ಹಿಂದೂ ಸಮಾಜೋತ್ಸವಗಳಿಂದ ಅಸ್ಪಶ್ಯತೆ ದೂರ: ಒಡಿಯೂರು ಶ್ರೀ

Update: 2016-05-16 11:26 GMT

ಸುಳ್ಯ:ಹಿಂದೂ ಸಮಾಜ ಯಾವತ್ತೂ ಹಿಂಸೆಯಿಂದ ದೂರ ಇರುವ ಸಮಾಜ. ಇಂತಹ ಹಿಂದೂ ದೇಶ ಭಾರತವು ತಾನು ಅರಳಿ ಶಾಶ್ವತ ಬೆಳಕನ್ನು ನೀಡುತ್ತಿದೆ. ಈ ಬೆಳಕಿನಡಿಯಲ್ಲಿ ನಾವು ಜಾತಿ, ಭೇದ ಮರೆತು ಹಿಂದೂಗಳು ಒಗ್ಗಾಟ್ಟಾಗಬೇಕು. ಅಲ್ಲಲ್ಲಿ ಇಂತಹ ಹಿಂದೂ ಸಮಾಜೋತ್ಸವ ನಡೆದಾಗ ಅಸ್ಪಶ್ಯತೆ ದೂರವಾಗುತ್ತದೆ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.

 ಅವರು ಅಜ್ಜಾವರ ಗ್ರಾಮದ ಮೇನಾಲದಲ್ಲಿ ನಡೆದ ಹಿಂದೂ ಸದ್ಭಾವನಾ ಸಂಗಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು. ಪ್ರತಿ ಮನೆಮನೆಗಳಲ್ಲಿ ಭಗವಾಧ್ವಜ ಹಾರಾಡಿದಾಗ ಅದರ ಮಹತ್ವ ತಿಳಿದು ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿ ಉಳಿಯುತ್ತದೆ. ಮತ್ತಷ್ಟು ಹಿಂದೂ ಸಮಾಜ ಗಟ್ಟಿಯಾಗಿ ಉಳಿಯುತ್ತದೆ. ಹಿಂದೂ ಧರ್ಮಕ್ಕೆ ಯಾವತ್ತೂ ಹಿನ್ನಡೆಯಿಲ್ಲ. ಹಿಂದೂ ಎನ್ನುವ ಆತ್ಮಶಕ್ತಿ ಜಾಗೃತಿಯಾದಾಗ ನಮ್ಮನ್ನು ಹೆದರಿಸಲು ಬರುವವರಿಗೆ ಬೇರೆ ಆಯುಧವೇ ಬೇಡ. ಆತ್ಮ ಶಕ್ತಿಯೇ ಆಯುಧ ಎಂದು ಒಡಿಯೂರು ಶ್ರೀಗಳು ಹೇಳಿದರು.

  ಬಾಳೆಕೋಡಿ ನೀಲಾಂಜನ ಕ್ಷೇತ್ರದ ಶಶಿಕಾಂತ ಮಣಿ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂ ಧರ್ಮ ಜಾಗೃತಿಗಾಗಿ ಇಂದಿನ ಯುವಪೀಳಿಗೆ ಮುಂದೆ ಬರಬೇಕು. ಇದಕ್ಕಾಗಿ ಎಳವೆಯಿಂದಲೇ ಮಕ್ಕಳಿಗೆ ತಂದೆ-ತಾಯಿಯಂದಿರು ಹಿಂದೂ ಧರ್ಮದ ಮಹತ್ವವನ್ನು ಭೋದನೆ ಮಾಡಬೇಕು. ಆ ಮೂಲಕ ಮುಂದಿನ ತಲೆಮಾರಿಗೂ ಹಿಂದೂ ಧರ್ಮದ ಜಾಗೃತಿ ಉಂಟಾಗುತ್ತದೆ ಎಂದು ಹೇಳಿದರು.

ಎಬಿವಿಪಿ ಮುಖಂಡ ಶಾಶ್ವತ್ ಭಟ್ ಮುಖ್ಯ ಭಾಷಣ ಮಾಡಿದರು. ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗದ ಅಧ್ಯಕ್ಷ ಜಗದೀಶ ಶೇಣವ, ಪುತ್ತೂರಿನ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಡಾ.ಪ್ರಸಾದ್ ಭಂಡಾರಿ, ಭಜರಂಗದಳ ವಿಭಾಗ ಸುರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಅತಿಥಿಗಳಾಗಿ ಭಾಗವಹಿಸಿದರು. ಪ್ರಾರಂಭದಲ್ಲಿ ಪದ್ಮನಾಭ ದಾಸ್ ಅಜ್ಜಾವರ ಶಂಖನಾದದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

  ವೇದಿಕೆಯಲ್ಲಿ ಮೇನಾಲ ಹಿಂದೂ ಸಮಾಜೋತ್ಸವದ ಗೌರವಾಧ್ಯಕ್ಷ ಕೃಷ್ಣಕಾಮತ್, ಅಧ್ಯಕ್ಷ ರಾಮ ಬೇಲ್ಯ, ಸಮಿತಿ ಸಂಚಾಲಕರಾದ ಸುಭೋದ್ ಶೆಟ್ಟಿ ಮೇನಾಲ, ಜಯರಾಜ್ ಕುಕ್ಕೇಟಿ, ಕೋಶಾಧ್ಯಕ್ಷ ಚಂದ್ರಶೇಖರ ಅತ್ಯಾಡಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಉಗ್ರಾಣಿಮನೆ, ಕಮಲಾಕ್ಷ ರೈ ಮೇನಾಲ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಜಿ.ಪಂ.ಮಾಜಿ ಸದಸ್ಯ ನವೀನ್ ಕುಮಾರ್ ಮೇನಾಲ, ಕಮಲಾಕ್ಷ ರೈ ಮೇನಾಲ, ಹಿಂದೂ ಸಂಘಟನೆಯ ಹಿರಿಯ ಮುಖಂಡ ಅಡ್ಡಂತಡ್ಕ ದೇರಣ್ಣ ಗೌಡ, ಎಂ.ಎನ್.ಶ್ರೀ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು. ಸಂಘಟನೆಯ ಮುಖಂಡ ರಾಜೇಶ್ ರೈ ಮೇನಾಲ ಪ್ರಸ್ತಾವನೆಗೈದರು. ಬಾಲಕೃಷ್ಣ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮೊದಲು ಮಂಡೆಕೋಲು ಕಡೆಯಿಂದ ಹಾಗೂ ಸುಳ್ಯದಿಂದ ಮರವಣಿಗೆ ನಡೆಯಿತು.

ಬಿಗು ಬಂದೋಬಸ್ತ್:

  ಮೇನಾಲದ ಹಿಂದೂ ಸದ್ಭಾವನಾ ಸಂಗಮಕ್ಕೆ ಅನುಮತಿ ನಿರಾಕರಿಸಿದ ವಿಚಾರ, ಸಮಾವೇಶ ನಡೆದ ಜಾಗದ ವಿವಾದ, ದರ್ಗಾದ ಸಮೀಪವೇ ಕಾರ್ಯಕ್ರಮ ನಡೆದಿರುವುದು ಹೀಗೆ ಒಂದು ತಿಂಗಳಿನಿಂದ ನಡೆದ ಗೊಂದಲದ ಹಿನ್ನಲೆಯಲ್ಲಿ ಸುಮಾರು ನೂರಕ್ಕಿಂತಲೂ ಅಧಿಕ ಪೊಲೀಸರು ಬಂದೋಬಸ್ತು ನಿರತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News