ಬೆಳ್ತಂಗಡಿ: ಭಾರೀ ಗಾಳಿ, ಮಳೆಯಿಂದ ಹಲವೆಡೆ ಹಾನಿ; ಲಕ್ಷಾಂತರ ರೂ. ನಷ್ಟ

Update: 2016-05-15 15:21 GMT

ಬೆಳ್ತಂಗಡಿ, ಮೇ 15: ಶನಿವಾರ ತಡರಾತ್ರಿ 2:30ರ ಹೊತ್ತಿಗೆ ಹಾಗೂ ರವಿವಾರ ಸಂಜೆಯ ವೇಳೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ತಾಲೂಕಿನ ವಿವಿಧೆಡೆ ಮನೆಗಳು, ತೋಟಗಳು ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ರವಿವಾರ ಸಂಜೆ ವೇಳೆ ಬೀಸಿದ ಭಾರೀ ಗಾಳಿಗೆ ಗೇರುಕಟ್ಟೆ ಸಮೀಪ ಪುರುಷೋತ್ತಮ ಎಂಬವರ ಕೋಳಿಫಾರಂ ಸಂಪೂರ್ಣ ನಾಶಗೊಂಡಿದ್ದು ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ನಾಲ್ಕು ಸಾವಿರ ಕೋಳಿಗಳ ಫಾರಂ ಇದಾಗಿದ್ದು ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಧರೆಗೆ ಉರುಳಿದ್ದು ಅದರಡಿಗೆ ಸಿಲುಕಿ ಕೋಳಿಗಳು ಸಾವನ್ನಪ್ಪಿದ್ದು, ಸುಮಾರು ಒಂಬತ್ತು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಕಟ್ಟದಬೈಲು ನಿವಾಸಿ ಉಮೇಶ್ ಎಂಬವರ ಕೋಳಿ ಫಾರಂಗೂ ಭಾಗಶ ಹಾನಿಯಾಗಿದೆ.

ರೇಶ್ಮೆ ರೋಡ್ ಸಮೀಪ ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದು ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಇದೇ ಪರಿಸರದ ಶ್ರೀಧರ ಅಣ್ಣಿಗೌಡ ಹಾಗೂ ಇತರ ಕೆಲವರ ಮನೆಗಳಿಗೂ ಹಾನಿಯಾಗಿದೆ. ಹಲವರ ಮನೆಯ ಕೊಟ್ಟಿಗೆಗಳಿಗೂ ಹಾನಿಯಾಗಿದೆ. ಇನ್ನೂ ಹಲವೆಡೆ ಹಾನಿಯಾಗಿದ್ದು ಸ್ಪಷ್ಟ ಮಾಹಿತಿಗಳು ಸಿಗಬೇಕಾಗಿದೆ.

ರವಿವಾರ ಬೆಳಗ್ಗಿನ ಜಾವ ಬೀಸಿದ ಗಾಳಿ ಹಾಗೂ ಮಳೆಗೆ 13ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದ್ದು ಅಡಿಕೆ, ರಬ್ಬರು ಮರಗಳು ಧರೆಗುರುಳಿವೆ. ಮಲವಂತಿಗೆ ಗ್ರಾಮದ ಮೂಳೂರು ಹುಕ್ರಪ್ಪ ಪೂಜಾರಿ ಎಂಬವರ ಮನೆಗೆ ಮರ ಬಿದ್ದ ಪರಿಣಾಮ ಗೋಡೆ ಬಿದ್ದು ಮನೆಯೊಳಗೆ ಇದ್ದ ಮಗುವಿಗೆ ಗಾಯಗಳಾಗಿವೆ. ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ ಆಗಿತ್ತು. ಬಂಗಾಡಿ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಬಂಗಾಡಿ ಪ್ರೌಢಶಾಲೆಗೆ ಮರ ಬಿದ್ದು ಹಾನಿಯಾಗಿದೆ. ಮುಕುಂದ ಸುವರ್ಣ ಎಂಬವರ ಅಡಿಕೆ ಮರಗಳು, ಎರ್ಮಳ ಪಳನಿ ಸ್ವಾಮಿ ಎಂಬವರ ಅಡಿಕೆ, ರಬ್ಬರು ಮರಗಳು, ಕೇಶವ ನಾಯ್ಕರ ರಬ್ಬರು, ಅಡಿಕೆ ಮರಗಳು, ಮಥಾ ಪಿ. ಜೆ.ಯವರ ರಬ್ಬರು, ಅಡಿಕೆ ಮರಗಳು, ರಾಮಣ್ಣ ಮೊಲಿಯವರ ರಬ್ಬರು, ಅಡಿಕೆ ಮರಗಳು, ವಿನ್ಸೆಂಟ್ ಸಿ.ಎ. ಅವರ ರಬ್ಬರು ಗಿಡಗಳು ಬಿದ್ದಿದ್ದು ಶೆಡ್‌ಗೆ ಮರ ಬಿದ್ದು ಹಾನಿಯಾಗಿದೆ. ಎಲಿಯಾರ ರಬ್ಬರು ಮರಗಳು, ಅಬ್ದುರ್ರಹ್ಮಾನ್‌ರ ರಬ್ಬರು ಮರಗಳು, ಮೋಂಟ ಅವರ 8 ಕ್ವಿಂ. ಅಡಿಕೆ ಸಂಗ್ರಹಿಸಿದ್ದು ಹಾಳಾಗಿದೆ. ರೋಸಾ ಎಂಬವರಿಗೆ ಸೇರಿದ ಅಡಿಕೆ, ರಬ್ಬರು ಮರಗಳು, ಅಶೊಕ್ ಜೈನ್ ಅವರ ಅಡಿಕೆ ಮರಗಳು, ಸಾಬು ಎಂಬವರಿಗೆ ಸೇರಿದ ರಬ್ಬರು, ಅಡಿಕೆ ಮರಗಳು, ಪ್ರಿನ್ಸ್ ಸೇವಿಯರ್‌ರ ಅಡಿಕೆ, ರಬ್ಬರು ಮರಗಳು, ದೇಜಮ್ಮರ ಅಡಿಕೆ ಮರಗಳು, ಮಜಲು ಪೂವಪ್ಪಗೌಡರ ಅಡಿಕೆ, ರಬ್ಬರು ಮರಗಳು, ಸಂಜೀವ ಪೂಜಾರಿಯವರ ಅಡಿಕೆ ಮರಗಳು ಧರೆಗುರುಳಿವೆ.

ವಿಶ್ವನಾಥ ಗೌಡ, ಸುಂದರ ಗೌಡ, ಹರೀಶ್, ಆನಂದ ಗೌಡ, ಸುಶೀಲಾ, ಚಿದಾನಂದ ಅಜ್ರಿ, ಸೇಸಮ್ಮ, ಎಲಿಯಾ, ವಿನ್ಸೆಂಟ್ ಸಿ.ಎ., ನೆಬಿಸಾ ಬೆದ್ರಬೆಟ್ಟು, ಐತಪ್ಪ ಪಿಲಿಕಜೆ, ಮೋಂಟ ಯಾನೆ ಮೋನಪ್ಪ ಗೌಡ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News