ಮಂದಗತಿಯಲ್ಲಿ ಸಾಗುತ್ತಿರುವ ಪರಿಹಾರ ಕಾರ್ಯ: ಬಿಜೆಪಿ ಆರೋಪ

Update: 2016-05-21 09:13 GMT

ಬಂಟ್ವಾಳ, ಮೇ 21: ಕೆಲವು ದಿನಗಳ ಹಿಂದೆ ಬೀಸಿದ ಬಿರುಗಾಳಿಗೆ ಹಾನಿಗೊಳಗಾದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪರಿಹಾರ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ, ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಬದಲು ಅಧಿಕಾರಿಗಳು ಫೊಟೋಗೆ ಫೋಸ್ ಕೊಡುವುದರಲ್ಲೇ ಮಗ್ನರಾಗಿದ್ದಾರೆ ಎಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಶವಿವಾರ ಬೆಳಗ್ಗೆ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ್‌ರವರು, ಕಳೆದ ಮೇ 17ರಂದು ಬೀಸಿದ ಭಾರೀ ಬಿರುಗಾಳಿಗೆ ಬಂಟ್ವಾಳ ತಾಲೂಕಿನಾದ್ಯಂತ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಅದರಲ್ಲೂ ತಾಲೂಕಿನ ನರಿಕೊಂಬು, ಶಂಬೂರು, ಬಿ.ಮೂಡಾ, ಬಂಟ್ವಾಳ ಕಸ್ಬಾ, ನಾವೂರು, ಪಂಜಿಕಲ್ಲು, ಕಾಡಬೆಟ್ಟು, ಕೊಡಂಬೆಟ್ಟು ಗ್ರಾಮದಲ್ಲಿ ನೂರಾರು ಮನೆಗಳು, ವಿದ್ಯುತ್ ಕಂಬಗಳು ಹಾನಿಗೊಂಡಿದ್ದು ಸಾವಿರಾರು ಕಂಗು, ತೆಂಗಿನ ಮರಗಳು ನಾಶಗೊಂಡಿದೆ. ಈ ಘಟನೆ ನಡೆದು 5 ದಿನಗಳು ಕಳೆದರೂ ಸಂತ್ರಸ್ತರಿಗೆ ಸರಕಾರದಿಂದ ಇನ್ನೂ ನಯಾ ಪೈಸೆ ಪರಿಹಾರ ವಿತರಿಸಲಾಗಿಲ್ಲ ಎಂದು ಆರೋಪಿಸಿದರು.

ವಿದ್ಯುತ್ ಕಂಬಗಳು ಹಾನಿಗೊಳಗಾಗಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಕತ್ತಲಲ್ಲೇ ರಾತ್ರಿ ಕಳೆಯುತ್ತಿದ್ದು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಪ್ರಕೃತಿ ವಿಕೋಪಕ್ಕೆಂದು ತಾಲೂಕಿಗೆ ಬಿಡುಗಡೆಯಾದ 15 ಲಕ್ಷ ರೂಪಾಯಿಯಲ್ಲಿ 7 ಲಕ್ಷ ರೂಪಾಯಿ ಉಳಿಸಿ 8 ಲಕ್ಷ ರೂಪಾಯಿ ಮಾತ್ರ ಸಂತ್ರಸ್ತರಿಗೆ ವಿತರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಸಂಪೂರ್ಣ ಹಾನಿಗೊಂಡ ಮನೆಗಳಿಗೆ ಕನಿಷ್ಠ 50 ಸಾವಿರ ರೂ. ಪರಿಹಾರ ನೀಡಿ ನೆರವಾಗುವ ಬದಲು ಅಧಿಕಾರಿಗಳು 2 ಸಾವಿರ ರೂ. ಪರಿಹಾರದ ಚೆಕ್ ಬರೆದಿಟ್ಟಿದ್ದಾರೆ.

ಸ್ವಕ್ಷೇತ್ರದಲ್ಲಿ ಭಾರೀ ಪ್ರಮಾಣದ ಹಾನಿ ಉಂಟಾಗಿದ್ದರೂ ಸಂತ್ರಸ್ತರಿಗೆ ಪ್ರಕೃತಿ ವಿಕೋಪದ ಪರಿಹಾರ ಸೂಕ್ತ ಸಮಯದಲ್ಲಿ ವಿತರಿಸಲು ಸಚಿವ ರಮಾನಾಥ ರೈ ಆಸಕ್ತಿ ತೋರಿಸಿಲ್ಲ ಎಂದವರು ಆರೋಪಿಸಿದರು.

ಹಾನಿಯಾದ ಪ್ರದೇಶಗಳಿಗೆ ಅಧಿಕಾರಿಗಳು ಕೂಡಾಲೇ ಧಾವಿಸಿ ಸಂತ್ರಸ್ತರಿಗೆ ಸಾಂತ್ವಾನ ನೀಡಿ ಸೂಕ್ತ ಪರಿಹಾರ ವಿತರಿಸಬೇಕು. ವಿದ್ಯುತ್ ಕಂಬಗಳನ್ನು ಶೀರ್ಘದಲ್ಲೇ ಸರಿಪಡಿಸಿ ಜನರಿಗೆ ಕುಡಿಯುವ ನೀರು ಸಿಗುವಂತೆ ಮಾಡಬೇಕು. ಪರಿಹಾರ ಕಾರ್ಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಳಪೆ ಕಾಮಗಾರಿ:

ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಮಾತನಾಡಿ, ಮೇ 17ರಂದು ಬೀಸಿದ ಗಾಳಿಗೆ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ 480 ವಿದ್ಯುತ್ ಕಂಬಗಳು ಧರೆಗುರುಳಿದೆ ಎಂದು ಮೆಸ್ಕಾಂ ಇಲಾಖೆಯ ಎಂ.ಡಿ. ಮಾಹಿತಿ ನೀಡಿದ್ದಾರೆ.

ಇಷ್ಟೊಂದು ಕಂಬಗಳು ಹಾನಿಗೊಳಗಾಗಲು ಕಂಬಗಳ ಕಳಪೆ ಗುಣಮಟ್ಟ ಹಾಗೂ ಕಳಪೆ ಕಾಮಗಾರಿಯೇ ಕಾರಣವಾಗಿದೆ ಎಂದು ಆರೋಪಿಸಿದರು. ಕೆಲಸ ಸುಲಭವಾಗಲೆಂದು ಮೆಸ್ಕಾಂ ಇಲಾಖೆ ನಿಗದಿಪಡಿಸಿದಕ್ಕಿಂತ ಕಡಿಮೆ ಆಳದ ಗುಂಡಿ ಮಾಡಿ ಕಂಬಗಳನ್ನು ನೆಡುವುದರಿಂದ ಗಾಳಿಗೆ ಸುಲಭವಾಗಿ ಧರೆಗುರುಳುತ್ತಿವೆ. ವಿದ್ಯುತ್ ಕಂಬಗಳನ್ನು ತಯಾರಿಸುವಾಗ ನಿಗದಿತ ಪ್ರಮಾಣದಲ್ಲಿ ಸಿಮೆಂಟ್, ಗುಣಮಟ್ಟದ ಕಬ್ಬಿಣ ಬಳಸದಿರುವುದರಿಂದ ಇತ್ತೀಚೆಗೆ ಅಳವಡಿದ ಹೊಸ ಕಂಬಗಳೇ ಅಧಿಕ ಸಂಖ್ಯೆಯಲ್ಲಿ ಹಾನಿಗೊಳಗಾಗಿದೆ. ಟೆಂಡರ್ ನೀಡುವುದು ಸೇರಿದಂತೆ ವಿದ್ಯುತ್ ಉಪಕರಣಗಳ ಖರೀದಿಯಲ್ಲಿ ಬಂಟ್ವಾಳ ತಾಲೂಕು ಮೆಸ್ಕಾಂನಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಯುತ್ತಿವೆ. ಈ ಅವ್ಯವಹಾರದಲ್ಲಿ ಮೆಸ್ಕಾಂ ಎಂ.ಡಿ. ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಜಿಲ್ಲಾ ಉಸ್ತುವಾರಿ ಕೂಡಾ ಪರೋಕ್ಷವಾಗಿ ಈ ಅವ್ಯವಹಾರಕ್ಕೆ ಸಹಕರಿಸುತ್ತಿದ್ದಾರೆ ಎಂದರು.

ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿ, ಸಚಿವ ರಮಾನಾಥ ರೈ ಕೃಪಾಮೋಕ್ಷದಿಂದ ಬಂಟ್ವಾಳ ತಾಲೂಕು ಮೆಸ್ಕಾಂ ಇಲಾಖೆಯಲ್ಲಿ ಹಗಲು ಲೂಟಿ ನಡೆಯುತ್ತಿವೆ. ಜಿಲ್ಲೆಯಾದ್ಯಂತ ಗಾಳಿ ಬೀಸಿದರೂ ಇತರ ತಾಲೂಕಿನಲ್ಲಿ ಬರೇ ಹತ್ತಾರು ಕಂಬಗಳು ಹಾನಿಗೊಂಡಿದೆ. ಆದರೆ ಬಂಟ್ವಾಳ ತಾಲೂಕಿನಲ್ಲಿ ನೂರಾರು ಕಂಬಗಳು ಹಾನಿಗೊಳಗಾಗಿದ್ದು, ಇದು ಕಂಬಗಳ ಕಳಪೆ ಗುಣಮಟ್ಟ ಹಾಗೂ ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಗಾಗಿದೆ ಎಂದರು.

ಈ ಬಗ್ಗೆ ಉನ್ನತ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು. ತಪ್ಪಿದಲ್ಲಿ ತಾಲೂಕಿನಾದ್ಯಂತ ಬಿಜೆಪಿ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯೆ ಕಮಲಾಕ್ಷಿ, ಕ್ಷೇತ್ರ ಸಮಿತಿ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News