ಪುತ್ತೂರು: ಬಸ್ಸು ನಿಲ್ದಾಣ ಸಂಪರ್ಕ ರಸ್ತೆ ಅಗಲಗೊಳಿಸಲು ಮನವಿ

Update: 2016-05-16 17:38 GMT

ಜಿಲ್ಲಾ ಕೇಂದ್ರವಾಗಲಿರುವ ಪುತ್ತೂರಿನ ಸಂಚಾರ ವ್ಯವಸ್ಥೆಯ ಹಿತದೃಷ್ಟಿಯಿಂದ ನಗರದ ಹಳೆ ಬಜಾರ್ ಅಂಚೆ ಕಚೇರಿ ಬಳಿಯಿಂದ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ಸು ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯನ್ನು ಅಗಲಗೊಳಿಸುವಂತೆ ಪುತ್ತೂರಿನ ಸಾಮಾಜಿಕ ಜಾಲ ಸಂಘಟನೆ ಯುವ ಭಾರತ್ ಸಹಾಯಕ ಕಮಿಷನರ್‌ಗೆ ಮನವಿ ನೀಡಿದೆ.

ಯುವ ಭಾರತ್‌ನ ಅಡ್ಮಿನ್ ಪ್ರದೀಪ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸೋಮವಾರ ಸಹಾಯಕ ಕಮಿಷನರ್‌ಗೆ ಮನವಿ ನೀಡಲಾಯಿತು. ಹಳೆ ಬಜಾರ್ ಅಂಚೆ ಕಚೇರಿ ಬಳಿಯಿಂದ ಬಸ್ಸು ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯಲ್ಲಿ ಬೆಳಗ್ಗೆ 6 ರಿಂದ ರಾತ್ರಿ 8 ರ ತನಕ ಪ್ರತಿ 3 ನಿಮಿಷಗಳಿಗೊಮ್ಮೆ ಕೆಎಸ್ಸಾರ್ಟಿಸಿ, ಖಾಸಗಿ ಬಸ್ಸುಗಳು ಹಾಗೂ ಟೂರಿಸ್ಟ್ ವಾಹನಗಳು ತೆರಳುತ್ತವೆ.

ಇಲ್ಲಿನ ವಾಹನ ದಟ್ಟಣೆಯ ಪರಿಣಾಮ ಪಾದಚಾರಿಗಳಿಗೆ ಅಪಾಯಕಾರಿ ಪರಿಸ್ಥಿತಿ ನಿರ್ಮಾಣ ಮಾಡಿದೆ. ರಸ್ತೆ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಗರದ ಹೃದಯಭಾಗದಲ್ಲಿರುವ ಮತ್ತು ಗರಿಷ್ಠ ವಾಹನದಟ್ಟಣೆಯಿರುವ ಈ ರಸ್ತೆಯನ್ನು ಅಗಲಗೊಳಿಸುವ ಮೂಲಕ ಅಭಿವೃದ್ಧಿಪಡಿಸುವಂತೆ ಯುವ ಭಾರತ್ ಮನವಿಯಲ್ಲಿ ವಿನಂತಿಸಿದೆ.

ಮನವಿ ಸ್ವೀಕರಿಸಿದ ಪುತ್ತೂರು ಸಹಾಯಕ ಕಮಿಷನರ್ ಡಾ. ರಾಜೇಂದ್ರ ಕೆ.ವಿ., ಈ ಕುರಿತು ಪರಿಶೀಲನೆ ಮಾಡುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು.

ನಿಯೋಗದಲ್ಲಿ ಯುವ ಭಾರತ್‌ನ ದಿನೇಶ್ ಜೈನ್, ಚಿನ್ಮಯಕೃಷ್ಣ, ಮನ್ಮಥ ಮಧ್ಯಸ್ಥ ಮೊದಲಾದವರಿದ್ದರು.

ಇದೇ ಮನವಿಯ ಪ್ರತಿಯನ್ನು ಪುತ್ತೂರು ನಗರಸಭೆಯ ಅಧ್ಯಕ್ಷರಿಗೆ ಮತ್ತು ಪುತ್ತೂರು ನಗರಸಭೆಯ ಪೌರಾಯುಕ್ತರಿಗೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News