ಸ್ಕೂಟಿ-ಮಿನಿಲಾರಿ ಮಧ್ಯೆ ಅಪಘಾತ: ಮಹಿಳೆಗೆ ಗಂಭೀರ ಗಾಯ

Update: 2016-05-23 15:21 GMT

ಕಡಬ, ಮೇ 23: ಉಪ್ಪಿನಂಗಡಿ- ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿನ ಆಲಂಕಾರು ಪೇಟೆಯಲ್ಲಿ ಸ್ಕೂಟಿ ಮತ್ತು ಮಿನಿಲಾರಿ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಮಹಿಳೆ ಗಂಭೀರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

ಸ್ಕೂಟಿ ಚಲಾಯಿಸುತ್ತಿದ್ದ ಕುಂತೂರು ಮುಡಿಪಿನಡ್ಕ ನಿವಾಸಿ ಮಿನಿ ಅಬ್ರಾಹಂ (32)ಕುಂತೂರಿನಿಂದ ಬಂದು ಆಲಂಕಾರು ಪೇಟೆಯಲ್ಲಿ ಯಾವುದೇ ಸೂಚನೆಯನ್ನು ನೀಡದೆ ಏಕಾಏಕಿ ಸುರುಳಿ ಕಡೆಗೆ ಸ್ಕೂಟಿಯನ್ನು ತಿರುಗಿಸಿದಾಗ ಹಿಂದಿನಿಂದ ಬಂದ ಮಿನಿ ಲಾರಿ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಮಹಿಳೆಯ ತಲೆ ಹಾಗೂ ಸೊಂಟಕ್ಕೆ ಗಂಭೀರ ಗಾಯಗೊಂಡಿದ್ದು ತಕ್ಷಣ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಿನಿಲಾರಿ ಉಡುಪಿ ಮೂಲದ್ದಾಗಿದ್ದು ಸುಬ್ರಹ್ಮಣ್ಯಕ್ಕೆ ತೆಂಗಿನ ಕಾಯಿ ತಂದು ಹಿಂದಿರುಗುತ್ಯಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕಡಬ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳನ್ನು ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೋರನನ್ನು ಬೆನ್ನಟ್ಟಿ ಹಿಡಿದ ಪೊಲೀಸರು

ಕಡಬ ಪೊಲೀಸರು ಅಪಘಾತ ಸ್ಥಳದ ಪರಿಶೀಲನೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಬಾಲಕನೋರ್ವ ಮೂರು ಜನರನ್ನು ಒಂದು ಆ್ಯಕ್ಟಿವಾದಲ್ಲಿ ಕುಳ್ಳಿರಿಸಿಕೊಂಡು ಬರುತ್ತಿದ್ದ ವೇಳೆ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಆದರೆ ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಸುರುಳಿ ರಸ್ತೆಯಲ್ಲಿ ಪರಾರಿಯಾಗಲು ಯತ್ನಿಸಿದ ಪೋರನನ್ನು ಸುಮಾರು 2 ಕಿಮೀ ತನಕ ಬೆನ್ನಟ್ಟಿ ಆ್ಯಕ್ಟಿವಾವನ್ನು ತಡೆದು ನಿಲ್ಲಿಸಿ ವಶಕ್ಕೆ ಪಡೆದುಕೊಂಡರು.

ಇದೇ ವೇಳೆ ಕುಂತೂರಿನಿಂದ ಒರ್ವ ಮಹಿಳೆಯ ಸಮೇತ ಮೂವರು ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News