ಮುಳುಗಡೆ ಪ್ರದೇಶಗಳ ಸಮೀಕ್ಷೆಗೆ ಅಧಿಕೃತ ಆದೇಶ: ಸಚಿವ ರೈ

Update: 2016-05-16 09:42 GMT

ಮಂಗಳೂರು, ಮೇ16: ತುಂಬೆ ನೂತನ ಕಿಂಡಿ ಅಣೆಕಟ್ಟಿನ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಅಣೆಕಟ್ಟಿನಲ್ಲಿ 7 ಮೀಟರ್‌ವರೆಗೆ ನೀರು ಸಂಗ್ರಹಿಸಲು ಅವಕಾಶವಿದೆ. ಇದಕ್ಕಾಗಿ ಮುಳುಗಡೆ ಪ್ರದೇಶವನ್ನು ಭೂಸ್ವಾಧಿನ ಪಡಿಸುವ ನಿಟ್ಟಿನಲ್ಲಿ ಸಮೀಕ್ಷೆಗೆ ಸರಕಾರ ಅಧಿಕೃತ ಆದೇಶ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿನ ಸರಕಾರವಿದ್ದಲ್ಲೇ ತುಂಬೆ ಅಣೆಕಟ್ಟಿನ ಕಾಮಗಾರಿ ಆರಂಭಗೊಂಡಿದ್ದರೂ, ಕಾಂಗ್ರೆಸ್ ಸರಕಾರ ಅಧಿಕಾರ ಬಂದ ಮೇಲೆ ಕಾಮಗಾರಿಗೆ ವೇಗ ಸಿಕ್ಕಿ ಹಣ ಬಿಡುಗಡೆಯಾಗಿ ಇದೀಗ ಮುಕ್ತಾಯ ಹಂತದಲ್ಲಿದೆ ಎಂದರು.
ಒಂದು ತಿಂಗಳ ಒಳಗೆ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಳ್ಳಲಿದೆ. ಇದೇ ವೇಳೆ ಹಂತ ಹಂತವಾಗಿ ಮುಳುಗಡೆ ಪ್ರದೇಶವನ್ನು ಭೂಸ್ವಾಧೀನ ಪಡಿಸುವ ಕಾರ್ಯ ನಡೆಯಲಿದೆ. ಸೂಕ್ತ ಪರಿಹಾರ ನೀಡುವಂತೆಯೂ ಸರಕಾರದಿಂದ ಆದೇಶವಾಗಿದೆ ಎಂದು ಅವರು ಹೇಳಿದರು.

ದೇಶದ್ಯಾಂತ ಬರ ಪರಿಸ್ಥಿತಿಯ ನಡುವೆ ದ.ಕ. ಜಿಲ್ಲೆಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ತಾಲೂಕು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಕುದುರೆಮುಖದ ಲಕ್ಯಾಂ ಡ್ಯಾಂನ ನೀರನ್ನು ತರುವಲ್ಲಿಯೂ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ರವರು ಇತ್ತೀಚೆಗೆ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ರೈ, ಈ ಹಿಂದಿನ ವರ್ಷಗಳಂತೆಯೇ ಕಳೆದ ಡಿಸೆಂಬರ್‌ನಲ್ಲೇ ತುಂಬೆ ಅಣೆಕಟ್ಟಿಗೆ ಗೇಟುಗಳನ್ನು ಹಾಕಲಾಗಿತ್ತು. ಅಪಪ್ರಚಾರ ಮಾಡುವ ಉದ್ದೇಶದಿಂದ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಲಾಗಿದ್ದು ಇದು ಸರಿಯಲ್ಲ ಎಂದರು.

ಎಂಆರ್‌ಪಿಎಲ್‌ನಿಂದ ಮತ್ತೆ ಸ್ಥಳೀಯರ ವಿರೋಧದ ನಡುವೆಯೂ ಭೂಸ್ವಾಧೀನ ಕಾರ್ಯ ನಡೆಯುತ್ತಿರುವ ಕುರಿತಾದ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರೈ, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಹಾಗಿದ್ದರೂ ರೈತರ ಭೂಸ್ವಾಧೀನ ಮಾಡಬೇಕಾದರೆ ಅವರು ಅನುಮತಿ ನೀಡಬೇಕೆಂಬ ನಿಟ್ಟಿನಲ್ಲಿ ಯುಪಿಎ ಸರಕಾರವಿದ್ದಾಗಲೇ ಹೊಸ ಭೂಸ್ವಾಧೀನ ಕಾನೂನು ರೂಪಿಸಲಾಗಿತ್ತು. ಅದು ಯುಪಿಎ ಸರಕಾರದ ಕೊಡುಗೆ ಎಂದರು.

ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ರೈ, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಸಹಕಾರ ಮಾತ್ರವೇ ಹೊರತು ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ನೋಡೆಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆ ವಿರುದ್ಧ ಬಿಜೆಪಿ ನಿಲುವಳಿ ಮಂಡಿಸಲಿ: ರೈ

ಎತ್ತಿನಹೊಳೆ ಯೋಜನೆ ಪ್ರಸ್ತುತ ನಡೆಯುತ್ತಿರುವ ಕಾಮಗಾರಿ. ಹಿಂದಿನ ಸರಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ಆ ಸಂದರ್ಭದಲ್ಲೇ ಸಾಧಕ ಬಾಧಕಗಳ ಬಗ್ಗೆ ಮಾತುಕತೆ ಆಗಬೇಕಾಗಿತ್ತು. ದ.ಕ. ಜಿಲ್ಲೆಯಲ್ಲಿ ಈ ಬಗ್ಗೆ ವಿರೋಧ ವ್ಯಕ್ತಪಡಿಸುವ ಬಿಜೆಪಿಯ ನಾಯಕರು, ವಿಧಾನಸಭೆಯಲ್ಲಿ ಯೋಜನೆಯನ್ನು ವಿರೋಧಿಸಿ ನಿಲುವಳಿ ಮಂಡಿಸಲಿ, ಮುಖ್ಯಮಂತ್ರಿ ಜತೆ ನಾನು ಮಾತನಾಡುತ್ತೇನೆ ಎಂದು ಸಚಿವ ರೈ ಬಿಜೆಪಿಗೆ ಮರು ಸವಾಲೆಸೆದಿದ್ದಾರೆ.

ಎತ್ತಿನಹೊಳೆ ಯೋಜನೆ ವಿರೋಧಿಸಿ ಎ. 19ರಂದು ನಡೆಯಲಿರುವ ಬಂದ್ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು ಈ ಹೇಳಿಕೆ ನೀಡಿದರು.

ಕೇವಲ ಜನರನ್ನು ಮೆಚ್ಚಿಸಲು ನಾನು ಮಾತನಾಡವುದಿಲ್ಲ. ಮೈಲೇಜ್‌ಗಾಗಿ ಮಾತನಾಡುವ ರಾಜಕಾರಣಿ ನಾನಲ್ಲ. ಇಲ್ಲಿನ ಮತದಾರರನ್ನು ಮೆಚ್ಚಿಸುವುದು ನನ್ನ ಧರ್ಮ ಅಲ್ಲ. ಬದಲಾಗಿ ನೈಜ ವಿಷಯವನ್ನು ಮಾತನಾಡುವುದು ನನ್ನ ಕರ್ತವ್ಯ. ಇಲ್ಲಿ ವಿರೋಧಿಸಿ ಮಾತನಾಡುವ ಬಿಜೆಪಿಯ ನಾಯಕರು ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಯೋಜನೆ ಮಾಡಿಯೇ ಸಿದ್ಧ ಎಂದು ಹೇಳುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಈ ಸಂದರ್ಭ ಆರೋಗ್ಯ ಸಚಿವ ಯು.ಟಿ. ಖಾದರ್, ಮೇಯರ್ ಹರಿನಾಥ್, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮೂಡ ಅಧ್ಯಕ್ಷ ಇಬ್ರಾಹೀ ಕೋಡಿಜಾಲ್, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲೋಟ್ ಪಿಂಡೋ, ನಾಯಕರಾದ ಸುರೇಶ್ ಬಳ್ಳಾಲ್, ಮುಹಮ್ಮದ್, ಸದಾಶಿವ ಉಳ್ಳಾಲ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News