ಪೋಷಕರಲ್ಲಿ ಸಂಸ್ಕೃತಿಯ ಪ್ರವೃತ್ತಿ ಉಂಟಾದಾಗ ಮಕ್ಕಳಲ್ಲಿ ಸಂಸ್ಕೃತಿ ಬೆಳೆಯುತ್ತದೆ: ವಿದ್ಯಾವಲ್ಲಭ ಶ್ರೀ

Update: 2016-05-23 12:52 GMT

ಸುಳ್ಯ, ಮೇ 23: ಯಾವಾಗ ಮಕ್ಕಳ ಪೋಷಕರಲ್ಲಿ ಸಂಸ್ಕೃತಿಯ ಪ್ರವೃತ್ತಿ ಉಂಟಾಗುತ್ತದೆಯೋ ಆವಾಗ ಮಕ್ಕಳಲ್ಲಿ ಭಾರತೀಯತೆ, ನಮ್ಮ ಸಂಸ್ಕೃತಿ ಬೆಳೆಯುತ್ತದೆ ಎಂದು ಉಡುಪಿ ಕಾಣಿಯೂರು ಮಠದ ವಿದ್ಯಾವಲ್ಲ ತೀರ್ಥ ಸ್ವಾಮೀಜಿ ಹೇಳಿದರು.

ಸುಳ್ಯ ಹಳೆಗೇಟು ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ರವಿವಾರ ನಡೆದ ವೇದ-ಯೋಗ-ಕಲಾ ಶಿಬಿರದ ಸಮಾಪನಾ ಹಾಗೂ ಶ್ರೀ ಕೇಶವ ಸ್ಮತಿ - 2016 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ಶ್ರೀ ಶಾಂತಿವನ ಟ್ರಸ್ಟ್ಟ್ ಧರ್ಮಸ್ಥಳದ ಆಡಳಿತಾಧಿಕಾರಿ ಮಂಜುನಾಥ ಎಂ.ಎನ್. ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ ಮಾತನಾಡಿ, ನಾವು ಇಂದು ಆಧುನಿಕ ವಿದ್ಯಾಮಾನದಲ್ಲಿ ವೇದಾಧ್ಯಯನದಂತಹ ವ್ಯವಸ್ಥೆಗಳು ಏಕೆ ಎನ್ನುವ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತದೆ. ಆದರೆ ಇದು ನಮ್ಮ ಭಾರತೀಯ ಸಂಸ್ಕೃತಿಯ ಮೂಲ. ನಂಬಿಕೆ ಆಧಾರದಲ್ಲಿ ಭಾರತೀಯ ಧರ್ಮ ಇದೆ. ಈಗಿನ ಶೈಕ್ಷಣಿಕ ವ್ಯವಸ್ಥೆ ಕೇವಲ ಶಿಕ್ಷಣ ವೌಲ್ಯಗಳನ್ನು ಮಾತ್ರ ಹೊಂದಿದೆ. ಆದರೆ ಜೀವನದ ಧರ್ಮ ಕಡಿಮೆಯಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳನ್ನು ರೋಬೋಟನ್ನಾಗಿ ಬೆಳೆಸುವುದು ಸರಿಯಲ್ಲ. ಅದರ ಬದಲು ಸಂಸ್ಕಾರಯುತ ಬದುಕು ಕಟ್ಟಿಕೊಡುವ ಕೆಲಸ ಆಗಬೇಕೆಂದರು.

ಶ್ರೀ ಕೇಶವ ವೇದಸ್ಮತಿ-2016 ನ್ನು ವೇ.ಮೂ. ಬ್ರಹ್ಮಶ್ರೀ ಶಂಕರನಾರಾಯಣ ಘನಪಾಠಿ ಅವರಿಗೆ, ಶ್ರೀ ಕೇಶವ ಯೋಗಸ್ಮತಿ-2016 ನ್ನು ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿ ಎಂ.ಎಸ್. ನಾಗರಾಜರಾವ್ ಶಿವಮೊಗ್ಗರಿಗೆ, ಶ್ರೀ ಕೇಶವಕಲಾಸ್ಮತಿ-2016 ನ್ನು ಬ್ರಹ್ಮವಾಹಕ ರಾಧಾಕೃಷ್ಣ ಪುತ್ತೂರಾಯ ಇವರಿಗೆ, ವಗೆನಾಡು ಲಕ್ಷ್ಮೀ ಅಮ್ಮ ಸ್ಮರಣಾರ್ಥ ವಗೆನಾಡು ಲಕ್ಷ್ಮೀ ಸ್ಮೃತಿ ಪ್ರತಿಭಾ ಸಂಪನ್ನ ಪುರಸ್ಕಾರವನ್ನು ಅಯನಾ ವಿ. ರಮಣರಿಗೆ ನೀಡಿ ಗೌರವಿಸಲಾಯಿತು.ಶಿಬಿರ ಸಂಚಾಲಕ ಪ್ರಕಾಶ ಮೂಡಿತ್ತಾಯ ಅಭಿನಂದನಾ ಬಾಷಣವನ್ನು ಮಾಡಿದರು.

ಪ್ರತಿಷ್ಠಾನದ ಗೌರವ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್, ಪ್ರತಿಷ್ಠಾನದ ಸಂಚಾಲಕಿ ಶ್ರೀ ದೇವಿ ನಾಗರಾಜ್, ಶಿಬಿರದ ವೇದ ಗುರುಗಳಾದ ವೇ.ಮೂ.ಗಣೇಶ ಶರ್ಮ, ವೇ.ಮೂ. ಸುದರ್ಶನ ಶರ್ಮ, ಶ್ರೀವತ್ಸ ಭಾರಧ್ವಾಜ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿಬಿರದ ಸರ್ವಪ್ರಥಮ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಉಪನ್ಯಾಸಕ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೂ ಅರ್ಹತಾ ಪತ್ರವನ್ನು ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News