ಮೇ 21-22: ಪಿಲಿಕುಳದಲ್ಲಿ ಮಾವು ,ಹಲಸು ವಿದೇಶಿ ಹಣ್ಣುಗಳ ಮೇಳ ವಸಂತೋತ್ಸವ 2016

Update: 2016-05-20 08:59 GMT

 ಮಂಗಳೂರು,  ಮೇ 20: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿ. ಬೆಂಗಳೂರು ಹಾಗೂ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ವತಿಯಿಂದ ಮೇ 21ಮತ್ತು 22ರಂದು ಪಿಲಿಕುಲ ಅರ್ಬನ್ ಹಾಥ್ ನಲ್ಲಿ ಹಮ್ಮಿಕೊಳ್ಳಲಾಗಿರುವ ವಸಂತೋತ್ಸವ -2016ರ ಅಂಗವಾಗಿ ಮಾವು ,ಹಲಸು ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ದೇಶ ವಿದೇಶದ ವಿವಿಧ ಹಣ್ಣುಗಳ ಪ್ರದರ್ಶನ ಮೇಳ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹೀಂ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪ್ರಮುಖವಾಗಿ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಬಾದಾಮಿ,ಆಲ್ಫೊನ್ಸ್ ,ಮಲ್ಲಿಕಾ ,ನೀಲಂ,ಮುಂಡಪ್ಪ,ತೋತಾಪುರಿ,ರತ್ನಗಿರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳ 5ರಿಂದ ಆರು ಟನ್ ಮಾವುಗಳನ್ನು ಕೋಲಾರ, ರಾಮನಗರ ,ಚಿಕ್ಕ ಬಳ್ಳಾಪುರದ ರೈತರು ತಂದು ಮಾರಾಟ ಮಾಡಲು ಬರುವ ನಿರೀಕ್ಷೆ ಇದೆ .ಅಲ್ಲದೆ ಸ್ಥಳೀಯವಾಗಿ ದೊರೆಯುವ ತಳಿಗಳಾದ ನೆಕ್ಕರೆ, ಗದ್ದೆ ಮಾವು, ಬಜಪೆ-ಬಂಟ್ವಾಳ ಪ್ರದೇಶದಲ್ಲಿ ದೊರೆಯುವ ಸಕ್ಕರೆ ಮಾವು ಹಾಗೂ ಇತರ ಕಾಡು ಜಾತಿಯ ಮಾವಿನ ತಳಿಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮೇಳವನ್ನು ಉದ್ಘಾಟಿಸಲಿದ್ದಾರೆ.

ಸಚಿವರಾದ ಅಭಯ ಚಂದ್ರ ಜೈನ್, ಯು.ಟಿ.ಖಾದರ್ ಸೇರಿದಂತೆ ಶಾಸಕರು ಜಿಲ್ಲಾಡಳಿತದ ಪ್ರಮುಖರು ಭಾಗವಹಿಸಲಿದ್ದಾರೆ.

ಹಲಸಿನ ಹಣ್ಣುಗಳ ಪ್ರದರ್ಶನ, ಮಾರಾಟ:-

ವಿವಿಧ ತಳಿಯಹಲಸಿನ ಹಣ್ಣುಗಳ ಮಾರಾಟ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಹಲಸಿನ ಪ್ರಮುಖ ತಳಿಗಳಾದ ತೂಬಿಕ ಕೆರೆ ಹಲಸು, ಚಂದ್ರ ಬಕ್ಕೆ,ರಾಜ ರುದ್ರಾಕ್ಷಿ, ಅಲ್ ಸೀಜನ್ ಸದಾನಂದ ಹಾಗೂ ಕರಾವಳಿ ವಿವಿಧ ತಳಿಯ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಈ ಸಂದರ್ಭದಲ್ಲಿ ನಡೆಯಲಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಯೋಗೇಶ್ ಎಚ್.ಆರ್ ಮಾಹಿತಿ ನೀಡಿದರು.

ದೇಶ ವಿದೇಶದ ಹಣ್ಣುಗಳ ಪ್ರದರ್ಶನ:-

ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ದೇಶ ವಿದೇಶದ ಹಣ್ಣುಗಳಾದ ರಾಂಬುಟನ್, ಮ್ಯಾಂಗೊಸ್ಟೀನ್, ಡುರಿಯನ್, ಜಬೋಟಿಕಾ,ವೆಲ್ನ್‌ಟ್ ಆ್ಯಪಲ್, ಫೀನಟ್‌ಬಟರ್, ವಿವಿಧ ಬಗೆಯ ಸೇಬು,ಥಾಲ್ಯಾಂಡ್ ಪೇರಳೆ, ಪ್ಲಮ್ಸ್, ಪೀಚ್, ಆಸ್ಟ್ರೇಲಿಯಾ ರೆಡ್ ಗ್ಲೋಬ್ ಹಾಗೂ ಇನ್ನಿತರ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಯೋಗೇಶ್ ತಿಳಿಸಿದರು.

ಹಣ್ಣುಗಳ ಹಾಗೂ ಇತರ ಖಾದ್ಯ ಮಾರಾಟ;-

ಗೇರು ಹಣ್ಣಿನ ಐಸ್‌ಕ್ರೀಂ,ಕೆ.ಎಂ.ಎಫ್ ಹಾಲಿನ ಉತ್ಪನ್ನ, ಕ್ಯಾಂಪ್ಕೋ ಉತ್ಪನ್ನಗಳ ಮಾರಾಟ, ಔಷಧೀಯ ಹಣ್ಣು,ಸಸ್ಯಗಳ ಪ್ರದರ್ಶನ ಮತ್ತು ಮಾರಾಟ, ಸಾವಯವ ತರಕಾರಿಗಳ ಮಾರಾಟ, ಅನನಾಸು, ಪುನರ್‌ಪುಲಿ, ಮಂಥ್‌ಪುಳಿ, ಕೇಪುಳ, ಕರಂಡೆ, ನೇರಳೆ, ಕುಂಟಾಲ್ ಇತ್ಯಾದಿ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಯೋಗೇಶ್ ತಿಳಿಸಿದರು.

ವಿಶೇಷ ಬಹುಮಾನ;-

ಮೇಳದಲ್ಲಿ ಅತ್ಯಂತ ದೊಡ್ಡ ಹಣ್ಣು (ಮಾವು ಹಲಸು ,ಅನಾನಸು)ಪ್ರದರ್ಶಿಸಿದ ಮಾಲಕರಿಗೆ ವಿಶೇಷ ಬಹುಮಾನ ಹಾಗೂ ಮಾವಿನಹಣ್ಣಿನ ಬೀಜವನ್ನು ದೂರ ಎಸೆಯುವವರಿಗೆ ಬಹುಮಾನ ನೀಡಲಾಗುವುದು ಎಂದು ಸಂಘಟಕ ಪ್ರಭಾಕರ ಶರ್ಮ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಿಲಿಕುಳ ನಿಸರ್ಗ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎನ್.ವಿ.ಪ್ರಭಾಕರ ಶರ್ಮ, ಉತ್ಸವ ಸಮಿತಿಯ ಸದ್ಯಸ್ಯರಾದ ಚಂದ್ರಶೇಖರ ಚೌಟ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್,ವಿಜ್ಞಾನಿ ಡಾ.ಸೂರ್ಯಪ್ರಕಾಶ್ ಶೆಣೈ ಮೊದಾಲದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News