ಮಜ್ಲಿಸ್ ಎಜುಪಾರ್ಕ್‌ಗೆ ಶಿಲಾನ್ಯಾಸ ವಿದ್ಯೆ ಮತ್ತು ಜ್ಞಾನ ನಮ್ಮ ಅಮೂಲ್ಯ ಸಂಪತ್ತು: ಎ.ಪಿ.ಉಸ್ತಾದ್

Update: 2016-05-15 13:06 GMT

ಕೊಣಾಜೆ, ಮೇ 15: ಮನುಷ್ಯರು ಸಂಪಾದಿಸುವ ಸಂಪಾದನೆಗಳ ಪೈಕಿ ಅತೀ ಪ್ರಮುಖವಾದ ಸಂಪತ್ತೆಂದರೆ ವಿದ್ಯೆ ಮತ್ತು ಜ್ಞಾನ. ಹಣ ಎಂಬ ಸಂಪತ್ತು ಖರ್ಚು ಮಾಡಿದಷ್ಟು ಕಡಿಮೆಯಾದರೆ ವಿದ್ಯೆ ಎಂಬ ಸಂಪತ್ತು ಖರ್ಚು ಮಾಡಿದಷ್ಟು ಹೆಚ್ಚಾಗುತ್ತಾ ಇತರರಿಗೆ ದಾರಿದೀಪವಾಗಿ ಇಡೀ ಪ್ರಪಂಚವನ್ನು ಬೆಳಗಿಸಲು ಸಾಧ್ಯ. ಇಂದು ರಾಜಕೀಯ ನಾಯಕರೂ ಮಾಡದ ಕೆಲಸವನ್ನು ಧಾರ್ಮಿಕ ಗುರುಗಳು ಧಾರ್ಮಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಮಾಡಿದ್ದಾರೆ. ಇದೇ ರೀತಿಯ ಕೆಲಸವನ್ನು ಮುಡಿಪು ಪ್ರದೇಶದಲ್ಲಿ ಆದೂರು ತಂಙಳ್ ಅವರು ಮಾಡಿದ್ದಾರೆ ಎಂದು ಅಖಿಲ ಭಾರತ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ.ಉಸ್ತಾದ್ ಹೇಳಿದ್ದಾರೆ.

ಮುಡಿಪುವಿನ ಬಾಳೆಪುಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ ಶನಿವಾರ ನಡೆದ ಸುನ್ನೀ ಮಹಾಸಮ್ಮೇಳನ ಕಾರ್ಯಕ್ರಮದಲ್ಲಿ ಮುಡಿಪುವಿನಲ್ಲಿ ನಿರ್ಮಾಣವಾಗಲಿರುವ ಮಜ್ಲಿಸ್ ಎಜುಪಾರ್ಕ್ ಶಿಕ್ಷಣ ಸಂಸ್ಥೆ ಹಾಗೂ ಆಡಿಟೋರಿಯಂಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಸಮಾಜದಲ್ಲಿ ನಾವು ಯಾವುದೇ ಜಾತಿಮತ ಭೇದವಿಲ್ಲದೆ ಸೌಹಾರ್ದತೆಯ ಮೂಲಕ ಜೀವಿಸುವುದರೊಂದಿಗೆ ಎಲ್ಲರೂ ಮತ-ಲೌಖಿಕ ಸಮನ್ವಯ ಶಿಕ್ಷಣವನ್ನು ಎಷ್ಟು ಕಷ್ಟಪಟ್ಟಾದರೂ ಸಂಪಾದಿಸಲು ಮುಂದಾಗಬೇಕು. ಧಾರ್ಮಿಕ ವೌಲ್ಯದ ಶಿಕ್ಷಣದೊಂದಿಗೆ ಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಸ್ಥಾಪನೆಯಾಗುವ ಮಜ್ಲಿಸ್ ಎಜುಪಾರ್ಕ್ ಆದಷ್ಟು ಬೇಗ ನಿರ್ಮಾಣಗೊಂಡು ಇದರ ಸೇವೆ ಜನರಿಗೆ ಲಭಿಸುವಂತಾಗಲಿ ಎಂದು ಹಾರೈಸಿದರು.

ಸಮಾರಂದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಮುಡಿಪು ಪ್ರದೇಶವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಈ ಭಾಗದಲ್ಲಿ ಇಂತಹ ಉತ್ತಮ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗುತ್ತಿರುವುದು ಸಂತಸದ ವಿಚಾರವಾಗಿದೆ ಮತ್ತು ಎಲ್ಲರ ಸಹಕಾರ ಅಗತ್ಯ. ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಎದುರಾಗುವ ಯಾವುದೇ ಸವಾಲು, ಸಮಸ್ಯೆಗಳನ್ನು ಮೆಟ್ಟಿ ನಿಂತು ಅದನ್ನು ಗೆಲ್ಲುವ ಜಾಣ್ಮೆ ನಮ್ಮದಾಗಬೇಕು. ಇಂತಹ ಜಾಣ್ಮೆಯನ್ನು ಮತ್ತು ಮಾನವೀಯ ವೌಲ್ಯವನ್ನು ನಾವು ಶಿಕ್ಷಣದಿಂದ ಪಡೆಯಲು ಸಾಧ್ಯ ಎಂದು ಹೇಳಿದರು.

ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷರಾದ ಶೈಖುನಾ ಅಲಿ ಕುಂಞಿ ಉಸ್ತಾದ್ ಸಮ್ಮೇಳನವನ್ನು ಉದ್ಘಾಟಿಸಿದರು.

ಸ್ವಾಗತ ಸಮಿತಿ ಹಾಗೂ ಮಜ್ಲಿಸ್ ಚೆಯರ್‌ಮೆನ್ ಸೈಯದ್ ಆದೂರು ತಂಙಳ್ ಧ್ವಜಾರೋಹಣಗೈದು ಸಮ್ಮೇಳನಕ್ಕೆ ಚಾಲನೆ ನೀಡಿದರು.

ಕೇರಳ ರಾಜ್ಯದ ಎಸ್‌ವೈಎಸ್ ಅಧ್ಯಕ್ಷ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, ಪಿ.ಎಂ.ಅಬ್ಬಾಸ್ ಉಸ್ತಾದ್ ಮಂಜನಾಡಿ, ದಾರುಲ್ ಇರ್ಶಾದ್ ಅಧ್ಯಕ್ಷ ಮಾಣಿ ಉಸ್ತಾದ್, ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್, ಶಿಹಾಬುದ್ದೀನ್ ತಂಙಳ್ ತಲಕ್ಕಿ, ಬಾಳೆಪುಣಿ ಉಸ್ತಾದ್, ಮಾಂಬಾಟ್ ಸಖಾಫಿ, ಅಶ್ರಫ್ ಸಅದಿ ಮಲ್ಲೂರು, ಮಂಚಿ ಉಸ್ತಾದ್, ವಳವೂರು ಸಅದಿ, ಎಸ್.ಎಚ್.ಉಂಞಿ ಹಾಜಿ, ಎಸ್.ಅಬ್ದುರ್ರಹ್ಮಾನ್ ಇಂಜಿನಿಯರ್, ಮಜ್ಲಿಸ್ ಎಜ್ಯುಪಾರ್ಕ್‌ನ ಕಾರ್ಯಾಕಾರಿ ಅಧ್ಯಕ್ಷ ಎಸ್.ಕೆ.ಖಾದರ್ ಹಾಜಿ, ಸಂತೋಷ್ ಕುಮಾರ್ ಬೋಳಿಯಾರ್, ಪ್ರಶಾಂತ್ ಕಾಜವ, ಬಾವು ಹಾಜಿ ಹಾಗೂ ಉಲಮಾ, ಉಮರಾಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ವಾಗತ ಸಮಿತಿ ಜನರಲ್ ಕನ್ವೀನರ್ ಕೆ.ಇ.ಅಬ್ದುಲ್ ಖಾದಿರ್ ರಝ್ವೀ ಸಾಲೆತ್ತೂರು ಸ್ವಾಗತಿಸಿ, ಸಿದ್ದೀಕ್ ಸಖಾಫಿ ಮೂಳೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News