ಮೇ 21ರಂದು ಮೋಷನ್ ಪಿಕ್ಚರ್ ‘ದಿ ಲಾಸ್ಟ್ ಫ್ಲೈಟ್’ ಬಿಡುಗಡೆ

Update: 2016-05-20 12:26 GMT

ಮಂಗಳೂರು, ಮೇ 20: 2010ರ ಮಂಗಳೂರು ವಿಮಾನ ದುರಂತಕ್ಕೆ ಮೇ 22ಕ್ಕೆ 6 ವರ್ಷಗಳು ಸಲ್ಲುತ್ತಿದ್ದು, ಮಂಗಳೂರಿನ ಮಾಧ್ಯಮ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ದುಡಿಯುತ್ತಿರುವ ಸಮಾನಮನಸ್ಕರ ತಂಡ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಒಂದು ವಿಶೇಷ ಪ್ರಯತ್ನಕ್ಕೆ ಇಳಿದಿದೆ. ಮೇ 22 ದಿ ಲಾಸ್ಟ್ ಪ್ಲೈಟ್ ಎನ್ನುವ ಮೋಷನ್ ಫಿಕ್ಟರ್ (ಆಲ್ಬಂ ಸಾಂಗ್)ನ್ನು ಈ ತಂಡ ಅರ್ಪಿಸಲಿದೆ.

ಮೇ 21ರಂದು ಬೆಳಗ್ಗೆ 8:30ಕ್ಕೆ ಮಂಗಳೂರಿನ ಭಾರತ್ ಬಿಗ್‌ಸಿನಿಮಾದಲ್ಲಿ ಜರಗಲಿರುವ ಸಮಾರಂಭದಲ್ಲಿ ಈ ಆಲ್ಬಂ ಬಿಡುಗಡೆಗೊಳ್ಳಲಿದೆ. ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ರಾಧಾಕೃಷ್ಣನ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಮೇ 22 ದಿ ಲಾಸ್ಟ್ ಪ್ಲೈಟ್ ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರು ವಿಮಾನ ದುರಂತಕ್ಕೆ ಸಂಬಂದಿಸಿದಂತೆ ಸತ್ಯಕಥೆಯೊಂದರ ರೋಮ್ಯಾಂಟಿಕ್ ರೂಪಕ. ವಿಶ್ಯುಲ್‌ದೃಶ್ಯಗಳ ಹೊರತಾಗಿ, ಸುಮಾರು 5,000 ಸ್ಟಿಲ್ ಇಮೇಜ್‌ಗಳನ್ನು ಹಾಗೂ 25 ಸಾವಿರ ಲೇಯರ್ಸ್‌ಗಳನ್ನು ಬಳಸಿ ನಿರ್ಮಿಸಿದ ಒಂದು ವಿನೂತನ ಪ್ರಯತ್ನ ಇದಾಗಿದೆ. ತುಳು, ಕನ್ನಡ, ಹಾಗೂ ಹಿಂದಿ ಭಾಷೆಯಲ್ಲಿ ಈ ಆಲ್ಬಂ ಕರ್ನಾಟಕದ ಮೊದಲ ಮೋಷನ್ ಪಿಕ್ಚರ್ ಎನಿಸಿಕೊಳ್ಳಲಿದೆ.

ವಿ.ಜೆ ವಿನೀತ್ ಈ ಆಲ್ಬಂನ ನಾಯಕನಟನಾಗಿದ್ದು ನೇಹಾಲ್ ಪರಿಣಿತ ನಾಯಕಿ. ದಿನೇಶ್‌ಆಚಾರ್ಯ ನಿರ್ದೇಶನದ ಈ ಆಲ್ಬಂಗೆ ಶಶಿರಾಜ್‌ರಾವ್ ಕಾವೂರ್,ಕರಣ್‌ಮಂಜುನಾಥ್ ಹಾಗೂ ಮುಹಮ್ಮದ್ ಇಬಾದ್ ಸಾಹಿತ್ಯ ಒದಗಿಸಿದ್ದಾರೆ. ಡಾ.ನಿತಿನ್‌ಆಚಾರ್ಯರ ಸಂಗೀತ, ಹರೀಶ್‌ನಾಯಕ್.ಕೆ ಛಾಯಾಗ್ರಹಣ, ಸಹನಿರ್ದೇಶಕರಾಗಿ ನಿತೇಶ್‌ಕುಲಾಲ್ ಸಹಕರಿಸಿದ್ದಾರೆ ಎಂದು ಆಲ್ಬಂನ ನಿರ್ಮಾಣ, ನಿರ್ವಾಹಕ ಮೈಮ್ ರಾಮ್‌ದಾಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News