ಮಂಗಳೂರು ವಿ.ವಿ.: ಪ್ರೊ.ಕೆ.ಚಿನ್ನಪ್ಪಗೌಡ ಹಾಗೂ ಪ್ರೊ.ಡಿ.ಶಿವಲಿಂಗಯ್ಯರಿಗೆ ಅಭಿನಂದನೆ

Update: 2016-05-21 17:53 GMT

ಕೊಣಾಜೆ, ಮೇ 21: ಕುಲಪತಿಗಳಾಗಿ ಆಯ್ಕೆಗೊಂಡಿರುವ ಹಾವೇರಿಯ ಜಾನಪದ ವಿವಿಯ ಪ್ರೊ.ಕೆ.ಚಿನ್ನಪ್ಪಗೌಡ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರೊ.ಡಿ.ಶಿವಲಿಂಗಯ್ಯರಿಗೆ ಅಭಿನಂದನಾ ಕಾರ್ಯಕ್ರಮ ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಶನಿವಾರ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವಿಶ್ವವಿದ್ಯಾನಿಲಯಗಳು ಕೇವಲ ಪದವಿ, ಸ್ನಾತಕೋತ್ತರ ಪದವಿ ನೀಡುವುದು ಮಾತ್ರ ಅದರ ಜವಾಬ್ದಾರಿ ಅಲ್ಲ. ಶಿಕ್ಷಿತ ಸಮುದಾಯ ದೇಶದ ಆಸ್ತಿಗಳಾಗಬೇಕಾದರೆ ವಿಶ್ವವಿದ್ಯಾನಿಲಯಗಳ ಪಾತ್ರವೂ ಪ್ರಮುಖವಾದುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಾವೇರಿಯ ಜಾನಪದ ವಿವಿ ಕುಲಪತಿಯಾಗಿ ಆಯ್ಕೆಯಾಗಿರುವ ಪ್ರೊ.ಕೆ.ಚಿನ್ನಪ್ಪ ಗೌಡ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಯಾಗಿ ನೇಮಕಗೊಂಡಿರುವ ಪ್ರೊ.ಡಿ.ಶಿವಲಿಂಗಯ್ಯರನ್ನು ಮಂಗಳೂರು ವಿ.ವಿ. ವತಿಯಿಂದ ಸನ್ಮಾನಿಸಲಾಯಿತು.

ಪ್ರೊ.ಕೆ.ಚಿನ್ನಪ್ಪ ಗೌಡರ ಬಗ್ಗೆ ಅಭಿನಂದನಾ ಭಾಷಣ ಮಾಡಿದ ಮಂಗಳೂರು ವಿ.ವಿ. ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಸುರೇಂದ್ರ ರಾವ್, ಸಜ್ಜನರು, ಪ್ರಾಮಾಣಿಕರು ಹಾಗೂ ಯೋಗ್ಯತೆ ಉಳ್ಳವರಿಗೆ ಒಂದಲ್ಲ ಒಂದು ದಿನ ಉತ್ತಮ ಅವಕಾಶಗಳು ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ಪ್ರೊ.ಕೆ.ಚಿನ್ನಪ್ಪ ಗೌಡರೇ ಸಾಕ್ಷಿಯಾಗಿದ್ದಾರೆ. ಬಾಲ್ಯದಿಂದಲೇ ಅವರ ಪರಿಶ್ರಮ, ಅಧ್ಯಯನಾಸಕ್ತಿ ಅವರನ್ನು ಶೈಕ್ಷಣಿಕವಾಗಿ ಅವರನ್ನು ಎತ್ತರಕ್ಕೆ ಬೆಳೆಸಿದೆ ಎಂದು ಹೇಳಿದರು.

ಪ್ರೊ.ಡಿ.ಶಿವಲಿಂಗಯ್ಯರ ಅಭಿನಂದನಾ ಭಾಷಣ ಮಾಡಿದ ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಸ್.ಸಿ.ಶರ್ಮ, ಪ್ರೊ.ಶಿವಲಿಂಗಯ್ಯ ಅವರ ಪ್ರಾಮಾಣಿಕ ವ್ಯಕ್ತಿತ್ವ ಹಾಗೂ ಅವರ ಪರಿಶ್ರಮ ಅವರನ್ನು ತುಮಕೂರು ವಿವಿ ಕುಲಸಚಿವ ಮತ್ತು ಇದೀಗ ಮೈಸೂರು ಮುಕ್ತ ವಿವಿಯ ಕುಲಪತಿ ಹುದ್ದೆಯಂತಹ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವಂತೆ ಮಾಡಿದ್ದು ಉನ್ನತ ಶಿಕ್ಷಣ ವಲಯದಲ್ಲಿ ಇವರಿಂದ ಕ್ರಾಂತಿಕಾರಿ ಬದಲಾವಣೆಯಾಗಲಿ ಎಂದು ಹಾರೈಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಾನಪದ ವಿವಿ ಕುಲಪತಿ ಪ್ರೊ.ಕೆ.ಚಿನ್ನಪ್ಪಗೌಡ, ಮನುಷ್ಯ ಪ್ರಯತ್ನವೇ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಂಗಳೂರು ವಿವಿಯಲ್ಲಿ ಕಳೆದ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಇಲ್ಲಿಯ ಅನುಭವವನ್ನು ದ್ರವ್ಯವಾಗಿಟ್ಟುಕೊಂಡು ಹಾವೇರಿಯ ಜಾನಪದ ವಿವಿಯನ್ನು ಸಾಂಸ್ಕೃತಿಕವಾಗಿ ಹಾಗೂ ಜನಪದ ಅಧ್ಯಯನಾಸಕ್ತರಿಗೆ, ಸಂಶೋಧಕರಿಗೆ ಅನುಕೂಲವಾಗುವಂತೆ ಮೂಲಭೂತ ಸಂಪನ್ಮೂಲ ಕೇಂದ್ರವನ್ನಾಗಿ ಬೆಳೆಸಿ ಮಾದರಿ ವಿವಿಯಾಗಿ ಕಟ್ಟುವ ಕನಸನ್ನು ಹೊತ್ತುಕೊಂಡಿದ್ದೇನೆ ಎಂದು ಹೇಳಿದರು.

ಪ್ರೊ.ಶಿವಲಿಂಗಯ್ಯ ಮಾತನಾಡಿ, ಪದವಿಯನ್ನು ಪೂರೈಸಿ ಬಳಿಕ ವಿದ್ಯಾರ್ಥಿ ದೆಸೆಯಲ್ಲಿ ಚುನಾವಣೆಗೆ ನಿಲ್ಲುವ ಹಂಬಲದಿಂದ ಸ್ನಾತಕೋತ್ತರ ಪದವಿಗೆ ಸೇರಿದ್ದೆ. ಆದರೆ ಬಳಿಕ ನಂತರ ಅಧ್ಯಯನಾಸಕ್ತಿ ನನ್ನ ದಿಕ್ಕನ್ನೇ ಬದಲಾಯಿಸಿತು. ಮಂಗಳೂರು ವಿವಿಯಲ್ಲಿ ಗ್ರಂಥಾಲಯ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆ, ವಿವಿಧ ಆಡಳಿತಾತ್ಮಕ ಅನುಭವದಿಂದ ತುಮಕೂರು ವಿವಿಯಲ್ಲಿ ಕುಲಸಚಿವ ಹಾಗೂ ಇದೀಗ ಮೈಸೂರು ಮುಕ್ತ ವಿವಿಯ ಕುಲಪತಿಯಾಗಿ ಆಯ್ಕೆಗೊಂಡಿದ್ದೇನೆ. ಮುಕ್ತ ವಿವಿಯಲ್ಲಿ ಎದುರಾಗಿರುವ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಭಿನಂದನಾ ಸಮಿತಿಯ ಪ್ರೊ.ಬಾಲಕೃಷ್ಣ ರಾವ್, ಪ್ರಭಾಕರ್ ನೀರುಮಾರ್ಗ ಉಪಸ್ಥಿತರಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು ಸ್ವಾಗತಿಸಿದರು. ಪರಿಕ್ಷಾಂಗ ಕುಲಸಚಿವ ಎ.ಎಂ.ಖಾನ್ ವಂದಿಸಿದರು. ಸಹಾಯಕ ಪ್ರಾದ್ಯಾಪಕ ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಕೆ.ಚಿನ್ನಪ್ಪಗೌಡ ಹಾಗೂ ಪ್ರೊ.ಶಿವಲಿಂಗಯ್ಯರ ಬಗ್ಗೆ ಡಾ.ಶಿವರಾಮ ಶೆಟ್ಟಿ, ಡಾ.ಕೈಸರ್‌ಖಾನ್, ಡಾ.ಪ್ರಶಾಂತ್ ನಾಯ್ಕಿ, ಪ್ರೊ.ಬಾಲಕೃಷ್ಣ ರಾವ್, ಪ್ರಭಾಕರ ನೀರುಮಾರ್ಗ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News