ಎತ್ತಿನಹೊಳೆ ಯೋಜನೆ ವಿರುದ್ಧ ಸರ್ವ ಪಕ್ಷ ನಿಯೋಗದೊಂದಿಗೆ ಸಿಎಂ ಭೇಟಿ: ವಿಜಯಕುಮಾರ್ ಶೆಟ್ಟಿ

Update: 2016-05-23 09:01 GMT

 ಮಂಗಳೂರು, ಮೇ 23: ಎತ್ತಿನಹೊಳೆ ಯೋಜನೆಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿರುವ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯು ಶೀಘ್ರದಲ್ಲೇ ಸರ್ವ ಪಕ್ಷ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಸಮಿತಿಯ ಅಧ್ಯಕ್ಷ ವಿಜಯ್‌ ಕುಮಾರ್ ಶೆಟ್ಟಿ ಇಂದಿಲ್ಲಿ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಗೆ ಸಂಬಂಧಿಸಿ ಸಭೆ ಕರೆಯುವುದಾಗಿ ಹೇಳಿದ್ದ ಮುಖ್ಯಮಂತ್ರಿಯವರು ಈವರೆಗೂ ಸಭೆ ಕರೆದು ಚರ್ಚಿಸಿಲ್ಲ. ಆದ್ದರಿಂದ ನಮ್ಮ ಹೋರಾಟವನ್ನು ಬೆಂಗಳೂರಿಗೆ ಕೊಂಡೊಯ್ಯುವುದಾಗಿ ಅವರು ಹೇಳಿದರು.ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೂಡ ಭೇಟಿಯಾಗಿ ಚರ್ಚಿಸುವುದಾಗಿ ಹೇಳಿದರಲ್ಲದೆ, ಮುಂದಿನ ವಾರ ಜಿಲ್ಲೆಗೆ ಭೇಟಿ ನೀಡಲಿರುವ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಗಮನ ಸೆಳೆಯುವ ನಿಟ್ಟಿನಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್, ಸ್ಥಳೀಯ ಶಾಸಕರು ಮತ್ತು ವಿವಿಧ ಧರ್ಮಗಳ ಮುಖಂಡರನ್ನೊಳಗೊಂಡ ನಿಯೋಗವು ಭೇಟಿಯಾಗಲಿದೆ ಎಂದು ವಿಜಯಕುಮಾರ್ ಶೆಟ್ಟಿ ತಿಳಿಸಿದರು.

ಎತ್ತಿನಹೊಳೆ ಯೋಜನೆ ವಿರುದ್ಧ ಇತ್ತೀಚೆಗೆ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಕರೆ ನೀಡಿದ್ದ ದ.ಕ. ಜಿಲ್ಲಾ ಬಂದ್‌ಗೆ ಜಾತಿ, ಧರ್ಮ ಮರೆತು ಜಿಲ್ಲೆಯ ಜನತೆ ಪಾಲ್ಗೊಂಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಮುಂದೆಯೂ ಹೋರಾಟಕ್ಕೆ ಕೈಜೋಡಿಸುವಂತೆ ಇದೇ ಸಂದರ್ಭದಲ್ಲಿ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದರು.

ಖಾದರ್ ಹೇಳಿಕೆಗೆ ಖಂಡನೆ

ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ‘ಎತ್ತಿನಹೊಳೆ ಯೋಜನೆ ಮಾಡಿಯೇ ಸಿದ್ಧ’ ಎಂಬ ಧಾಟಿಯಲ್ಲಿ ಮಾತನಾಡಿರುವುದು ನೋವು ತಂದಿದೆ. ಅವರ ಹೇಳಿಕೆಯನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಸಚಿವರಾಗಿ, ಶಾಸಕನಾಗಿ, ಜನರ ಪ್ರತಿನಿಧಿಯಾಗಿ ಅವರು ಈ ರೀತಿಯ ಹೇಳಿಕೆ ನೀಡುವ ಮೂಲಕ ಜಿಲ್ಲೆಯ ಜನರನ್ನು ಅಪಮಾನಿಸಿದ್ದಾರೆ. ಆದ್ದರಿಂದ ಅವರು ಜಿಲ್ಲೆಯ ಧರ್ಮಗುರುಗಳ ಸಹಿತ ಜನತೆಯ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಪೂಜಾರಿಗೆ ಅಭಿನಂದನೆಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟದ ಪರವಾಗಿ ನಿಂತಿರುವ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ಸಚಿವ ಖಾದರ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವುದನ್ನು ಅಭಿನಂದಿಸುತ್ತೇವೆ.

ಎತ್ತಿನಹೊಳೆ ಯೋಜನೆ ವಿರುದ್ಧ ಜನಾರ್ದನ ಪೂಜಾರಿಯವರ ಹೇಳಿಕೆ ಸರಿಯಾಗಿದೆ ಎಂದರು ವಿಜಯಕುಮಾರ್ ಶೆಟ್ಟಿ ಹೇಳಿದರು.‘ಮುಖ್ಯಮಂತ್ರಿಗೆ ಜನರ ಧ್ವನಿ ತಲುಪಿಸಲಿ’ಸಮಿತಿಯ ಮಾರ್ಗದರ್ಶಕ ಮಂಡಳಿ ಸದಸ್ಯ ಎಂ.ಜಿ. ಹೆಗಡೆ ಮಾತನಾಡಿ, ಯೊಜನೆಗೆ ದ.ಕ. ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿರುವುದರಿಂದ ಜಿಲ್ಲೆಯ ಜನತೆಯ ಧ್ವನಿಯನ್ನು ಮುಖ್ಯಮಂತ್ರಿಗೆ ತಲುಪಿಸಲಿ ಎಂಬುದನ್ನು ನಾವು ಸಚಿವರಾದ ಖಾದರ್ ಅವರಿಂದ ನಿರೀಕ್ಷಿಸುವುದಾಗಿ ಹೇಳಿದರು.

ಯೋಜನೆ ಅವೈಜ್ಞಾನಿಕವಾಗಿರುವುದರಿಂದ ಈ ಬಗ್ಗೆ ಪುನರ್ ಪರಿಶೀಲಿಸುವಂತೆ ಮುಖ್ಯಮಂತ್ರಿಯವರನ್ನು ಯಾಕೆ ಆಗ್ರಹಿಸಬಾರದು ಎಂದು ಅವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ಯೋಗೀಶ್ ಶೆಟ್ಟಿ ಜಪ್ಪು, ಶಶಿಧರ್ ಕೊಳಂಬೆ, ದಿನಕರ ಶೆಟ್ಟಿ, ಸಮಿತಿಯ ಆನಂದ ಶೆಟ್ಟಿ ಅಡ್ಯಾರ್, ಮಾಜಿ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ, ನಾಗರಾಜ್, ಪ್ರಶಾಂತ್ ರಾವ್ ಕಡಬ, ಗೀತಾ ಬಾಯಿ, ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News