ಬಂಟ್ವಾಳ: ಬಿಜೆಪಿಯಿಂದ ಕೀಳು ಮಟ್ಟದ ರಾಜಕೀಯ - ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

Update: 2016-05-22 12:54 GMT

ಬಂಟ್ವಾಳ, ಮೇ 22: ತಾಲೂಕಿನಾದ್ಯಂತ ಮೇ 17ರಂದು ಬೀಸಿದ ಬಿರುಗಾಳಿಯ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿದೆ ಎನ್ನುವ ಬಿಜೆಪಿ ಮುಖಂಡರ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ಬಂಟ್ವಾಳ ತಾಲೂಕು ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ. ರವಿವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಮೇ 17ರಂದು ಪ್ರಕೃತಿ ವಿಕೋಪಕ್ಕೆ ತುತ್ತಾದ ತಾಲೂಕಿನ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ಸರಕಾರದಿಂದ ಯಾವುದೇ ರೀತಿಯಲ್ಲಿ ಸ್ಪಂದನೆ ದೊರೆತಿಲ್ಲ ಎಂಬ ಆರೋಪದಲ್ಲಿ ಬಿಜೆಪಿ ಮುಖಂಡರು ತೊಡಗಿದ್ದಾರೆ. ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳನ್ನು ಕಂಡು ಕಂಗಾಲಾಗಿರುವ ಬಿಜೆಪಿ ಮುಖಂಡರು ನೀರಿನಿಂದ ಹೊರ ತೆಗೆದ ಮೀನಿನಂತೆ ವಿಲವಿಲನೆ ಚಡಪಡಿಸುತ್ತಿದ್ದು ವಿನಾಕಾರಣ ಸುಳ್ಳು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಘಟನೆ ನಡೆದ ರಾತ್ರಿಯೇ ಕಾಂಗ್ರೆಸ್‌ನ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಸದಸ್ಯರು ಸ್ಥಳಕ್ಕೆ ಧಾವಿಸಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿ ಸರಕಾರದಿಂದ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ರಸ್ತೆಗೆ ಬಿದ್ದಿದ್ದ ಮರಗಳು, ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲೂ ಭಾಗಿಯಾಗಿದ್ದರು ಎಂದು ತಿಳಿಸಿದ ಅವರು, ಅಂದು ರಾತ್ರಿ ಬೆಂಗಳೂರಿನಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯವರಿಗೆ ತಕ್ಷಣ ಮಾಹಿತಿ ನೀಡಿದ್ದು ಅವರ ಸೂಚನೆಯಂತೆ ಮಂಗಳೂರು ಸಹಾಯಕ ಆಯುಕ್ತರು ಹಾಗೂ ಅಧಿಕಾರಿಗಳ ತಂಡ ಮರುದಿನ ಬೆಳಗ್ಗೆಯಿಂದಲೇ ಪರಿಹಾರ ಕಾರ್ಯಚರಣೆಂುಲ್ಲಿ ತೊಡಗಿದೆ ಎಂದು ಹೇಳಿದರು.
ಘಟನೆಯಿಂದ ಭಾಗಶಃ ಹಾನಿಗೊಂಡಿರುವ 322 ಮನೆಗಳ ಪೈಕಿ 160 ಮನೆಗಳಿಗೆ ಈಗಾಗಲೇ 15 ಲಕ್ಷ ರೂಪಾಯಿ ಪರಿಹಾರ ಧನದ ಚೆಕ್ ವಿತರಿಸಲಾಗಿದೆ. ಭಾಗಶಃ ಹಾನಿಗೊಂಡ ಉಳಿದ ಸಂತ್ರಸ್ತರಿಗೆ ಹಾಗೂ ಪೂರ್ಣ ಪ್ರಮಾಣದಲ್ಲಿ ಮನೆ ಮತ್ತು ತೋಟಗಳನ್ನು ಕಳಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ವೇ ಕಾರ್ಯ ಭರದಿಂದ ಸಾಗಿದ್ದು ಶೀಘ್ರದಲ್ಲೆ ಪರಿಹಾರ ವಿರಿಸಲಾಗುವುದು ಎಂದು ತಿಳಿಸಿದರು.

ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಸಾಂತ್ವಾನ ನೀಡುವ ಬದಲು ಅಪಪ್ರಚಾರದಲ್ಲಿ ತೊಡಗುವ ಮೂಲಕ ಬಿಜೆಪಿಯವರು ಅತ್ಯಂತ ಕೀಳು ಮಟ್ಟದ ರಾಜಕೀಯ ಇಳಿದಿದ್ದಾರೆ. ಅಪಪ್ರಚಾರವನ್ನು ಕೈಬಿಟ್ಟು ಇನ್ನಾದರೂ ಬಿಜೆಪಿ ನಾಯಕರು ಜನಪರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಅವರು ಚಾಟಿ ಬೀಸಿದರು.

ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ, ಬಿಜೆಪಿಯ ಆರೋಪ ಆಧಾರ ರಹಿತವಾಗಿದ್ದು ಬಿಜೆಪಿಯ ಮುಖಂಡರು ಎಷ್ಟೇ ಟೀಕೆ, ಆರೋಪ ಮಾಡಿದರೂ ಕಾಂಗ್ರೆಸ್ ಅಭಿವೃದ್ಧಿ ಕೆಲಸದಿಂದ ಹಿಂದೆ ಉಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬೂಡಾ ಅಧ್ಯಕ್ಷ ಪಿಯೂಸ್ ರೊಡ್ರಿಗಸ್ ಮಾತನಾಡಿ, ಜಿಲ್ಲೆಯಲ್ಲೇ ಅತೀ ಅಬ್ಬರದಿಂದ ಸುಂಟರಗಾಳಿ ಬೀಸಿದ್ದರಿಂದ ಬಂಟ್ವಾಳ ತಾಲೂಕಿನಲ್ಲಿ 480 ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಕಂಬದ ಮೇಲೆ 600 ಕೆ.ಜಿ.ಗಿಂತ ಅಧಿಕ ಭಾರ ಬಿದ್ದಾಗ ಕಂಬಗಳು ಮುರಿಯುವುದು ಸಾಮಾನ್ಯವಾಗಿದೆ. ಕೇವಲ ಗಾಳಿಗೆ ತಾಲೂಕಿನ ಎಲ್ಲೂ ಕಂಬಗಳು ಮುರಿದು ಬಿದ್ದಿಲ್ಲ. ಈ ಬಗ್ಗೆ ಆರೋಪ ಮಾಡುವವರು ವೈಜ್ಞಾನಿಕತೆ ಹಾಗೂ ತಾಂತ್ರಿಕತೆಯನ್ನು ಅರಿತುಕೊಂಡ ಬಳಿಕ ಆರೋಪಗಳನ್ನು ಮಾಡಲಿ ಎಂದು ಸವಾಲು ಹಾಕಿದರು.  ಸುದ್ದಿಗೋಷ್ಟಿಯಲ್ಲಿ ಜಿಪಂ ಸದಸ್ಯ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಅಧ್ಯಕ್ಷ ರಾಮಾಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News