ಕೆರೆ: ನ್ಯಾಯಾಲಯದ ಆದೇಶಕ್ಕೆ ‘ನೀರಿನ ಸಮಸ್ಯೆ’ಯ ತಡೆ

Update: 2016-05-18 15:33 GMT

ಮೂಡಬಿದಿರೆ, ಮೇ 18: ಕಲ್ಸಂಕ ಬಳಿಯ ಬಸದಿಯ ವಿವಾದಿತ ಕೆರೆಯ ಒಳಗಡೆ ಮೆಟ್ಟಲು ಕಟ್ಟಲು ನ್ಯಾಯಾಲಯ ಆದೇಶಿಸಿದಂತೆ ಪಂ. ರಾಜ್ ವಿಭಾಗದವರು ಹಾಗೂ ಗುತ್ತಿಗೆದಾರರು ಕೆರೆಯ ನೀರನ್ನು ಖಾಲಿ ಮಾಡಿ ಕಾಮಗಾರಿ ನಡೆಸಲು ಮಂಗಳವಾರದಂದು ಆಗಮಿಸಿದಾಗ ಪರಿಸರದ ಸುಮಾರು 40 ಮಂದಿ ಸ್ಥಳದಲ್ಲಿ ಜಮಾಯಿಸಿ ‘ಸದ್ಯ ಕುಡಿಯುವ ನೀರಿನ ಸಮಸ್ಯೆ’ ಇರುವ ಕಾರಣ ಈ ಕಾಮಗಾರಿಯನ್ನು ಸದ್ಯ ಮುಂದೂಡಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ ಘಟನೆ ನಡೆದಿದೆ.

    ’ನಾವು ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಆದರೆ, ಕೆರೆಯಲ್ಲಿ ಈಗ ಸುಮಾರು 7ರಿಂದ 8 ಅಡಿ ನೀರಿದೆ; ಅದನ್ನು ಹೊರಚೆಲ್ಲುವ ಕಾರ್ಯ ನಡೆಸಿದರೆ ಸುತ್ತಲಿನ ಬಾವಿಗಳಲ್ಲಿ ನೀರಿನ ಒರತೆಗೆ ಕೊರತೆಯಾಗಲಿದೆ ಎಂದು ಸ್ಥಳೀಯರ ಪರವಾಗಿ ರಾಜವರ್ಮ ಬೈಲಂಗಡಿ ಅಭಿಪ್ರಾಯಪಟ್ಟರು.

 ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಪಂ. ರಾಜ್ ವಿಭಾಗದ ಎಂಜಿನಿಯರ್ ಜಗದೀಪ್ ಶೇಟ್ ಅವರು , ಕೋರ್ಟ್ ಆದೇಶದಂತೆ ತಾವು ಕೆಲಸ ಮಾಡಬೇಕಾಗಿದೆ; ಈಗಾಗಲೇ ತಡವಾಗಿದೆ. ಹಾಗಿದ್ದರೂ ಸ್ಥಳೀಯರ ಅಭಿಪ್ರಾಯವನ್ನು ಮೇಲಕಾರಿಗಳ ಗಮನಕ್ಕೆ ತಂದು ಮುಂದುವರಿಯುವುದಾಗಿ ತಿಳಿಸಿದರು.

   ಎರಡು ತಿಂಗಳ ಹಿಂದೆ ನೀರು ತೀರಾ ಕಡಿಮೆ ಇದ್ದಾಗ ಕೆಲಸ ಮಾಡಲು ಗುತ್ತಿಗೆದಾರರು ಬಂದಿದ್ದರೆಂದೂ ಆದರೆ ಅನತಿ ದೂರದ ಗುರುಬಸದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಕಾರಣಕ್ಕಾಗಿ ‘ಈಗ ಬೇಡ, ಮುಂದೆ ಮಾಡಿ’ ಎಂಬ ವಿನಂತಿಗೆ ಗುತ್ತಿಗೆದಾರರು ಒಪ್ಪಿ ಕಾಮಗಾರಿಯನ್ನು ಮುಂದೂಡಿದ್ದರು ಎಂದು ತಿಳಿದುಬಂದಿದೆ.

ಜಯರಾಜ ಕಂಬಳಿ, ಜಿನೇಂದ್ರ ಕುಮಾರ್, ರತ್ನಾಕರ ಹೆಗ್ಡೆ, ಸುವಿ ಕುಮಾರ್, ಹರಿಶ್ಚಂದ್ರ, ಪ್ರವೀಣ, ವೀರೇಂದ್ರ ಪ್ರಭಾಚಂದ್ರ ಮೊದಲಾದವರು ಸ್ಥಳದಲ್ಲಿದ್ದರು. ರಾಜವರ್ಮ ಬೈಲಂಗಡಿ ಮತ್ತು ಇತರರು ಮೂಡಬಿದಿರೆ ಪುರಸಭೆಗೆ ಈ ಸಮಸ್ಯೆಯ ಬಗ್ಗೆ ಪ್ರತ್ಯೇಕ ಮನವಿಯನ್ನು ಸಲ್ಲಿಸಿದ್ದಾರೆ.

 ಮುಂದೇನು?: ಕೋರ್ಟ್ ಆದೇಶದಂತೆ ಕಾಮಗಾರಿ ನಡೆಸಲೇಬೇಕಾಗಿದೆ. ಇತ್ತ ಜನರ ಮನವಿಯನ್ನೂ ಪರಿಶೀಲಿಸಬೇಕಾಗಿದೆ. ಹಾಗಾಗಿ ನೀರನ್ನು ಹೊರಸೆಳೆಯದೆ ಅನ್ಯ ತಾಂತ್ರಿಕತೆ ಬಳಸಿ ಕಾಮಗಾರಿ ನಡೆಸುವ ಬಗ್ಗೆ ಅಕಾರಿಗಳು ಚಿಂತನೆ ನಡೆಸುತ್ತಿರುವುದಾಗಿಯೂ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News