ಸೌದಿಯಲ್ಲಿ ರಸ್ತೆ ಅಪಘಾತ: ಮೊಂಟೆಪದವಿನ ತಾಯಿ-ಮಗ ಮೃತ್ಯು

Update: 2016-05-16 14:12 GMT

ಕೊಣಾಜೆ, ಮೇ 16: ಸೌದಿ ಅರೇಬಿಯದಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ಮೊಂಟೆಪದವಿನ ನಿವಾಸಿ ಅಬ್ಬಾಸ್ (28) ಎಂಬವರು ಪತ್ನಿ, ತಂದೆ ತಾಯಿಯನ್ನು ಉಮ್ರಾಕ್ಕೆ ಕರೆದುಕೊಂಡು ಹೋಗಿದ್ದು ಆದರೆ ವಿಧಿಯ ಲೀಲೆ ಎಂಬಂತೆ ಉಮ್ರಾ ಮುಗಿಸಿ ವಾಪಸ್ ಬರುತ್ತಿದ್ದಾಗ ಮದೀನದ ಖಸಿಂ ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಬ್ಬಾಸ್ ಹಾಗೂ ಅವರ ತಾಯಿ ಖತೀಜಮ್ಮ ದಾರುಣವಾಗಿ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಅಬ್ಬಾಸ್‌ರ ಪತ್ನಿ ಹಾಗೂ ತಂದೆ ಮುಹಮ್ಮದ್ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಾಲ್ಕು ವರ್ಷದ ಹಿಂದೆ ಸೌದಿ ಅರೇಬಿಯಾದ ಜುಬೈಲ್ ಎಂಬಲ್ಲಿ ಉದ್ಯೋಗಕ್ಕೆ ಸೇರಿದ್ದ ಅಬ್ಬಾಸ್ ಕಳೆದ ನವೆಂಬರ್‌ನಲ್ಲಿ ವಿವಾಹವಾಗಿದ್ದರು. ಬಳಿಕ ಅವರು ವಿದೇಶಕ್ಕೆ ತೆರಳಿದ್ದರು. ಅಲ್ಲಿಂದ ಮೂರು ತಿಂಗಳ ವಿಸಿಟಿಂಗ್ ವೀಸಾದಲ್ಲಿ ಪತ್ನಿ, ಹಾಗೂ ತಂದೆ ತಾಯಿಯನ್ನು ಸೌದಿ ಅರೇಬಿಯಾ ಉಮ್ರಾಕ್ಕೆ ಕರೆದುಕೊಂಡು ಹೋಗುವ ಕನಸನ್ನು ಹೊತ್ತುಕೊಂಡಿದ್ದರು.

ಅದರಂತೆ ಎರಡು ವಾರಗಳ ಹಿಂದೆಯಷ್ಟೇ ಈ ಮೂವರನ್ನೂ ಅಲ್ಲಿಗೆ ಬರುವ ಇನ್ನೊಂದು ಕುಟುಂಬದ ಜೊತೆಗೆ ಸೌದಿ ಅರೇಬಿಯಾಗೆ ಕರೆಸಿಕೊಂಡಿದ್ದರು. ಬಳಿಕ ಈ ನಾಲ್ವರೂ ಉಮ್ರಾ ಕಾರ್ಯ ಮುಗಿಸಿ ಅಲ್ಲಿಂದ ವಾಪಸ್ ಬರುತ್ತಿದ್ದಾಗ ಖಸಿಂ ಬಳಿ ಇವರಿದ್ದ ಕಾರು ಅಪಘಾತಕ್ಕೀಡಾಗಿ ಅಬ್ಬಾಸ್ ಹಾಗೂ ಖತೀಜಬ್ಬ ರಸ್ತೆಗೆಸೆಯಲ್ಪಟ್ಟು ಮೃತಪಟ್ಟಿದ್ದಾರೆ. ಹಾಗೂ ಅವರ ಪತ್ನಿ, ತಂದೆ ಗಾಯಗೊಂಡು ಜುಬೈಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಅಬ್ಬಾಸ್

ಅಬ್ಬಾಸ್ ಮೂವರು ಸಹೋದರಿಯರು ಹಾಗೂ ಒಬ್ಬ ಸಹೋದರರನ್ನು ಹೊಂದಿದ್ದು ಅವರಲ್ಲಿ ಸಹೋದರ ಮಾನಸಿಕವಾಗಿ ಅನಾರೋಗ್ಯ ಪೀಡಿತರಾಗಿದ್ದು ಮನೆಯಲ್ಲೇ ಇದ್ದಾರೆ. ಅಲ್ಲದೆ ಅಬ್ಬಾಸ್‌ರ ತಂದೆ ಮುಹಮ್ಮದ್ ಕೂಡಾ ಅನಾರೋಗ್ಯದಿಂದಿದ್ದರು. ಅಬ್ಬಾಸ್ ಸೌದಿಗೆ ತೆರಳಿದ ನಂತರ ಬಡಕುಟುಂಬಕ್ಕೆ ತಾನೇ ಆಧಾರಸ್ತಂಭವಾಗಿದ್ದರು. ಆದರೆ ವಿಧಿಯ ಲೀಲೆ ಎಂಬಂತೆ ಈ ಕುಟುಂಬ ತಾಯಿ, ಮಗನನ್ನು ಕಳೆದುಕೊಂಡು ಇದೀಗ ದು:ಖದ ಶೋಕಸಾಗರದಲ್ಲಿ ಮುಳುಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News