ಮೇ 19ರ ಜಿಲ್ಲಾಬಂದ್‌ಗೆ ಬೆಂಬಲ ನೀಡುವಂತೆ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಮನವಿ

Update: 2016-05-17 11:42 GMT

ಮಂಗಳೂರು, ಮೇ 17:ಎತ್ತಿನ ಹೊಳೆ ಯೋಜನೆ ಸ್ಥಗಿತಗೊಳಿಸಲು ಆಗ್ರಹಿಸಿ ಮೇ 19ರಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಏಕದಿನ ಬಂದ್ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ನೇತ್ರಾವತಿ ನದಿ ನೀರಿನ ಸಂರಕ್ಷಣೆಗಾಗಿ ಹೋರಾಡುತ್ತಿರುವ ವಿವಿಧ ಸಂಘಟನೆಗಳು ಮೇ 19ರ ಬಂದ್‌ಗೆ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಮೇ 16ರಂದು ನಗರದಲ್ಲಿ ನಡೆದ ಜಾಥಕ್ಕೆ ಹೆಚ್ಚಿನ ಜನರು ಜಾತ್ಯತೀತವಾಗಿ ಸಹಕಾರ ನೀಡಿದ್ದಾರೆ. ಆದರೂ ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಹೋರಾಟಗಾರರ ಜೊತೆ ಮಾತುಕತೆ ನಡೆಸುವ ಆಸಕ್ತಿ ತೋರಿಲ್ಲ.

ಹಿಂದೆ ವಿಜಯ ದಶಮಿಯಂದು ಮುಖ್ಯಮಂತ್ರಿ ಮಾತುಕತೆಗೆ ದಿನ ನಿಗದಿ ಪಡಿಸಿದ್ದರು. ಆದರೆ ಆ ದಿನ ಹಬ್ಬದ ದಿನವಾದ್ದರಿಂದ ಪಾಲ್ಗೊಳ್ಳಲು ಸಾಧ್ಯವಿಲ್ಲ, ಬೇರೆ ದಿನ ನಿಗದಿಪಡಿಸಲು ಕೋರಿದ್ದರೂ ಈ ಬಗ್ಗೆ ಸರಕಾರದ ವತಿಯಿಂದ ಇದುವರೆಗೆ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ವಿಜಯ ಕುಮಾರ್ ಶೆಟ್ಟಿ ತಿಳಿಸಿದರು.

ಐಐಟಿಯ ನಿವೃತ್ತ ಪ್ರೊಫೆಸರ್ ರಾಮಚಂದ್ರನ್ ಈ ಯೋಜನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಇದೊಂದು ಫಲಪ್ರದ ಯೋಜನೆಯಲ್ಲ ಎಂದಿದ್ದಾರೆ.ಎನಐಟಿಕೆಯ ನಿವೃತ್ತ ಪ್ರೊಫೆಸರ್ ಎಸ್.ಜಿ.ಮಯ್ಯ ಈ ಯೋಜನೆಯಿಂದ ನೇತ್ರಾವತಿ ನದಿ ಪಾತ್ರದ ಜನರ ಮೇಲಾಗುವ ಸಮಸ್ಯೆಯ ಬಗ್ಗೆ ತಿಳಿಸಿ ಯೋಜನೆಯನ್ನು ವಿರೋಧಿಸಿದ್ದರೂ ಸರಕಾರ ಈ ಅಭಿಪ್ರಾಯಗಳನ್ನು ಸ್ವೀಕರಿಸದೆ ಯೋಜನೆಯನ್ನು ಮುಂದುವರಿಸಲು ಹೊರಟಿರುವುದು ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಾರಕವಾದ ಯೋಜನೆಯಾಗಿದೆ ಎಂದು ವಿಜಯ ಕುಮಾರ್ ಶೆಟ್ಟಿ ತಿಳಿಸಿದರು.

ಸಮಿತಿಯ ಪದಾಧಿಕಾರಿಗಳಾದ ಸತ್ಯಜಿತ್ ಸುರತ್ಕಲ್, ಶಶಿರಾಜ್ ಶೆಟ್ಟಿ ಕೊಳಂಬೆ, ದಿನಕರ ಶೆಟ್ಟಿ, ಎಂ.ಜಿ.ಹೆಗ್ಡೆ, ಯೋಗೀಶ್ ಶೆಟ್ಟಿ ಜೆಪ್ಪು, ರಘುವೀರ ಸೂಟರ್ ಪೇಟೆ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಖಾದರ್, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News