ಮುಂದಿನ ಒಂದೂವರೆ ವರ್ಷದಲ್ಲಿ ದಿನದ 24 ಗಂಟೆಯೂ ವಿದ್ಯುತ್: ಸಚಿವ ಡಿ.ಕೆ.ಶಿವಕುಮಾರ್

Update: 2016-05-19 16:34 GMT

ಮಂಗಳೂರು, ಮೇ 19: ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಸರಬರಾಜು ನೀಡುವ ನಿಟ್ಟಿನಲ್ಲಿ ಸರಕಾರ ಯೋಜನೆಯನ್ನು ಹಾಕಿಕೊಂಡಿದೆ ಎಂದು ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತದ ಬಿಜೈಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ನೂತನ ಆಡಳಿತ ಕಚೇರಿ ಕಟ್ಟಡ ‘ಮೆಸ್ಕಾಂ ಭವನ’ವನ್ನು ಉದ್ಘಾಟಿಸಿ ನಗರದ ಪುರಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಡುಪಿಯಂತೆ ಮಂಗಳೂರಿನಲ್ಲಿಯೂ ದಿನದ 24 ಗಂಟೆ ವಿದ್ಯುತ್ ನೀಡಬೇಕೆಂಬ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಸರಕಾರ ಪ್ರಯತ್ನ ಮಾಡುತ್ತಿದೆ. ಈ ಬೇಡಿಕೆಯನ್ನು ಈಡೇರಿಸಲು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

2018ರಲ್ಲಿ ರಾಜ್ಯದ ಎಲ್ಲಾ ರೈತರಿಗೂ ಹಗಲು ಹೊತ್ತಿನಲ್ಲಿ 5 ಗಂಟೆ ವಿದ್ಯುತ್ ನೀಡುವ ಯೋಜನೆಯ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.
 ಸೋಲಾರ್ ವಿದ್ಯುತ್ ಉತ್ಪಾದನೆಗೆ ಸರಕಾರ ಒತ್ತು ನೀಡುತ್ತಿದ್ದು ಎಲ್ಲಾ ಕಡೆಯೂ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸರಕಾರ ಬೆಂಬಲಿಸುತ್ತದೆ. ರಾಜ್ಯದಲ್ಲಿ 2018ರೊಳಗಡೆ 5 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಿದ್ಯುತ್ ಇಲಾಖೆಯಲ್ಲಿ 25 ಸಾವಿರ ಉದ್ಯೋಗ ಭರ್ತಿ ಮಾಡುವ ಅಗತ್ಯವಿತ್ತು. ಅದರಲ್ಲಿ ಈಗಾಗಲೆ 12,500 ನೇಮಕಾತಿ ಮಾಡಲಾಗಿದ್ದು ಉಳಿದ 12,500 ನೇಮಕಾತಿಯನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ದಿನಂಪ್ರತಿ ಹತ್ತು ಸಾವಿರ ಮೆ.ವ್ಯಾ ವಿದ್ಯುತ್ ಬೇಡಿಕೆಯಿದೆ. ಇದನ್ನು ಪೂರೈಸಲು ಸರಕಾರ ಬದ್ಧವಾಗಿದೆ. ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ದ.ಕ ಜಿಲ್ಲೆಯನ್ನು ಸೋಲಾರ್‌ಯುಕ್ತ ಜಿಲ್ಲೆ ಮಾಡಬೇಕೆಂಬ ಆಪೇಕ್ಷೆ ಸರಕಾರಕ್ಕಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟೆರೇಸ್ ಮನೆಗಳಿರುವುದರಿಂದ ಅಂತಹ ಅವಕಾಶವು ಜಿಲ್ಲೆಯಲ್ಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜೆ.ಆರ್. ಲೋಬೊ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ, ತಾಂತ್ರಿಕ ನಿರ್ದೇಶಕ ಕೆ.ರಾಮಕೃಷ್ಣ, ಮುಖ್ಯ ಆರ್ಥಿಕ ಅಧಿಕಾರಿ ಡಿ.ಆರ್.ಶ್ರೀನಿವಾಸ್, ಮುಖ್ಯ ಇಂಜಿನಿಯರ್ ಆನಂದ್ ನಾಯಕ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಮೇಯರ್ ಹರಿನಾಥ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಮನಪಾ ಸದಸ್ಯ ಲ್ಯಾನ್ಸ್‌ಲಾಟ್ ಪಿಂಟೋ, ಮನಪಾ ಸಚೇತಕ ಶಶಿಧರ್ ಹೆಗ್ಡೆ, ಕ.ವಿ.ಪ್ರ.ನಿ.ನಿ. ವ್ಯವಸ್ಥಾಪಕ ನಿರ್ದೇಶಕ ಜಾವೇದ್ ಅಖ್ತರ್, ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಕ.ವಿ.ಪ್ರ.ನಿ.ನಿ. ನಿರ್ದೇಶಕ ಎಸ್.ಸುಮಂತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಜಯರಾಮಗೌಡ, ಪುಟ್ಟಸ್ವಾಮಿಗೌಡ, ಎಚ್.ನಾಗೇಶ್, ಶಶಿಧರ್ ಹೆಗ್ಡೆ, ಶ್ರೀಧರ್, ಮೆಸ್ಕಾಂ ನಿರ್ದೇಶಕರಾದ ಎ.ಎನ್ ಜಯರಾಜ್, ಎಂ.ಡಿ.ರವಿ, ಎಸ್.ಸಂಜೀವ ಶೆಟ್ಟಿ, ಸುರೇಂದ್ರ ಬಿ. ಕಂಬಳಿ, ಬಿ.ವಿ.ಜಯರಾಂ, ರಿಯಾಜ್ ಅಹ್ಮದ್, ಮಲ್ಲಿಕಾ ಪಿ. ಪಕ್ಕಳ, ಸುಧೀರ್ ಕುಮಾರ್, ಸದಾಶಿವ ಅಮೀನ್, ಕೆ.ಎಂ.ಕೃಷ್ಣಪ್ಪ, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News