ಲಂಚ ಬೇಡಿಕೆ: ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಗ್ರಾಮ ಕರಣಿಕ

Update: 2016-05-19 18:05 GMT

ಬಂಟ್ವಾಳ, ಮೇ 19: ಜಮೀನಿನ ಖಾತೆ ಬದಲಾವಣೆಗೆ ಫಲಾನುಭವಿಯೊಬ್ಬರಿಂದ ಲಂಚದ ಬೇಡಿಕೆಯಿಟ್ಟಿದ್ದ ಪುಣಚದ ಗ್ರಾಮ ಕರಣಿಕನೋರ್ವನನ್ನು ದ.ಕ.ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ಗುರುವಾರ ನಡೆಸಿದ ಕುಟುಕು ಕಾರ್ಯಾ ಚರಣೆಯಲ್ಲಿ ಸೆರೆಹಿಡಿದಿದ್ದಾರೆ.
 
ಪುಣಚ ಗ್ರಾಮದ ಗ್ರಾಮಕರಣಿಕ ರಂಜಿತ್ ಲಂಚ ಕೇಳಿದ ಆರೋಪಿಯಾಗಿದ್ದು, ಸದ್ಯಕ್ಕೆ ಎಸಿಬಿ ಪೊಲೀಸರ ವಶದಲ್ಲಿದ್ದಾನೆ.
       
  ಪುಣಚ ಗ್ರಾಮದ ಕಂಬಳಿಮೂಲೆ ಎಂಬಲ್ಲಿ ಇತ್ತೀಚೆಗೆ ಜಮೀನು ಖರೀದಿಸಿದ್ದ ನಾಗರಾಜ ಭಟ್ ಎಂಬವರು, ಜಮೀನಿನ ಖಾತೆ ಬದಲಾವಣೆಗಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ಅರ್ಜಿಸಲ್ಲಿಸಿದ್ದರು. ಜೊತೆಗೆ 500 ರೂ. ನಗದು ನೀಡಿದ್ದರು. ಆದರೆ ಗ್ರಾಮಕರಣಿಕ ರಂಜಿತ್ ಖಾತೆ ಬದಲಾವಣೆಯ ಕಡತವನ್ನು ವಿಲೇವಾರಿಗೊಳಿಸಿರಲಿಲ್ಲ. ಈ ಕುರಿತು ವಿಚಾರಿಸಿದಾಗಲೆಲ್ಲಾ ನಾನಾಕಾರಣಗಳನ್ನು ನೀಡುತ್ತಿದ್ದು, ಕೆಲ ದಿನಗಳ ಹಿಂದೆ ಖಾತೆ ಬದಲಾವಣೆ ಮಾಡಿಕೊಡಲೇಬೇಕೆಂದು ರಂಜಿತ್ ಮೇಲೆ ಒತ್ತಡ ಹೇರಿದಾಗ 6,000 ರೂ. ಲಂಚದ ಬೇಡಿಕೆ ಇಟ್ಟಿದ್ದರಲ್ಲದೆ, ತನ್ನನ್ನು ನೋಡಿಕೊಳ್ಳಬೇಕೆಂದು ರಂಜಿತ್ ತಿಳಿಸಿದ್ದರು. ಈ ಬಗ್ಗೆ ನಾಗರಾಜ್ ಭಟ್, ನೂತನವಾಗಿ ಅಸ್ತಿತ್ವಕ್ಕೆ ಬಂದ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಅದರಂತೆ ಎಸಿಬಿಯ ಪಶ್ಚಿಮವಲಯ ಎಸ್ಪಿ ಚೆನ್ನಬಸವಣ್ಣ ಮಾರ್ಗದರ್ಶನದಲ್ಲಿ ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್ ಕುಮಾರ್ ಮತ್ತವರ ತಂಡ ಗುರುವಾರ ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಗ್ರಾಮಕರಣಿಕ ರಂಜಿತ್‌ನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದು, ಲಂಚವಾಗಿ ಪಡೆದ 6,500 ಹಣವನ್ನೂ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಬಿ ಇನ್‌ಸ್ಪೆಕ್ಟರ್ ಯೋಗೀಶ್ ಕುಮಾರ್ ತಿಳಿಸಿದ್ದಾರೆ.

ದಾಳಿ ತಂಡದಲ್ಲಿ ಡಿವೈಎಸ್ಪಿ ಸುಧೀರ್ ಹೆಗ್ಡೆ, ಇನ್‌ಸ್ಪೆಕ್ಟರ್ ದಿನಕರ್ ಶೆಟ್ಟಿ, ಹೆಡ್‌ಕಾನ್‌ಸ್ಟೇಬಲ್‌ಗಳಾದ ರಾಕೇಶ್,ರಾಧಾಕೃಷ್ಣ, ಕಾನ್‌ಸ್ಟೇಬಲ್ ಉಮೇಶ್ ಭಾಗವಹಿಸಿದ್ದರು. ಈ ದಾಳಿ ದಕ್ಷಿಣ ಕನ್ನಡ ಜಿಲ್ಲಾ ಭ್ರಷ್ಟಾಚಾರ ನಿಗ್ರಹದಳ ನಡೆಸಿದ ಮೊದಲ ದಾಳಿ ಎಂದು ಇನ್‌ಸ್ಪೆಕ್ಟರ್ ಯೋಗೀಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News