ಬೆಳ್ತಂಗಡಿ: ಕೆಎಫ್‌ಸಿಎಸ್‌ಸಿ ಗೋಡೌನ್ ಕಾರ್ಮಿಕರಿಂದ ಪ್ರತಿಭಟನೆ

Update: 2016-05-23 14:11 GMT

ಬೆಳ್ತಂಗಡಿ, ಮೇ 23: ರಾಜ್ಯದ ಕೆಎಫ್‌ಸಿಎಸ್‌ಸಿಯ 191 ಗೋಡೌನ್‌ಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಬೆಳ್ತಂಗಡಿಯಲ್ಲಿನ ಕಾರ್ಮಿಕರು ಲಾಲದಲ್ಲಿರುವ ಗೋಡನ್ ಮುಂದೆ ಧರಣಿ ನಡೆಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಶಾಸಕ ವಸಂತ ಬಂಗೇರ ಧರಣಿನಿರತರಿಂದ ಮನವಿ ಪತ್ರ ಸ್ವೀಕರಿಸಿದರು.

ಕಾರ್ಮಿಕರು ಭಾರತದ ಆಹಾರ ನಿಗಮದಲ್ಲಿ ನೀಡುತ್ತಿರುವ ಪ್ರಕಾರ ಕಾರ್ಮಿಕರಿಗೆ ವೇತನ ಸವಲತ್ತು, ರಜೆಗಳ ಸವಲತ್ತು, ಉದ್ಯೋಗ ಪತ್ರ, ಗುರುತಿನ ಚೀಟಿ, ವೇತನ ಚೀಟಿ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ, ಇಎಸ್‌ಐ ಹಾಗೂ ಪಿ.ಎಫ್, ಕೆಲಸದ ಸ್ಥಳದಲ್ಲಿ ಆಗುವ ಅಪಘಾತಗಳಿಗೆ ಪರಿಹಾರ, ಗ್ರಾಚ್ಯುಟಿ ನೀಡಬೇಕು ಮತ್ತು ಸರಕಾರದಿಂದ ಭವಿಷ್ಯನಿಧಿ ಹಣದ ಬಗ್ಗೆ ಸಾರಿಗೆ ಗುತ್ತಿಗೆದಾರರಲ್ಲಿ ಒಪ್ಪಂದ ಮಾಡಿಕೊಂಡ ವರ್ಷಗಳಿಂದ ಕಾರ್ಮಿಕರ ಖಾತೆಗಳಿಗೆ ಭವಿಷ್ಯನಿಧಿ ಹಣವನ್ನು ಕೂಡಲೇ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

 ಬೆಳ್ತಂಗಡಿಯಲ್ಲಿನ ಕಾರ್ಮಿಕರು ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಯಾವುದೇ ಸೌಲಭ್ಯವಿಲ್ಲ. ರಾತ್ರಿಯಾದರೂ ಮೂಟೆಗಳನ್ನು ಹೊತ್ತು ಒಳಗಿಡುವಂತೆ ಒತ್ತಡ ತರುತ್ತಿರುವ ಬಗ್ಗೆ ಕೆಎಫ್‌ಸಿಎಸ್‌ಸಿ. ಬೆಳ್ತಂಗಡಿ ಘಟಕದ ಅಧ್ಯಕ್ಷ ಕೂಚ, ಶಾಸಕರ ಗಮನಕ್ಕೆ ತಂದಾಗ, ಕಾರ್ಮಿಕರ ಮೇಲೆ ಯಾವುದೇ ಒತ್ತಡ ಸಲ್ಲದು. ಅವರಿಗೆ ಸಿಗಬೇಕಾದ ಅರ್ಹ ಸವಲತ್ತುಗಳ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಆಹಾರ, ನಾಗರಿಕ ಸರಬರಾಜು ಗ್ರಾಹಕರ ಇಲಾಖೆಯವರಲ್ಲಿ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.

ಘಟಕದ ಕಾರ್ಯದರ್ಶಿ ಕಿಟ್ಟು, ಸದಸ್ಯರಾದ ಸನ್ನು, ಬಾಬು, ಚಂದ್ರ, ಮುಹಮ್ಮದ್, ಓಬಯ್ಯ, ಉಮೇಶ, ಗೋಪಾಲ, ಅಡ್ಡಾಳಿ ಗೋಪಾಲ, ಹಕೀಂ, ಕೃಷ್ಣಪ್ಪ, ವಿಜಯ, ರಘು, ವಸಂತ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News