ಆರ್ಥಿಕ ಸಂಕಷ್ಟದಲ್ಲಿದ್ದ ಹೃದ್ರೋಗಿಗೆ ಇಂಡಿಯಾನ ಆಸ್ಪತ್ರೆಯಲ್ಲಿ ದಾನಿಗಳ ನೆರವಿನಿಂದ ಎಐಸಿಡಿ ಜೀವರಕ್ಷಕ ಸಾಧನ ಅಳವಡಿಕೆ

Update: 2016-05-18 11:57 GMT

        ಮಂಗಳೂರು.ಮೆ.18:ಆರ್ಥಿಕ ಸಂಕಷ್ಟದಲ್ಲಿದ್ದ ಹೃದ್ರೋಗಿಯೊಬ್ಬರಿಗೆ ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಐದು ಲಕ್ಷ ರೂ ವೆಚ್ಚದ ಜೀವ ರಕ್ಷಕ ಸಾಧನವನ್ನು ದಾನಿಗಳ ನೆರವಿನಿಂದ ಉಚಿತವಾಗಿ ಪ್ರಯೋಜಿಸಿದೆ .ಚಿಕಿತ್ಸೆ ಪಡೆದು ಭಟ್ಕಳದ ಜೈಲಾನಿ ಖರೂರಿ ಚೇತರಿಸಿಕೊಂಡಿದ್ದಾರೆ ಎಂದು ಇಂಡಿಯಾನ ಆಸ್ಪತ್ರೆಯ ಹೃದ್ರೋಗ ತಜ್ಞ ಮತ್ತು ಆಡಳಿತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

                   ಭಟ್ಕಳದ ನ್ಯೂ ಕಾಲನಿಯ ನಿವಾಸಿ ಜೈಲಾನಿ ಖರೂರಿ ಹೃದಯ ರೋಗದ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಇಂಡಿಯಾನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು.ಜೈಲಾನಿ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದು ಇದ್ದಕ್ಕಿದ್ದಂತೆ ಹೃದಯದ ಬಡಿತ ಗರಿಷ್ಟ ಮಿತಿಯನ್ನು ದಾಟಿ ಮುಂದುವರಿಯುವ ಸಮಸ್ಯೆ ಎದುರಿಸುತ್ತಿದ್ದರು.ಇದರಿಂದ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗುವ ಮತ್ತು ಸಾವಿಗೀಡಾಗುವ ಸಾಧ್ಯತೆ ಅರಿ ಇಂಡಿಯಾನ ಆಸ್ಪತ್ರೆಯ ವೈದ್ಯರು ಇದಕ್ಕಾಗಿ ಜೀವ ರಕ್ಷಕ ಸಾಧನ ಎಐಸಿಡಿಯನ್ನು ದೇಹದ ಒಳಗಡೆ ಅಳವಡಿಸಿಕೊಳ್ಳಲು ರೋಗಿಗೆ ಸಲಹೆ ನೀಡಿದರು.ಆದರೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಖರೂರಿ ಕುಟುಂಬ ಅಷ್ಟು ಹಣ ಇಲ್ಲ ಎಂದು ಕೈ ಚೆಲ್ಲಿತು.ಈ ಸಂದರ್ಭದಲ್ಲಿ ರೋಗಿಯ ಕುಟುಂಬಕ್ಕೆ ಧೈರ್ಯ ಹೇಳಿ ಇಂಡಿಯಾನ ಆಸ್ಪತ್ರೆಯ ಡಾ.ಯೂಸುಫ್ ಕುಂಬ್ಳೆ,ಡಾ.ಅಬ್ದುಲ್ ಮನ್ಸೂರ್ ಹಾಗೂ ಡಾ.ಶಿವ ಶಂಕರ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿ,ವೈದ್ಯರ ತಂಡ ದಾನಿಗಳ ನೆರವನ್ನು ಯಾಚಿಸಿತು.ಈ ಸಂದರ್ಭದಲ್ಲಿ ಜೈಲಾನಿಯವರ ಚಿಕಿತ್ಸೆಗೆ ಉದ್ಯಮಿ ಅರ್ಶದ್ ಮೋಹ್ತೆ ಶ್ಯಾಂ ಮತ್ತು ಇಸ್ಭುಲ್ ಬಟ್ಭುಲ್ ಆರ್ಥಿಕ ಸಹಾಯ ನೀಡಲು ಮುಂದೆ ಬಂದ ಕಾರಣ ಆರ್ಥಿಕ ಸಂಕಷ್ಟದಲ್ಲಿರುವ ರೋಗಿಗೆ ಸಕಾಲದಲ್ಲಿ ಜೀವ ರಕ್ಷಕ ಸಾಧನವನ್ನು ಉಚಿತವಾಗಿ ಅಳವಡಿಸಲು ಸಾಧ್ಯವಾಯಿತು.ಅಪರೂಪದ ಈ ರೀತಿಯ ಕಾಯಿಲೆಯಿಂದ ಬಳಲುವ ರೋಗಿಗಳು ಸರಕಾರದ ವಿವಿಧ ಉಚಿತ ಆರೋಗ್ಯ ಯೋಜನಾ ಸೌಲಭ್ಯದಲ್ಲೂ ಒಳಪಡದೆ ಇರುವುದರಿಂದ ಆರ್ಥಿಕ ಸಂಕಷ್ಟದಲ್ಲಿರುವ ರೋಗಿಗಳು ಈ ಜೀವ ರಕ್ಷಕ ಸಾಧನವನ್ನು ಅಳವಡಿಸಲು ಸಾಧ್ಯವಾಗದೆ ಚಿಕಿತ್ಸೆ ಬೇಡ ಎಂದು ನಿರಾಕರಿಸುತ್ತಾರೆ.ಈ ಬಗ್ಗೆ ಜನ ಜಾಗೃತಿ ಮೂಡಿದಾಗ ಇಂತಹ ಚಿಕಿತ್ಸೆಗೆ ಸಹಾಯ ನೀಡಲು ಸರಕಾರ,ಸಂಘ ಸಂಸ್ಥೆಗಳು ಮುಂದೆ ಬಂದರೆ ಆರ್ಥಿಕ ಸಂಕಷ್ಟದಲ್ಲಿರುವ ಸಾಕಷ್ಟು ರೋಗಿಗಳಿಗೆ ಹಲವು ರೋಗಿಗಳ ಜೀವ ಉಳಿಸಬಹುದು ಎಂದು ಯೂಸುಫ್ ಕುಂಬ್ಳೆ ತಿಳಿಸಿದರು.

ಈ ಜೀವ ರಕ್ಷಕ ಸಾಧನ ದೇಹದ ಒಳಗೆ ಅಳವಡಿಸಿದ ಬಳಿಕ ಹೃದ್ರೋಗಿಯ ಹೃದಯದ ಬಡಿತ ಇದ್ದಕ್ಕಿದ್ದಂತೆ ಗರಿಷ್ಟ ಮಟ್ಟವನ್ನು ಮೀರಿದಾಗ ಸ್ವಯಂ ಚಾಲಿತವಾಗಿ ದೇಹದ ಒಳಗೆ ಹೃದಯದ ಬಡಿತವನ್ನು ನಿಯಂತ್ರಿಸುವ ವ್ಯವಸ್ಥೆ ಹೊಂದಿರುತ್ತದೆ.ಈ ಸಾಧನ ಅಮೇರಿಕಾ ಸಂಸ್ಥೆಯ ಉತ್ಪನ್ನ ವಾಗಿದ್ದು 5ಲಕ್ಷ ರೂ ಬೆಲೆ ಬಾಳುವುದರಿಂದ ಸಾಮಾನ್ಯ ರೋಗಿಗಳಿಗೆ ಆರ್ಥಿಕ ಹೊರೆಯಾಗಿದೆ ಎಂದು ಡಾ.ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಇಂಡಿಯಾನ ಆಸ್ಪತ್ರೆಯ ವೈದ್ಯರಾದ ಡಾ.ಮನ್ಸೂರ್ ,ಸಾರ್ವಜನಿಕ ಸಂಪರ್ಕ ಪ್ರತಿನಿಧಿ ಭಾಸ್ಕರ ಅರಸ್,ಎಐಸಿಡಿ ಅಳವಡಿಸಿ ಚೇತರಿಸಿಕೊಂಡಿರುವ ಜೈಲಾನಿ ಖರೂರಿ ಹಾಗೂ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News