4ನೆ ತರಗತಿಯ ಡ್ರಾಪ್ ಔಟ್, ಕುರ್ ಆನ್ "ಹಾಫಿಝ್" ಈಗ ಎಸೆಸೆಲ್ಸಿ ಪಾಸ್

Update: 2016-05-18 12:31 GMT

ಮಂಗಳೂರು, ಮೇ 18: ಪ್ರಾಥಮಿಕ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ತ್ಯಜಿಸಿದ ಹಾಫಿಝ್ ಗಳಿಬ್ಬರು ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ನಡುವೆ ಈ ಇಬ್ಬರೂ ಪ್ರತಿಭಾವಂತರು ಕುರ್ ಆನ್ ಕಂಠಪಾಢ ಮಾಡಿ "ಹಾಫಿಝ್" ಕೂಡ ಆಗಿರುವುದು ವಿಶೇಷ.

4ನೆ ತರಗತಿ ಕಲಿತಿರುವ ಎಂ. ಇಲ್ಯಾಸ್ ಹಾಗೂ 5ನೆ ತರಗತಿ ಕಲಿತ ಅಹ್ಮದ್ ರಹ್ ಮಿ  ಇದೀಗ ನಗರದ ಸ್ಟೇಟ್ ಬ್ಯಾಂಕ್ ಹತ್ತಿರವಿರುವ ನ್ಯಾಷನಲ್ ಟ್ಯುಟೋರಿಯಲ್ಸ್ ನಲ್ಲಿ ಒಂದು ವರ್ಷದಲ್ಲಿ  ಹತ್ತನೇ ತರಗತಿ ಪಾಠ ಕಲಿತು ನೇರವಾಗಿ ಎಸೆಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. 

ಅಹ್ಮದ್ ರಹ್ ಮಿ ಮತ್ತು  ಇಲ್ಯಾಸ್ ಅವರು ಮೊದಲ ಪ್ರಯತ್ನದಲ್ಲೇ ಕ್ರಮವಾಗಿ 429 ಮತ್ತು 303 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ. 

ರಹ್ ಮಿ ಕನ್ನಡದಲ್ಲಿ 109, ಇಂಗ್ಲಿಷ್ ನಲ್ಲಿ 84 ಹಾಗೂ ಹಿಂದಿಯಲ್ಲಿ 86 ಅಂಕಗಳನ್ನು ಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಯು,ಎಚ್. ಖಾಲಿದ್ ಉಜಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೂಲಿ ಕಾರ್ಮಿಕ ದಂಪತಿ ಮುನವ್ವರ್ ಪಾಶ ಮತ್ತು ಮರ್ಯಮ್ ರ ಪುತ್ರನಾದ ಇಲ್ಯಾಸ್ ಕಣ್ಣೂರಿನಲ್ಲಿ ಧಾರ್ಮಿಕ ವಿದ್ಯಾಭ್ಯಾಸ ದಲ್ಲಿ ಕುರ್ ಆನ್ ಹಾಫಿಝ್ ಆಗಿದ್ದು, ಮಂಗಳೂರಿನ ನ್ಯಾಷನಲ್ ಟ್ಯುಟೋರಿಯಲ್ಸ್ ನ ನೆರೆವು ಪಡೆದು 2015-16 ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. 

ಕೇರಳ ಕಣ್ಣೂರಿನಲ್ಲಿ ಧಾರ್ಮಿಕ ಕೇಂದ್ರದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವುದಾಗಿ ಇಲ್ಯಾಸ್ "ವಾರ್ತಾಭಾರತಿ" ಗೆ ತಿಳಿಸಿದ್ದಾರೆ. 

ಸಮಾಜಸೇವಕ, ಪೋರ್ಟ್ ವಾರ್ಡ್ ನ ಮಾಜಿ ಕಾರ್ಪೊರೇಟರ್ ಅಬ್ದುಲ್ ಹಕೀಮ್ ಮತ್ತು ಖೈರುನ್ನಿಸರ ಪುತ್ರ ಅಹ್ಮದ್ ರಹ್ ಮಿ  ಬಂದರಿನ ಕೇಂದ್ರ ಜುಮಾ ಮಸೀದಿಯಲ್ಲಿ ಹಾಫಿಝ್ ಕಲಿಕೆಗೆ ಸೇರಿದ್ದು ದಾರುಲ್ ಇರ್ಷಾದ್ ಮಾಣಿಯಲ್ಲಿ ಪೂರ್ಣಗೊಳಿಸಿದ್ದಾರೆ. 

ಮುಂದೆ ಧಾರ್ಮಿಕ ವಿದ್ಯಾಭ್ಯಾಸದೊಂದಿಗೆ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಂದುವರಿಸುತ್ತೇನೆ. ಉದ್ಯಮಿಯಾಗುವ ಆಸೆ ಇದೆ ಎಂದು  ಅಹ್ಮದ್ ರಹ್ ಮಿ "ವಾರ್ತಾ ಭಾರತಿ"ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News