ಉಜಿರೆ ಶ್ರೀ ಧರ್ಮಸ್ಥಳ ವಿಜ್ಞಾನ ಕಾಲೇಜಿನಲ್ಲಿ ಪಿಎಚ್‌ಡಿ ಕೇಂದ್ರ ವಾರ್ಷಿಕೋತ್ಸವ ಉದ್ಘಾಟಣೆ

Update: 2016-05-22 16:15 GMT

ಬೆಳ್ತಂಗಡಿ: ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳ ಏಳಿಗೆಗೆ ಅನುಕೂಲ ಮಾಡಿಕೊಡುತ್ತಿರುಳಿವುದು ಶ್ಲಾಘನೀಯ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಆರ್. ಪಾಟೀಲ್ ಹೇಳಿದರು.

ಅವರು ಭಾನುವಾರ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಪಿಎಚ್‌ಡಿ ಕೇಂದ್ರವನ್ನು ಹಾಗೂ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಯೋಗ ಮತ್ತು ಪ್ರಕೃತಿ ಚಿಕತ್ಸೆ ಯಾವುದೇ ಅಡ್ಡ ಪರಿಣಾಮವಿಲ್ಲದ ಭಾರತೀಯ ವೈದ್ಯಪದ್ಧತಿಯ ಚಿಕಿತ್ಸೆಯಾಗಿದೆ. ಈ ಪದ್ಧತಿಯನ್ನು ಜಗತ್ತು ಒಪ್ಪಿಕೊಳ್ಳತೊಡಗಿದೆ. ಹೀಗಾಗಿ ಈ ವೈದ್ಯಪದ್ಧತಿಯನ್ನು ಕಲಿಯಲು ವಿದೇಶಗಳಿಂದ ನೂರಾರು ವಿದ್ಯಾರ್ಥಿಗಳು ಭಾರತಕ್ಕೆ ಬರುತ್ತಿದ್ದಾರೆ. ಆಧುನಿಕ ಜೀವನ ಪದ್ಧತಿಯಿಂದಾಗುವ ಕೆಟ್ಟ ಪರಿಣಾಮಗಳಿಗೆ ಪ್ರಕೃತಿ ಚಿಕಿತ್ಸೆ ಹೆಚ್ಚು ಉಪಯುಕ್ತಕರವಾಗಿದೆ ಎಂದ ಅವರು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಪರಿಣಾಮಕಾರಿ ಕೆಲಸ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ಧ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರು ಇಂದಿನ ಆಹಾರ ಪದ್ದತಿ ನಮ್ಮ ಸಂಪೂರ್ಣ ಜೀವನವನ್ನು ಹಾಳುಗೆಡವುತ್ತಿದೆ. ಸರಿಯಾದ ಆಹಾರ ಕ್ರಮವಿಲ್ಲದೆ ಬದುಕು ಅನಿಯಂತ್ರಿತವಾಗಿದೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಔಷಧಿ ರೂಪದಲ್ಲಿಯೇ ಅಥವಾ ಬದುಕನ್ನು ನಿಯಂತ್ರಿಸಲು ಇರುವುದೇ ಎಂಬುದನ್ನು ಅದನ್ನು ಅರಿತವರು ತಿಳಿದುಕೊಳ್ಳುತ್ತಾರೆ ಎಂದ ಅವರು ಸರಕಾರಗಳು ಆಯುಷ್ ವಿಭಾಗದ ಮೂಲಕ ತಾಲೂಕು ಮಟ್ಟದಲ್ಲಿ ಪ್ರಕೃತಿ ಚಿಕಿತ್ಸಾ ಘಟಕಗಳನ್ನು ತೆರೆಯಲು ಅನುಕೂಲ ಮಾಡಿಕೊಟ್ಟಿದೆ ಎಂದು ವಿವರಿಸಿದರು.

ಈ ಸಂದರ್ಭ ಸಚಿವರು ಕಾಲೇಜಿನ ಸ್ಮರಣ ಸಂಚಿಕೆ ಸೃಷ್ಟಿಯನ್ನು ಬಿಡುಗಡೆ ಮಾಡಿದರು. ಕಾಲೇಜಿನಲ್ಲಿ ಶೈಕ್ಷಣಿಕವಾಗಿ ಹೆಚ್ಚು ಅಂಕಗಳನ್ನು ಪಡೆದ ಹಾಗೂ ಕ್ರೀಡಾಚಟುವಟಿಕೆಗಳ ಸಾಧಕರಿಗೆ ಬಹುಮಾನಗಳನ್ನು ವಿತರಿಸಲಾಯಿತು.

 ಕಾಲೇಜಿನ ಪ್ರಾಚಾರ್ಯ ಡಾ ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಡಾ ಚಂದ್ರಕಾಂತ ವಾರ್ಷಿಕ ವರದಿಯನ್ನು ಪವರ್ ಪಾಯಿಂಟ್ ಮೂಲಕ ಮಂಡಿಸಿದರು. ಡಾ ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಡಾ ಜಾಸ್ಮಿನ್ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News