ಕುಡಿಯುವ ನೀರು ಪೂರೈಸಲು ಬಂಟ್ವಾಳ ಪುರಸಭೆಯಲ್ಲಿ ಹಣವಿಲ್ಲ!

Update: 2016-05-17 09:08 GMT

ಬಂಟ್ವಾಳ, ಮೇ 17: ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಬೋಳಂಗಡಿ ಪರಿಸರದಲ್ಲಿ ಒಂದು ತಿಂಗಳಿನಿಂದ ಕುಡಿಯಲು ನೀರಿಲ್ಲದೆ ಜನರು ಪರದಾಡುತ್ತಿದ್ದು ಕೂಡಲೇ ಬೋಳಂಗಡಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಲ್ಲಿನ ನಾಗರಿಕರು ಪುರಸಭೆ ಕಚೇರಿಗೆ ಮಂಗಳವಾರ ಬೆಳಗ್ಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಪುರಸಭಾ ವ್ಯಾಪ್ತಿಯಲ್ಲಿ ಬೇಕಾದಷ್ಟು ನೀರಿನ ಮೂಲಗಳಿದ್ದರೂ ಬೋಳಂಗಡಿ ಪರಿಸರದಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ಜನರು ಪರದಾಡುತ್ತಿದ್ದು, ಈ ಬಗ್ಗೆ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಾಧಿಕಾರಿ, ಸ್ಥಳೀಯ ಸದಸ್ಯೆಗೆ ಹಲವಾರು ಬಾರಿ ಮೌಕಿಕವಾಗಿ ಮನವಿ ಮಾಡಲಾಗಿದ್ದರೂ ಅವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹತ್ತು ದಿವಸಗಳ ಹಿಂದೆ ಬೋಳಂಗಡಿ ಪರಿಸರದಲ್ಲಿ ಬೋರ್‌ವೆಲ್‌ವೊಂದನ್ನು ಕೊರೆಸಲಾಗಿದ್ದು ಅದರಲ್ಲಿ ಮೂರು ಇಂಚಿ ನೀರಿದ್ದರೂ ಈವರೆಗೆ ಅದಕ್ಕೆ ಪಂಪ್ ಅಳವಡಿಸಿಲ್ಲ. ಈ ಬಗ್ಗೆ ವಿಚಾರಿಸಿದಾಗ ಪಂಪ್ ಅಳವಡಿಸಲು ಪುರಸಭೆಯಲ್ಲಿ ಹಣದ ಕೊರತೆಯಿದೆ ಎಂದು ಅಧ್ಯಕ್ಷರು ಮತ್ತು ಎಂಜಿನಿಯರ್ ತಿಳಿಸಿದ್ದಾರೆ ಎಂದು ಆರೋಪಿಸಿದ ಧರಣಿ ನಿರತರು, ನೀರಿನ ಸಮಸ್ಯೆಯ ತರ್ತು ಪರಿಹಾರಕ್ಕೆ 45 ದಿನಗಳಲ್ಲಿ ಖರ್ಚು ಮಾಡಲೆಂದು ಸರಕಾರದಿಂದ ಪುರಸಭೆಗೆ 23 ಲಕ್ಷ ರೂ. ಅನುದಾನ ಬಂದಿದೆ ಎಂದು ಮುಖ್ಯಾಧಿಕಾರಿಯೇ ತಿಳಿಸಿದ್ದಾರೆ.

ಇದೀಗ ಪಂಪ್ ಅಳವಡಿಸಲು ಹಣವಿಲ್ಲ ಎಂದು ಅಧ್ಯಕ್ಷರು ಮತ್ತು ಎಂಜಿನಿಯರ್ ಹೇಳುತ್ತಿದ್ದಾರೆ. ಸರಕಾರದಿಂದ ಬಂದ ಹಣ ಎಲ್ಲಿ ಹೋದವು ಎಂದು ಪ್ರಶ್ನಿಸಿದರು. ಪುರಸಭಾ ಮುಖ್ಯಾಧಿಕಾರಿ ಮಂಗಳೂರಿನಲ್ಲಿ ಸಭೆಯೊಂದರಲ್ಲಿ ಇದ್ದ ಕಾರಣ ಧರಣಿ ನಿರತರು ಪುರಸಭಾ ಎಂಜಿನಿಯರ್‌ರೊಂದಿಗೆ ತಮ್ಮ ಸಮಸ್ಯೆಯನ್ನು ವಿವರಿಸುತ್ತಿದ್ದ ವೇಳೆ ಅವರು ಕಚೇರಿಯಿಂದ ಹೊರ ನಡೆದರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಧರಣಿಕಾರರು ಅವರನ್ನು ಹಿಂಬಾಲಿಸಿ ಇನ್ನಷ್ಟು ತರಾಟೆಗೆ ತೆಗೆದುಕೊಂಡರು. ಯಾವುದೇ ರೀತಿಯಲ್ಲದರೂ ಸರಿ ತಕ್ಷಣದಿಂದಲೇ ಬೋಳಂಗಡಿ ಪರಿಸರಕ್ಕೆ ಕೂಡಲೇ ಕುಡಿಯುವ ನೀರು ಪೂರೈಸಬೇಕು. ಶುಕ್ರವಾರದೊಳಗಾಗಿ ಬೋರ್‌ವೆಲ್‌ಗೆ ಪಂಪ್ ಅಳವಡಿಸಿ ಅದರಿಂದ ನೀರು ಪೂರೈಸಬೇಕು. ಕುಡಿಯುವ ನೀರು ಪೂರೈಸಲು ಪುರಸಭೆಯಲ್ಲಿ ಹಣವಿಲ್ಲದಿದ್ದರೆ ನಾವೇ ಹಣ ನೀಡುತ್ತೇವೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಧರಣಿ ನಿರತರು ಪುರಸಭೆ ಕಚೇರಿ ಮುಂದೆ ಟವಾಲೊಂದನ್ನು ಹಾಕಿ ಹಣ ಸಂಗ್ರಹಿಸಿ ಗಮನ ಸೆಳೆದರು.

ಸ್ಥಳಕ್ಕೆ ಬಾರದ ಅಧ್ಯಕ್ಷ, ಸದಸ್ಯರು: ಕುಡಿಯುವ ನೀರಿಗಾಗಿ ಪುರಸಭೆ ಎದುರು ಧರಣಿ ನಡೆಸುತ್ತಿದ್ದ ಪಾಣೆಮಂಗಳೂರು ಬೋಳಂಗಡಿ ನಿವಾಸಿಗಳು ತಮ್ಮ ಸಮಸ್ಯೆ ಆಳಿಸಲು ಸ್ಥಳಕ್ಕೆ ಬಾರುವಂತೆ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಮತ್ತು ಸ್ಥಳೀಯ ಸದಸ್ಯೆ ಜಸಿಂತರವರಿಗೆ ಮೊಬೈಲ್ ಫೋನ್ ಮೂಲಕ ಕರೆ ಮಾಡಿ ಹೇಳಿದರೂ ಅವರು ಸ್ಥಳಕ್ಕೆ ಬಂದಿಲ್ಲ. ಇದರಿಂದ ಆಕ್ರೋಶಗೊಂಡ ಧರಣಿನಿರತರು ಅಧ್ಯಕ್ಷರು ಸ್ಥಳಕ್ಕೆ ಬಾರುವವರೆಗೆ ಇಲ್ಲಿಂದ ಕದಡುವುದಿಲ್ಲ ಎಂದು ಪಟ್ಟು ಹಿಡಿದು ಪುರಸಭೆ ಎದುರು ಕುಳಿತರು.

ಕೊನೆಗೆ ಸ್ಥಳಕ್ಕೆ ಬಂದ ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಗುರುವಾರದಂದು ಬೋರ್‌ವೆಲ್‌ಗೆ ಪಂಪ್ ಅಳವಡಿಸಿ ಕೊಡಲಾಗುವುದು. ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷರ ಭರವಸೆಯ ಹಿನ್ನೆಲೆಯಲ್ಲಿ ಧರಣಿ ಕೈಬಿಟ್ಟ ನಾಗರಿಕರು ಶುಕ್ರವಾದೊಳಗೆ ಬೋರ್‌ವೆಲ್‌ಗೆ ಪಂಪ್ ಅಳವಡಿಸಿ ಕುಡಿಯುವ ನೀರು ಪೂರೈಸದಿದ್ದರೆ ಶನಿವಾರದಂದು ಮತ್ತೆ ಪುರಸಭೆಗೆ ಮುತ್ತಿಗೆ ಹಾಕಿ ಬೀಗ ಜಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಊರಿನ ಪ್ರಮುಖರಾದ ಮುಹಮ್ಮದ್, ಮುಸ್ತಫಾ ಎಂ.ಎಚ್., ಖಾಸಿಮ್ ಚಂದಾಡಿ, ಹೈದರ್ ಬೋಳಂಗಡಿ, ಬಶೀರ್ ಗೋಡೇಲ್, ಅನ್ಸಾರ್, ದಯಾನಂದ, ಆದಂ, ದೇವದಾಸ, ಹೊನ್ನಮ್ಮ, ಸುಜಾತಾ, ಅವ್ವಮ್ಮ, ಕಲ್ಯಾಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News