ಎತ್ತಿನಹೊಳೆ ಯೋಜನೆ ವಿರುದ್ಧ ಪ್ರತಿಭಟನೆ

Update: 2016-05-19 17:52 GMT

ಮಂಗಳೂರು, ಮೇ 19: ಎತ್ತಿನಹೊಳೆ ಯೋಜನೆ ವಿರುದ್ಧ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಜಿಲ್ಲಾ ಬಂದ್ ಸಂಪೂರ್ಣ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ನಗರದ ಹಂಪನಕಟ್ಟೆ ವೃತ್ತದಲ್ಲಿ ಬಂದ್‌ನಲ್ಲಿ ಪಾಲ್ಗೊಂಡ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸಿ ಪ್ರತಿಭಟನಾ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಅಧ್ಯಕ್ಷ ವಿಜಯ್‌ಕುಮಾರ್ ಶೆಟ್ಟಿ, ಎತ್ತಿನಹೊಳೆ ಯೋಜನೆ ವಿರುದ್ಧ ನಡೆಸಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಯಶಸ್ವಿಗೆ ಸಹಕರಿಸಿದ ಎಲ್ಲರನ್ನೂ ಕೃತಜ್ಞತೆ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಜನರು ಜಾತಿ, ಧರ್ಮವನ್ನು ಮರೆತು ಒಗ್ಗೂಡಿ ಹೋರಾಟದಲ್ಲಿ ಪಾಲ್ಗೊಂಡಿದ್ದು, ಸರಕಾರ ಇದಕ್ಕೆ ಸ್ಪಂದಿಸದಿದ್ದರೆ ಮುಂದಿನ ಹೋರಾಟದ ರೂಪುರೇಷೆಯನ್ನು ನಿರ್ಧರಿಸುವುದಾಗಿ ಹೇಳಿದರು.

ನೀರಿಗಾಗಿ ಸಂಗ್ರಾಮ ಆಗದಿರಲಿ

ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧ ಹಿಂದೂ, ಮುಸ್ಲಿಮ್, ಕ್ರೈಸ್ತರೆಂಬ ಜಾತಿ, ಧರ್ಮವನ್ನು ಮರೆತು ದಕ್ಷಿಣ ಕನ್ನಡ ಜಿಲ್ಲೆಯ ಜನರು ಹೋರಾಟಕ್ಕೆ ಕೈಜೋಡಿಸಿದ್ದಾರೆ. ಆದ್ದರಿಂದ ಮುಂದೊಂದು ದಿನ ನೀರಿಗಾಗಿ ಮಹಾ ಸಂಗ್ರಾಮ ನಡೆಯುವ ಮುನ್ನವೇ ಸರಕಾರ ಎಚ್ಚೆತ್ತು ಜಿಲ್ಲೆಯ ಜನರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಲಿ ಎಂದರು.

ರೊಸಾರಿಯೊ ಚರ್ಚ್‌ನ ಧರ್ಮಗುರು ಜೆ.ಬಿ.ಕ್ರಾಸ್ತಾ ಮಾತನಾಡಿ, ಇಂದು ನಡೆದ ಜಿಲ್ಲಾ ಶಾಂತಿಯುತ ಬಂದ್ ಮಾದರಿಯಾಗಿದ್ದು, ಇದು ಬೆಂಗಳೂರಿಗೆ ತಲುಪಿ ಸರಕಾರವನ್ನು ಎಚ್ಚರಿಸಲಿ ಎಂದರು.

ಹೋರಾಟಗಾರ ಹಾಗೂ ಸಂಚಾಲಕ ದಿನೇಶ ಹೊಳ್ಳ ಮಾತನಾಡಿ, ಪಶ್ಟಿಮಘಟ್ಟ ತಪ್ಪಲಿನಿಂದ ಪುಷ್ಪಗಿರಿ ತಾಣದವರೆಗೆ ಸರಕಾರ ‘ನೇತ್ರಾವತಿ ನದಿ ಸಂರಕ್ಷಣಾ ವಲಯ’ವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಂ.ಜಿ. ಹೆಗಡೆ, ಹರಿಕೃಷ್ಣ ಬಂಟ್ವಾಳ್, ಡಿ.ಎಂ.ಅಸ್ಲಂ, ಸತ್ಯಜಿತ್ ಸುರತ್ಕಲ್, ಜಗದೀಶ್ ಶೇಣವ, ಅಣ್ಯಯ್ಯ ಕುಲಾಲ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನ್ೀ ಕೊಡಾಜೆ, ಪ್ರಧಾನ ಕಾರ್ಯದರ್ಶಿ ನವಾಝ್ ಉಳ್ಳಾಲ, ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಅನ್ವರ್ ಸಾದಾತ್ ಬಜೆತ್ತೂರು, ವಕೀಲ ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News