ಭಾರೀ ಗಾಳಿ, ಮಳೆಯಿಂದ ವ್ಯಾಪಕ ಹಾನಿ: ಇನ್ನೂ ಸಹಜ ಸ್ಥಿತಿಗೆ ಮರಳದ ಬಂಟ್ವಾಳ ತಾಲೂಕು

Update: 2016-05-19 14:26 GMT

ಬಂಟ್ವಾಳ, ಮೇ 19: ಮಂಗಳವಾರ ಸಂಜೆ 7 ಗಂಟೆಯ ಬಳಿಕ ಬೀಸಿದ ಭಾರೀ ಬಿರುಗಾಳಿಗೆ ತತ್ತರಿಸಿ ಹೋಗಿರುವ ಬಂಟ್ವಾಳ ತಾಲೂಕಿನ ಹತ್ತಾರು ಗ್ರಾಮಗಳ ಹಲವು ಪ್ರದೇಶಗಳು ಗುರುವಾರವೂ ಸಹಜ ಸ್ಥಿತಿಗೆ ಬಾರದೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬಿರುಗಾಳಿಗೆ ತಾಲೂಕಿನ ನರಿಕೊಂಬು, ಪಾಣೆಮಂಗಳೂರು, ಶಂಭೂರು, ಬಂಟ್ವಾಳ, ವಗ್ಗ, ಪುಂಜಾಲಕಟ್ಟೆ, ಗೂಡಿನಬಳಿ, ಸಜಿಪನಡು, ಸಜಿಪಮೂಡ, ಪುದು, ವಿಟ್ಲದ ಬೊಬ್ಬೆಕೇರಿ ಮೊದಲಾದೆಡೆ ಉಂಟಾದ ಆವಾಂತರದಲ್ಲಿ 500ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾದರೆ, 600ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾಗೆಯೇ 100ಕ್ಕೂ ಹೆಚ್ಚು ಕೃಷಿ ಜಮೀನಿನಲ್ಲಿ ಸಾವಿರಾರು ಅಡಿಕೆ, ತೆಂಗಿನ ಮರಗಳು ನಾಶವಾಗಿ ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ.

ಬಿರುಗಾಳಿಗೆ ಮರಗಳು ಉರುಳಿಬಿದ್ದು ಹಾನಿಗೊಂಡಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುವ ಕಾರ್ಯದಲ್ಲಿ ಮೆಸ್ಕಾಂ ಸಿಬ್ಬಂದಿ ಬಿಡುವಿಲ್ಲದೆ ತೊಡಗಿದ್ದರಾದರೂ ಇನ್ನೂ ಶೇ.ಅರ್ಧದಷ್ಟು ಕಾರ್ಯ ಪೂರ್ಣಗೊಂಡಿಲ್ಲ. ಹತ್ತಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಕಡಿತಗೊಂಡ ವಿದ್ಯುತ್ ಇನ್ನೂ ಬಾರದೆ ಗ್ರಾಮಸ್ಥರು ಕತ್ತಲಲ್ಲೇ ರಾತ್ರಿ ಕಳೆಯುವಂತಾಗಿದೆ. ಮೆಸ್ಕಾಂ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ಹಾಗೂ ಕೂಲಿ ಕಾರ್ಮಿಕರ ಅಭಾವದಿಂದ ಹಾನಿಗೊಳಗಾದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯಾಚರಣೆ ವಿಳಂಬವಾಗಿದೆ. ಕೆಲವು ಗ್ರಾಮೀಣ ಪ್ರದೇಶದಲ್ಲಿ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ ತಂತಿಗಳನ್ನು ಜೋಡಿಸಲು ಇನ್ನೂ ಎರಡು ದಿನಗಳು ಬೇಕಾಗಬಹುದು ಎಂದು ಮೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ.

ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿರುವುದರಿಂದ ನಗರ ಪ್ರದೇಶಗಳಲ್ಲೂ ವಿದ್ಯುತ್ ಕಣ್ಣಮುಚ್ಚಾಲೆ ಆಡುತ್ತಿದೆ. ನಿರಂತರ ಎರಡು ದಿನಗಳಿಂದ ವಿದ್ಯುತ್ ಕೈಕೊಟ್ಟಿರುವುದರಿಂದ ತಾಲೂಕಿನ ನಗರ ಹಾಗೂ ಹತ್ತಾರು ಗ್ರಾಮಗಳು ಹಲವು ಪ್ರದೇಶಗಳಲ್ಲಿ ಕುಡಿಯಲು ನೀರಿಲ್ಲದೆ ಜನರು ಪರದಾಡುವಂತಾಗಿದೆ. ಸುಡು ಬೇಸಿಗೆಯಿಂದಾಗಿ ಬಾವಿಗಳ ನೀರು ಬತ್ತಿ ಹೋಗಿದ್ದು, ತಾಲೂಕಿನ ಹೆಚ್ಚಿನ ಗ್ರಾಮಗಳ ಜನರು ಕೊಳವೆಬಾವಿ, ಪೈಪ್‌ಲೈನ್ ನೀರನ್ನೇ ಅವಲಂಬಿಸಿದ್ದಾರೆ. ಎರಡು ದಿನಗಳಿಂದ ವಿದ್ಯುತ್ ಕಡಿತಗೊಂಡಿರುವುದರಿಂದ ಬೋರ್‌ವೆಲ್‌ಗಳಿಂದ ನೀರೆತ್ತಲಾಗದೆ ಜನರು ಕುಡಿಯುವ ನೀರಿಗೆ ಪರದಾಟ ನಡೆಸುವಂತಾಗಿದೆ. ಒಂದು ಕೊಡ ನೀರಿಗೆ ಮೈಲು ದೂರ ನಡೆಯಬೇಕಾದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಪುರಸಬೆ ವ್ಯಾಪ್ತಿಗೆ ಸೇರಿದ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದರೂ ಸಮಸ್ಯೆ ಸಂಪೂರ್ಣ ಪರಿಹಾರವಾಗಿಲ್ಲ. ಹನಿ ನೀರು ಇಲ್ಲದೆ ಪರಡಾಡುತ್ತಿರುವ ಬಿ.ಸಿ.ರೋಡ್ ಕೈಕಂಬದ ಸಮೀಪದ ಪರ್ಲ್ಯ ಸರಕಾರಿ ಕ್ವಾಟ್ರಸ್‌ನಲ್ಲಿ ವಾಸವಾಗಿರುವ ನೌಕರರು ಅಂಗಡಿಗಳಿಂದ ಬಾಟಲಿ ನೀರಿನ ಮೊರೆ ಹೋಗಿದ್ದು, ಅಂಗಡಿಗಳಿಂದ ಹತ್ತಾರು ಬಾಟಲಿ ನೀರು ಖರೀದಿಸಿ ಮನೆಯಲ್ಲಿ ಶೇಕರಿಸಿಟ್ಟ ದೃಶ್ಯ ಬುಧವಾರ ರಾತ್ರಿ ಕಂಡು ಬಂತು.

ಮಂಗಳವಾರ ರಾತ್ರಿ ಬೀಸಿದ ಬಿರುಗಾಳಿಗೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆಗಳ ಮೇಲೆ ಉರುಳಿ ಬಿದ್ದ ಮರಗಳನ್ನು ತೆರವುಗೊಳಿಸಲು ಕೂಲಿ ಕಾರ್ಮಿಕರು ಲಭ್ಯವಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಮನೆಗಳ ಮೇಲೆ ಮರಗಳು ಬುಧವಾರ ಸಂಜೆವರೆಗೂ ಹಾಗೆಯೇ ಉಳಿದಿತ್ತು. ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಸ್ವಯಂ ಪ್ರೇರಿತ ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಕರೆ ನೀಡಿದ್ದರಿಂದ ಕೆಲಸಕ್ಕೆ ಹೋಗಲಾರದೆ ಊರಿನಲ್ಲೇ ಉಳಿದ ಲ್ಯ ಕೂಲಿ ಕಾರ್ಮಿಕರನ್ನು ಕರೆದು ಮನೆಗಳ ಮೇಲೆ ಉರುಳಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು. ಇನ್ನು ಕೆಲವೆಡೆ ಸ್ವಂತ ಮನೆ ಮಂದಿಯೇ ಶ್ರಮವಹಿಸಿ ತಮ್ಮ ತಮ್ಮ ಮನೆಗಳ ಮೇಲೆ ಉರುಳಿ ಬಿದ್ದ ಮರಗಳನ್ನು ತೆರವುಗೊಳಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News