ಅಂಬೇಡ್ಕರ್ ಹೆಸರಿನಲ್ಲಿ ಮತೀಯ ಭಾವನೆ ಕೆರಳಿಸುವವರ ವಿರುದ್ಧ ದಲಿತರು ಧ್ವನಿಯೆತ್ತಬೇಕು: ಸಚಿವ ರೈ

Update: 2016-05-21 15:32 GMT

ಮಂಗಳೂರು, ಮೇ 21:ಅಂಬೇಡ್ಕರ್ ಹೆಸರಿನಲ್ಲಿ ಮತೀಯ ಭಾವನೆ ಕೆರಳಿಸುವ ಹಾಗೂ ರಾಜಕೀಯ ಲಾಭಕ್ಕಾಗಿ ಅಂಬೇಡ್ಕರ್ ಹೆಸರನ್ನು ಎಳೆದು ತಂದು ಜನರನ್ನು ತಪ್ಪುದಾರಿಗೆ ಎಳೆಯು ತ್ತಿರುವುದರ ವಿರುದ್ದ ದಲಿತರು ಧ್ವನಿಯೆತ್ತಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಅವರು ಇಂದು ಎನ್‌ಜಿಒ ಸಭಾಂಗಣದಲ್ಲಿ ಜಿಲ್ಲಾ ಬೌದ್ಧ ಮಹಾಸಭಾ ಏರ್ಪಡಿಸಿದ ಪವಿತ್ರ ಬುದ್ಧ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.ಅಂಬೇಡ್ಕರ್ ಜಯಂತಿ ಮುಂತಾದ ಸಂದರ್ಭಗಳಲ್ಲಿ ಹಿಂದೂ ಸಮಾಜೋತ್ಸವ ಆಚರಿಸುವ ಮೂಲಕ ಸಮಾಜವನ್ನು ವಿಘಟಿಸುವ ಕೃತ್ಯಗಳು ನಡೆಯುತ್ತಿವೆ. ಇಂತಹ ಶಕ್ತಿಗಳನ್ನು ದಲಿತರು ವಿರೋಧಿಸಬೇಕು ಎಂದು ಅವರು ಹೇಳಿದರು.
 
ಸ್ವಾತಂತ್ರ್ಯ ಬಂದರೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಸಮಾಜದಲ್ಲಿ ನಡೆಯುವ ಶೋಷಣೆ, ಅಸಮಾನತೆಯನ್ನು ನಿಲ್ಲಿಸುವ ಪ್ರಯತ್ನ ನಡೆಯಬೇಕು. ಆಮಿಷದ ಮತಾಂತರ ಎಂಬುದಿಲ್ಲ. ಮನೆಯಲ್ಲಿ ಗೌರವ ಇದ್ದರೆ ಯಾರೂ ಇನ್ನೊಂದು ಮನೆಗೆ ಹೋಗುವುದಿಲ್ಲ. ಮತೀಯ ಮನಸ್ಸುಗಳು ಸಮಾಜವನ್ನು ಗೊಂದಲಕ್ಕೆ ಈಡು ಮಾಡುತ್ತವೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಬುದ್ಧನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದೆ. ಆತನ ಸಂದೇಶಗಳನ್ನು ಪಾಲಿಸುತ್ತಿದ್ದರೆ ಸಮಾಜದಲ್ಲಿ ಅಶಾಂತಿ, ಅಸಹಿಷ್ಣುತೆ, ಸಂಶಯಗಳು ಇರುತ್ತಿರಲಿಲ್ಲ ಎಂದರು.

ಮಹಾಸಭಾ ಅಧ್ಯಕ್ಷ ಕಾಂತಪ್ಪಅಲಂಗಾರ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಸುಗತಪಾಲ ಭಂತೇಜಿ ಆಶೀರ್ವಚನ ನೀಡಿದರು. ಬೆಂಗಳೂರು ದಮ್ಮ ಸೆಂಟರ್‌ನ ಸುಧಾಕರ್ ರಾವ್ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಗಾಯಕ ಸಂಕಪ್ಪ ಕಾಂಚನ್‌ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ವಾಮಂಜೂರು, ಕೋಶಾಧಿಕಾರಿ ಪದ್ಮನಾಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News