುಂಞಿಕಣ್ಣನ್                        (ಕಾಂಗ್ರೆಸ್  ಯುಡಿಎಫ್)

ಭಾಸ್ಕರನ್ ಎಂ.                             (ಬಿಜೆಪಿ  ಎನ್‌ಡಿಎ)

 ಎಂ. ರಾಜಗೋಪಾಲ್                     (ಸಿಪಿಎಂ  ಎಲ್ಡಿಎಫ್)

ಸಿ.ಎಚ್. ಮುತ್ತಲಿಬ್                         (ವೆಲ್ಫೇರ್ ಪಾರ್ಟಿ)

ಎಂ.ವಿ. ಶೌಕಾತ್ತಾಲಿ                         (ಎಸ್‌ಡಿಪಿಐ)

ಕೆ .ಪಿ. ಕುಂಞಿಕಣ್ಣನ್                         (ಪಕ್ಷೇತರ)

ಕುಂಞಿಕಣ್ಣನ್ ಪಿ.ಎಂ.                        (ಪಕ್ಷೇತರ)

ಪುರುಷೋತ್ತಮನ್ ಪಿ.ಪಿ.                     (ಪಕ್ಷೇತರ)

ಕೆ.ಎಂ. ಶ್ರೀಧರನ್                             (ಪಕ್ಷೇತರ)

ಯುಡಿಎಫ್‌ನಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್, ಕೇರಳ ಕಾಂಗ್ರೆಸ್ (ಎಂ ), ಜೆಡಿಯು, ಸಿಎಂಪಿ, ಆರ್‌ಎಸ್‌ಪಿ ಮತ್ತು ಕೇರಳ ಕಾಂಗ್ರೆಸ್ ಜೇಕಬ್ ಸೇರಿದಂತೆ ಏಳು ಪಕ್ಷಗಳಿವೆ.

ಎಲ್ಡಿಎಫ್ ಸಿಪಿಎಂ, ಸಿಪಿಐ, ಎನ್‌ಸಿಪಿ, ಜೆಡಿಎಸ್, ಕೇರಳ ಕಾಂಗ್ರೆಸ್ (ಡಿ), ಐಎನ್‌ಎಲ್, ಕೇರಳ ಕಾಂಗ್ರೆಸ್ ಬಿ, ಆರ್‌ಎಸ್‌ಪಿ (ಎಲ್), ಕಾಂಗ್ರೆಸ್ (ಎಸ್), ಕೇರಳ ಕಾಂಗ್ರೆಸ್ (ಎಸ್‌ಟಿ) ಸೇರಿದಂತೆ 11 ಪಕ್ಷಗಳನ್ನು ಹೊಂದಿದೆ.

ಎನ್‌ಡಿಎ ಒಕ್ಕೂಟ ಕೂಡಾ ಈ ಬಾರಿ ಅಸ್ತಿತ್ವಕ್ಕೆ ಬಂದಿದ್ದು, ಬಿಜೆಪಿ, ಬಿಡಿಜೆಎಸ್, ಕೇರಳ ಕಾಂಗ್ರೆಸ್, ಜೆಆರ್‌ಎಸ್ ಮತ್ತು ಕೇರಳ ಕಾಂಗ್ರೆಸ್ ಥೋಮಸ್ ಸೇರಿದಂತೆ ಐದು ಮೈತ್ರಿ ಪಕ್ಷಗಳನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News