ಸಂಗೀತ ಕ್ಷೇತ್ರದ ಯಶಸ್ಸಿಗೆ ಮನೋಧರ್ಮ ಮುಖ್ಯ: ಡಾ. ವರದರಾಜ ಚಂದ್ರಗಿರಿ

Update: 2016-05-23 12:03 GMT

ಪುತ್ತೂರು, ಮೇ 23: ಸಂಗೀತ ಕ್ಷೇತ್ರದ ಯಶಸ್ಸಿಗೆ ಮನೋಧರ್ಮ ಮುಖ್ಯ. ಸಂಗೀತದಲ್ಲಿ ಮನೋಧರ್ಮವನ್ನು ಅಳವಡಿಕೊಂಡಾಗ ಮಾತ್ರ ಅದರಲ್ಲಿ ಪರಿಪೂರ್ಣತೆ ಕಾಣಲು ಸಾಧ್ಯ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಹೇಳಿದ್ದಾರೆ.

 ಪುತ್ತೂರಿನ ಕೊಂಬೆಟ್ಟು ಸಾಧನಾ ಸಂಗೀತ ಪ್ರತಿಷ್ಠಾನದ ವತಿಯಿಂದ ಮೇ 20ರಿಂದ 3 ದಿನಗಳ ಕಾಲ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಬಿರ ಸಭಾಗಾನ ಕಾರ್ಯಕ್ರಮದ ಸನ್ಮಾನ-ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಗೀತ ಕ್ಷೇತ್ರದ ಅಭಿವೃದ್ಧಿಗೆ ಇಂತಹ ಶಿಬಿರಗಳು ಹೆಚ್ಚು ಪರಿಣಾಮಕಾರಿ ವೇದಿಕೆಯಾಗಿದ್ದು, ಸಂಗೀತ ಕಛೇರಿಗಳನ್ನು ಹೆಚ್ಚು ಕೇಳುತ್ತಿರಬೇಕು, ಕೇಳುವವರಿಗೂ ಮನೋಧರ್ಮ ಇರಬೇಕು ಎಂದು ತಿಳಿಸಿದರು.

ಸಂಸ್ಥೆಯ ವತಿಯಿಂದ ಉಡುಪಿಯ ಹಿರಿಯ ಸಂಗೀತ ವಿದ್ವಾಂಸ, ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಧನಾ ಸಂಗೀತ ಪ್ರತಿಷ್ಠಾನ ನಡೆಸುತ್ತಿರುವ ಈ ಶಿಬಿರವೇ ಸಂಗೀತದ ಸಂಪನ್ಮೂಲ ಆಗಿದೆ. ನನ್ನ ಸಂಗೀತದ ತವರು ಊರಿನಲ್ಲಿ ದೊರೆತ ಈ ಸನ್ಮಾನವನ್ನು ಈ ಊರಿನ ನನ್ನ ಗುರುಗಳಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಶಿಬಿರದ ಸಂಪನ್ಮೂಲ ವ್ಯಕ್ತಿ ವಿದುಷಿ ಸುಚಿತ್ರಾ ಹೊಳ್ಳ ಮಾತನಾಡಿ, ಈ ಬಾರಿಯ ಶಿಬಿರದಲ್ಲಿ 139 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂದರು.

ಸಾಧನಾ ಸಂಗೀತ ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರ ಹೊಳ್ಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿದುಷಿ ಶ್ಯಾಮಲಾ ನಾಗರಾಜ್ ಬೆಳ್ತಂಗಡಿ, ಸಾಧನಾ ಸಂಗೀತ ಪ್ರತಿಷ್ಠಾನದ ಮೆನೇಜಿಂಗ್ ಟ್ರಸ್ಟಿ ಹರೀಶ್ ಹೊಳ್ಳ ಇದ್ದರು.

ಶಿಬಿರಾರ್ಥಿಗಳಾದ ಕೃಷ್ಣವೇಣಿ, ಉಮಾಮಹೇಶ್ವರಿ, ನಿಧಿ, ಮಧುಶ್ರೀ, ಪ್ರಿಯಂವದಾ ಅನಿಸಿಕೆ ವ್ಯಕ್ತಪಡಿಸಿದರು. ವಿದುಷಿ ಸುಚಿತ್ರಾ ಹೊಳ್ಳ ಸ್ವಾಗತಿಸಿ, ಸುಮನಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News