ಕರಾವಳಿಯಲ್ಲಿ ಬೂತಾಯಿ, ಬಂಗುಡೆ ಮೀನಿನ ಪ್ರಮಾಣ ಇಳಿಕೆ

Update: 2016-05-23 11:19 GMT

ಮಂಗಳೂರು, ಮೇ 23: ಹಾಲಿ ಮೀನುಗಾರಿಕಾ ಋತುವಿನಲ್ಲಿ ಹಿಡಿಯಲಾದ ಒಟ್ಟು ಮೀನಿನ ಪ್ರಮಾಣ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಸರಾಸರಿಗಿಂತ ಕಡಿಮೆಯಾಗಿಲ್ಲ. ಆದರೆ ಹಿಂದಿನ ವರ್ಷಗಳಲ್ಲಿ ಹೇರಳವಾಗಿ ದೊರೆಯುತ್ತಿದ್ದ ಬಂಗುಡೆ, ಬೂತಾಯಿ ಮೀನಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಜೂನ್ 1ರಿಂದ ಜುಲೈ 30ರವರೆಗೆ ಎಲ್ಲಾ ಯಾಂತ್ರೀಕೃತ ದೋಣಿಯ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಈ ಹಿಂದೆ ಆಳ ಸಮುದ್ರದ ದೋಣಿಗಳಿಗೆ ಮೀನುಗಾರಿಕೆಗೆ ಒಂದು ವಾರ ಕಾಲಾವಕಾಶ ನೀಡುತ್ತಿದ್ದ ಕಾರಣ ಸಮುದ್ರದಲ್ಲಿ ಮೀನು ಹಿಡಿಯಲು ಒಂದು ವಾರದ ಅವಕಾಶ ಲಭಿಸುತ್ತಿತ್ತು.
 2014-15ನೆ ಸಾಲಿನಲ್ಲಿ ಬೂತಾಯಿ (ಸಾರ್ಡಿನಿಯಾ) 26,034 ಮೆಟ್ರಿಕ್ ಟನ್ ದೊರೆತಿತ್ತು. 2015-16ರಲ್ಲಿ 10,644 ಮೆಟ್ರಿಕ್ ಟನ್ ಮೀನು ದೊರೆತಿದ್ದು, ಒಟ್ಟು 15,390 ಮೆಟ್ರಿಕ್ ಟನ್ ಕಡಿಮೆ ದೊರೆತಿದೆ. ಉಳಿದಂತೆ ಕರಾವಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ದೊರೆಯುತ್ತಿದ್ದ ಬಂಗುಡೆ ಮೀನು ಕಳೆದ ವರ್ಷ 22,619 ಮೆಟ್ರಿಕ್ ಟನ್ ದೊರೆತಿದ್ದು, ಈ ಬಾರಿ 20,239ಮೆಟ್ರಿಕ್ ಟನ್ ದೊರೆತಿದೆ. 2,380 ಮೆಟ್ರಿಕ್ ಟನ್ ಬಂಗುಡೆ ಮೀನು ಕಡಿಮೆ ಪ್ರಮಾಣದಲ್ಲಿ ದೊರೆತಿದೆ.

ಜಿಲ್ಲೆಯಲ್ಲಿ 2015-16ನೆ ಸಾಲಿನ ಆರ್ಥಿಕ ವರ್ಷದಲ್ಲಿ 1,51,458 ಮೆಟ್ರಿಕ್ ಟನ್ (ವೌಲ್ಯ 1,37,053.95ಲಕ್ಷ ರೂ.)ಮೀನು ಹಿಡಿಯಲಾಗಿದೆ. ಹಿಂದಿನ ವರ್ಷ 1,50,525(ವೌಲ್ಯ 1,07,56.58 ಲಕ್ಷ ರೂ.)ಮೆಟ್ರಿಕ್ ಟನ್ ಮೀನಿನ ಇಳುವರಿ ದೊರೆತಿದೆ. ಹಾಲಿ ಮೀನುಗಾರಿಕಾ ಋತುವಿನಲ್ಲಿ ರಾತ್ರಿ ಬೆಳಕನ್ನು ಬೀರಿ ಮೀನು ಹಿಡಿಯುವ ಆಧುನಿಕ ತಂತ್ರಜ್ಞಾನದೊಂದಿಗೆ ಹೆಚ್ಚಿನ ಮೀನು ಹಿಡಿಯುವ ಪ್ರಯತ್ನ ನಡೆದಿದೆ. ಆದರೆ ಕೆಲವು ಜಾತಿಯ ಮೀನುಗಳು ಕಡಿಮೆ ಪ್ರಮಾಣದಲ್ಲಿ ದೊರೆತಿದೆ. 2015ರ ಫೆಬ್ರವರಿಯಲ್ಲಿ 19,761 ಮೆಟ್ರಿಕ್ ಟನ್ ಮೀನಿನ ಇಳುವರಿ ದೊರೆತಿದ್ದು, 2016ರ ಮಾರ್ಚ್ ತಿಂಗಳಲ್ಲಿ 20,323 ಮೆಟ್ರಿಕ್ ಟನ್ ಹಾಗೂ ಜನವರಿಯಲ್ಲಿ 16,824 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿದೆ.

ಉಳಿದಂತೆ ಮೀನುಗಾರಿಕಾ ಇಲಾಖಾ ವರದಿಯ ಪ್ರಕಾರ ಕಳೆದ ಸಪ್ಟೆಂಬರ್ ತಿಂಗಳಲ್ಲಿ 17,781 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿದೆ. ಉಳಿದಂತೆ ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ 9,067 ಮೆಟ್ರಿಕ್‌ಟನ್, ಮೇ ತಿಂಗಳಲ್ಲಿ 16,056 ಮೆಟ್ರಿಕ್ ಟನ್,ಆಗಸ್ಟ್ ತಿಂಗಳಲ್ಲಿ 9,193 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿದೆ.

ಕರಾವಳಿಯಲ್ಲಿ ದೊರೆತಿರುವ ವಿವಿಧ ಜಾತಿಯ ಮೀನುಗಳಲ್ಲಿ ಪ್ರಮುಖವಾಗಿ ಬೊಂಡಾಸ್, ಮದ್ಮಲ್ (ರಾಣಿ ಮೀನು), ಕಪ್ಪೆ ಬೊಂಡಾಸ್, ಡಿಸ್ಕೋ, ಮುರು ಮೀನು, ಕಲ್ಲೂರು, ಅಂಜಲ್, ಸಿಗಡಿ, ಕೊಲ್ಲತರು, ಅರಣೆ ಮೀನು, ಪಾಂಬೋಲು(ರಿಬ್ಬನ್ ಫಿಶ್), ಬಂಗುಡೆ, ಬೂತಾಯಿ ಪ್ರಮುಖ ಜಾತಿಯವುಗಳಾಗಿವೆ. ಈ ಪೈಕಿ ಮದ್ಮಲ್ ಮೀನು ಎಂದು ಕರೆಯಲ್ಪಡುವ ಮೀನು ಗರಿಷ್ಠವಾಗಿ (22,070ಮೆಟ್ರಿಕ್‌ಟನ್) ಲಭಿಸಿದೆ.

ಮೀನಿನ ಕಾರ್ಖಾನೆಗಳಲ್ಲಿ ಮೀನಿನ ಗೊಬ್ಬರ ಮತ್ತು ಮೀನಿನ ಎಣ್ಣೆ ತೆಗೆಯಲು ದೊಡ್ಡ ಪ್ರಮಾಣದಲ್ಲಿ ಬೂತಾಯಿ ಮೀನು ಬಳಕೆಯಾಗುತ್ತದೆ. ಆದರೆ ಈ ಬಾರಿ ಬೂತಾಯಿ ಮೀನಿನ ಕೊರತೆಯಿಂದಾಗಿ ಮೀನಿನ ಕಾರ್ಖಾನೆಗಳಿಗೂ ಸ್ವಲ್ಪ ಪ್ರಮಾಣದ ಅಡಚಣೆಯಾಗುವ ಸಾಧ್ಯತೆ ಇದೆ ಎನ್ನುವುದು ದಕ್ಕೆಯ ಮೀನುಗಾರರ ಅಭಿಪ್ರಾಯ.

‘‘ಈ ಬಾರಿ ಕೆಲವು ಜಾತಿಯ ಮೀನಿನ ಇಳುವರಿ ನಿರೀಕ್ಷಿತ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ದೊರೆತಿದ್ದರೂ, ಸರಾಸರಿ ಪ್ರಮಾಣಕ್ಕೆ ಹೋಲಿಸಿದಾಗ ಹಿಂದಿನ ವರ್ಷಗಳಿಂತ ಕಡಿಮೆಯಾಗಿಲ್ಲ’’ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಗಣೇಶ್ ವಾರ್ತಾಭಾರತಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News