ಮೇ 20ರಂದು ವಿವೇಕಾನಂದ ಕಾಲೇಜ್‌ನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ

Update: 2016-05-17 12:53 GMT

ಪುತ್ತೂರು, ಮೇ 17: ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯ, ವಿವೇಕಾನಂದ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಕಿಸಾನ್ ಸಂಘ ಪುತ್ತೂರು ಶಾಖೆಯ ಸಹಯೋಗದಲ್ಲಿ ‘ಕುಮ್ಕಿ ಭೂಮಿ’ ವಿಚಾರದಲ್ಲಿ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಮೇ 20ರಂದು ವಿವೇಕಾನಂದ ಕಾನೂನು ಕಾಲೇಜ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜ್‌ನ ಪ್ರಾಂಶುಪಾಲ ಕೆ.ಜೆ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರ ಗೋಷ್ಠಿಯನ್ನು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ವಿ.ವಿ.ಭಟ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಬಾಬು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ವಿಚಾರ ಸಂಕಿರಣದಲ್ಲಿ ಕಿಸಾನ್ ಸಂಘದ ಸಂಚಾಲಕ ಎಂ.ಜಿ. ಸತ್ಯನಾರಾಣ ‘ಕುಮ್ಕಿಭೂಮಿ ಹಕ್ಕು-ಬೆಳವಣಿಗೆಗಳು’, ವಕೀಲರಾದ ಶಂಕರ ಎಸ್. ಭಟ್ ‘ಸೊಪ್ಪಿನ ಬೆಟ್ಟ ಕಾನೂನು’, ವಕೀಲ ಕೆ.ಪಿ. ಬಾಲಸುಬ್ರಹ್ಮಣ್ಯ ‘ಜಮ್ಮಾ ಮತ್ತು ಬಾಣೆ ಕಾನೂನು’, ಕೆ.ಆರ್. ಆಚಾರ್ಯ ‘ಕುಮ್ಕಿ ಕಾನೂನು ಮತ್ತು ತಿದ್ದುಪಡಿಯ ವಿಶ್ಲೇಷಣೆ’ ಕುರಿತು ಗೋಷ್ಠಿ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಕುಮ್ಕಿ ಪ್ರಕರಣದ ಪ್ರತ್ಯಕ್ಷ, ಕಲ್ಪಿತ ನ್ಯಾಯಾಲಯದ ಕಲಾಪ ನಡೆಯಲಿದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ಸಂಶೋಧನಾ ಕೇಂದ್ರದ ಸಂಚಾಲಕ ಡಾ. ವಿಘ್ನೇಶ್ವರ ವರ್ಮುಡಿ, ಕಿಸಾನ್ ಸಂಘದ ಜಿಲ್ಲಾ ಸಂಚಾಲಕ ರಾಮಚಂದ್ರ ನೆಕ್ಕಿಲು, ವಿವೇಕಾನಂದ ಕಾನೂನು ಕಾಲೇಜ್‌ನ ಸಂಚಾಲಕ ಸಂತೋಷ್ ಬೋನಂತಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News