ಭಾರೀ ಸುಂಟರಗಾಳಿಗೆ ಉಡುಪಿ ಜಿಲ್ಲೆ ತತ್ತರ

Update: 2016-05-15 14:48 GMT

ಉಡುಪಿ, ಮೇ 15: ಇಂದು ನಸುಕಿನ ವೇಳೆ ಮೂರು ಗಂಟೆಗೆ ಸುಮಾರಿಗೆ ಮಳೆಯೊಂದಿಗೆ ಬೀಸಿದ ಭಾರೀ ಸುಂಟರಗಾಳಿ ಹಾಗೂ ಸಿಡಿಲಿಗೆ ಉಡುಪಿ ಜಿಲ್ಲೆಯು ಸಂಪೂರ್ಣ ತತ್ತರಿಸಿ ಹೋಗಿದ್ದು, 100ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. 150ಕ್ಕೂ ವಿದ್ಯುತ್ ಕಂಬಗಳು ಮುರಿದು ಬಿದ್ದು, ಜಾನುವಾರುಗಳು ಸಾವನ್ನಪ್ಪಿದೆ. ಮರಗಳು ರಸ್ತೆಗೆ ಬಿದ್ದು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಕಾರ್ಕಳ ತಾಲೂಕಿನಲ್ಲಿ ಬೀಸಿದ ಭಾರೀ ಸುಂಟರಗಾಳಿಯಿಂದ ಒಟ್ಟು 68 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಸುಮಾರು 6.7ಲಕ್ಷ ರೂ. ನಷ್ಟ ಉಂಟಾಗಿದೆ.

ಹೆಬ್ರಿ ಗ್ರಾಮದಲ್ಲಿ ಬಚಪ್ಪು ಎಂಬಲ್ಲಿ 14 ಮನೆ ಸಹಿತ ಒಟ್ಟು 51, ಮುದ್ರಾಡಿಯಲ್ಲಿ 12, ಶಿವಪುರದಲ್ಲಿ 2, ಕುಕ್ಕೂಂದೂರಿನಲ್ಲಿ 2, ಹಿರ್ಗಾನದಲ್ಲಿ ಒಂದು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಹೆಬ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದ ಮೇಲೆ ಮರ ಬಿದ್ದು ಛಾವಣಿಗೆ ಹಾನಿಯಾಗಿ ಸುಮಾರು 50ಸಾವಿರ ರೂ. ನಷ್ಟವಾಗಿದೆ. ಬೇಳಾಡಿ ಅನುದಾನಿತ ಶಾಲೆಗೆ ಸಿಡಿಲು ಬಡಿದು ಛಾವಣಿ ಭಾಗಶ: ಹಾನಿಯಾಗಿದ್ದು, ವಿದ್ಯುತ್ ವ್ಯವಸ್ಥೆ ಸಂಪೂರ್ಣ ಸುಟ್ಟುಹೋಗಿ ಸುಮಾರು 25ಸಾವಿರ ರೂ. ನಷ್ಟ ಉಂಟಾಗಿದೆ. ಮೆಸ್ಕಾಂ ಹೆಬ್ರಿ ವೃತ್ತದಲ್ಲಿ ಸುಮಾರು 100 ವಿದ್ಯುತ್ ಕಂಬಗಳು ಧರೆ ಉರುಳಿ ಬಿದಿದ್ದು, ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಹಿರ್ಗಾನದ ಚಿಕಾಲ್‌ಬೆಟ್ಟು ಎಂಬಲ್ಲಿ ಸುರೇಶ್ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಗೆ ಭಾಗಶಃ ಹಾನಿಯಾಗಿದ್ದು, ಕೊಟ್ಟಿಗೆಯಲ್ಲಿ ದನ ಹಾಗೂ ಅಂಗಳದಲ್ಲಿದ್ದ ನಾಯಿ ಸತ್ತು ಹೋಗಿದೆ. ಗಾಳಿಯಿಂದಾಗಿ ಹೆಬ್ರಿ- ಮುದ್ರಾಡಿ ರಸ್ತೆಯಲ್ಲಿ ಹಲವು ಮರಗಳು ಬಿದ್ದ ಪರಿಣಾಮ ಸುಮಾರು 8 ಕಿ.ಮೀ.ವರೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ ಅರಣ್ಯ, ಮೆಸ್ಕಾಂ, ಪೊಲೀಸ್ ಇಲಾಖೆಯವರು ಮರಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದರು. ಈ ಎಲ್ಲ ಪ್ರದೇಶಗಳಿಗೆ ಕಾರ್ಕಳ ತಹಶೀಲ್ದಾರ್ ಎಸ್.ರಾಘವೇಂದ್ರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ ನಷ್ಟ ಅಂದಾಜು ನಡೆಸಿದೆ.

ಉಡುಪಿ ತಾಲೂಕು

ಬ್ರಹ್ಮಾವರ, ಬೆಳ್ಮಾರು, ಹಾವಂಜೆ, ಆಲೂರು, ಹೆಗ್ಗುಂಜೆ, ಕೋಟತಟ್ಟು ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದು ನಸುಕಿನ ವೇಳೆ ಮಳೆ ಜೊತೆ ಬೀಸಿದ ಭಾರೀ ಗಾಳಿಗೆ ಸುಮಾರು 34 ಮನೆಗಳಿಗೆ ಹಾನಿಯಾಗಿ 8 ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದೆ.

ಬೆಳ್ಮಾರಿನ ಗೋದು ಪೂಜಾರ್ತಿ ಹಾಗೂ ಮಣಿಪಾಲ ಸರಳಬೆಟ್ಟು ವಾರ್ಡಿನ ವಿಜಯನಗರದ ಕೊರಗ ನಾಯ್ಕ ಎಂಬವರ ಮನೆಯ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದ್ದು, ಒಟ್ಟು 4 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಗೋದು ಪೂಜಾರ್ತಿಯ ಮನೆಗೆ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಪರಿಶೀಲಿಸಿದರು. ಅದೇ ರೀತಿ ಸುಮಾರು ಹಾವಂಜೆಯಲ್ಲಿ ಸಿಡಿಲು ಬಡಿದು ಎತ್ತುವೊಂದು ಸಾವನ್ನಪ್ಪಿದೆ. ಹೆಗ್ಗುಂಜೆ ಸರಕಾರಿ ಶಾಲೆಗೆ ಸಿಡಿಲು ಬಡಿದು ಅಪಾರ ಸೊತ್ತುಗಳು ಹಾನಿಯಾಗಿವೆ.

ಹಲವು ಕಡೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿ ಅಪಾರ ನಷ್ಟ ಸಂಭವಿಸಿದೆ. ಬೆಳ್ಳಂಪಳ್ಳಿಯ ಕಿಟ್ಟ ನಾಯಕ್ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಸಂಪರ್ಕ ಸಂಪೂರ್ಣ ಸುಟ್ಟು ಹೋಗಿ ಸುಮಾರು 15ಸಾವಿರ ರೂ. ನಷ್ಟ ಉಂಟಾಗಿದೆ. ರಮ್ಯಾ ಕಾಮತ್ ಎಂಬವರ ಮನೆಯ ಮೇಲೆ ಮರ ಬಿದ್ದು 40 ಸಾವಿರ ರೂ. ಮತ್ತು ಹೆರ್ಗ ಗ್ರಾಮದ ಶೆಟ್ಟಿಬೆಟ್ಟುವಿನ ಬಡಿಯ ಪಾಣರ ಮನೆಯ ಮರ ಬಿದ್ದು ಅಪಾರ ನಷ್ಟವಾಗಿದೆ. ಕೋಟ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಕೂಡಲೇ ಮರ ತೆರವುಗೊಳಿಸುವ ಕಾರ್ಯ ಮಾಡಲಾಯಿತು. ಈ ಎಲ್ಲ ಪ್ರದೇಶಗಳಿಗೆ ಉಡುಪಿ ತಹಶೀಲ್ದಾರ್ ಗುರುಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಹಾನಿ ಸಂಬಂಧ ತಾಲೂಕು ಕಚೇರಿಯಲ್ಲಿ 24ಗಂಟೆಗಳ ಕಾಲ ಕಾರ್ಯಾಚರಿಸುವಂತೆ ಕಂಟ್ರೋಲ್ ರೂಂನ್ನು ತೆರೆಯಲಾಗಿದೆ. ಇದಕ್ಕೆ ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯ ನಡೆಸಲಾಗುತ್ತದೆ. ಅದೇ ರೀತಿ ಮುಂದಿನ 48ಗಂಟೆಗಳ ಅವಧಿಯಲ್ಲಿ ಭಾರಿ ಮಳೆ,ಗಾಳಿ ಬರುವುದರಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದರು.

ಕುಂದಾಪುರ ತಾಲೂಕು

ತಾಲೂಕಿನಲ್ಲಿ ಸುರಿದ ಮಳೆಗಾಳಿಗೆ ಕೆದೂರು, ಕೋಟೇಶ್ವರ, ಶಿರೂರು, ವಕ್ವಾಡಿ ಗ್ರಾಮಗಳಲ್ಲಿ ಸುಮಾರು 15-20 ಮನೆ ಗಳಿಗೆ ಹಾನಿಯಾಗಿ 50-60ಸಾವಿರ ರೂ. ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಅದೇ ರೀತಿ ಕೆದೂರು ಗ್ರಾಮದ ಚಂದ್ರ ಎಂಬವರಿಗೆ ಸಿಡಿಲು ಬಡಿದು ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಾಲೂಕು ಕಚೇರಿಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News