ಎಸೆಸೆಲ್ಸಿ 60 ವರ್ಷದ ಇತಿಹಾಸದಲ್ಲಿ ಹೊಸ ದಾಖಲೆ: 20 ಅಧ್ಯಾಪಕರಿಂದ ಮೌಲ್ಯಮಾಪನ ನಡೆದರೂ 625ರಲ್ಲಿ 625....!

Update: 2016-05-31 16:30 GMT

ಮಂಗಳೂರು, ಮೇ 31: ಭದ್ರಾವತಿಯ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಬಿ.ಎಸ್.ರಂಜನ್ 2015-16ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 625 ಅಂಕಗಳಿಸುವ ಮೂಲಕ ಎಸೆಸೆಲ್ಸಿ ಬೋರ್ಡ್ ರಚನೆಯಾದ ಬಳಿಕ ಮೊದಲ ಬಾರಿಗೆ ಅತ್ಯಧಿಕ ಅಂಕಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಅವರ ಉತ್ತರಪತ್ರಿಕೆಯನ್ನು 20 ಅಧ್ಯಾಪಕರು ಮೌಲ್ಯಮಾಪನ ಮಾಡಿದರೂ ಅಂಕಗಳಿಕೆಯಲ್ಲಿ ವ್ಯತ್ಯಾಸವಾಗಿಲ್ಲ.ಇದೊಂದು ದಾಖಲೆಯಾಗಿದೆ ಎಂದು ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ಅವರು ಇಂದು ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೇಜ್‌ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಬಿ.ಎಸ್.ರಂಜನ್‌ರ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಕೇರಳದ 12ನೆ ತರಗತಿಯ ಪರೀಕ್ಷೆಯಲ್ಲಿ 640ರಲ್ಲಿ 640 ಅಂಕಗಳಿಸಿದ ಕಾಸರಗೋಡಿನ ಸರಕಾರಿ ಹೈಯರ್ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿನಿ ಕೀರ್ತನ್ ರಾಜೀವನ್‌ರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅನಿವಾರ್ಯ ಕಾರಣಗಳಿಂದ ಆಕೆಗೆ ಈ ಕಾರ್ಯಕ್ರಮಕ್ಕೆ ಬರಲಾಗಿಲ್ಲ. ಆಕೆ ಸಹ್ಯಾದ್ರಿ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸುವ ಆಸಕ್ತಿ ವ್ಯಕ್ತಪಡಿಸಿದ್ದಾಳೆ ಎಂದು ಮಂಜುನಾಥ ಭಂಡಾರಿ ತಿಳಿಸಿದರು.

ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಕೆ.ಭೈರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕುತೂಹಲವಿದ್ದಾಗ ಹೊಸ ಅನ್ವೇಷಣೆ ಸಾಧ್ಯ. ವಿದ್ಯಾರ್ಥಿಗಳ ಗ್ರಹಣ ಸಾಮರ್ಥ್ಯ ಹೆಚ್ಚು ಇರುವ ಕಡೆಗಳಲ್ಲಿ, ನಿರಂತರವಾಗಿ ಸೂಕ್ತ ಮಾರ್ಗದರ್ಶನ ನೀಡುವ ವಾತಾವರಣ ಇರುವ ಕಡೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.

ಸಮಾರಂಭದಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಮಂಡಳಿಯ ಅಧ್ಯಕ್ಷ ರಮೇಶ್, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಉಮೇಶ್ ಎಂ.ಭೂಶಿ, ರಂಜನ್‌ನ ತಂದೆ ಶಂಕರನಾರಾಯಣ, ತಾಯಿ ತ್ರವೇಣಿ ಮೊದಲಾದವರು ಉಪಸ್ಥಿತರಿದ್ದರು.

ಸಹ್ಯಾದ್ರಿ ಅಕಾಡಮಿಕ್ ವಿಭಾಗದ ಆಡಳಿತಾಧಿಕಾರಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು.

 ‘‘ನಾನು ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದು ಈ ಸಾಧನೆ ಮಾಡಿದ್ದೇನೆ. ತಂದೆ ತಾಯಿಯ ಪೋತ್ಸಾಹ ನನ್ನ ಸಾಧನೆಗೆ ಪ್ರಥಮ ಹೆಜ್ಜೆ. ಸಮಾಜದ ಜನರಿಗೆ ನೇರವಾಗಿ ಸಹಾಯ ಮಾಡುವ ಹಂಬಲವಿದೆ. ಐಎಎಸ್ ಪರೀಕ್ಷೆ ಉತ್ತೀರ್ಣನಾಗಬೇಕು ಅಥವಾ ವೈದ್ಯ ವೃತ್ತಿ ಮಾಡಬೇಕು ಎನ್ನುವ ಇಚ್ಛೆ ಇದೆ. ಪರೀಕ್ಷೆಯ ಬಗ್ಗೆ ಅನಗತ್ಯ ಭಯ ಬೇಡ. ನಿರಂತರ ಓದು ಹಾಗೂ ಅಧ್ಯಯನ ಅಂಕ ಗಳಿಕೆಗೆ ಸಹಕಾರಿ.

ಬಿ.ಎಸ್.ರಂಜನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News