ಇಡ್ಕಿದು ಗ್ರಾಮದಲ್ಲಿ ಕೃಷಿಗೆ ಪೂರಕವಾದ ಹೈನುಗಾರಿಕೆ

Update: 2016-06-02 18:47 GMT

ಮಂಗಳೂರು, ಜೂ.2: ದ.ಕ. ಜಿಲ್ಲೆಯಲ್ಲಿ ಹೈನುಗಾರಿಕೆ ಪ್ರಸ್ತುತ ದಿನಗಳಲ್ಲಿ ಉತ್ತೇಜನಕಾರಿ ಚಟುವಟಿಕೆ ಯಾಗಿ ರೂಪುಗೊಳ್ಳುತ್ತಿದ್ದು, ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಹೈನುಗಾರಿಕೆ ವಾರ್ಷಿಕವಾಗಿ ಕೋಟಿಗಟ್ಟಲೆ ಆದಾಯದ ಮೂಲವಾಗಿ ರೂಪುಗೊಳ್ಳುತ್ತಿದೆ. ಇದಕ್ಕೊಂದು ಉದಾಹರಣೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ. ಈ ಗ್ರಾಮವೊಂದರಲ್ಲಿ ಮೂರು ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ವಾರ್ಷಿಕ ಸುಮಾರು 2.5 ಕೋ.ರೂ.ಗಳಿಗೂ ಅಕ ಆದಾಯವನ್ನು ಹೈನುಗಾರಿಕೆಯಿಂದಲೇ ಪಡೆಯಲಾಗುತ್ತಿದೆ.

ಇಡ್ಕಿದು ಗ್ರಾಮದಲ್ಲಿ ಹೈನುಗಾರಿಕೆ ‘ಅಮೃತ’ವಾಗಿ ರೂಪುಗೊಂಡಿರುವ ಜತೆಯಲ್ಲೇ ಸಾವಯವ ಕೃಷಿಗೂ ಪೂರಕವಾಗಿ ಇಲ್ಲಿನ ಕೃಷಿಕರನ್ನು ಪ್ರೋತ್ಸಾಹಿಸುತ್ತಿದೆ. ಬಂಟ್ವಾಳದ ಇಡ್ಕಿದು ಗ್ರಾಮದ ಮಿತ್ತೂರು, ಸೂರ್ಯ ಮತ್ತು ಇಡ್ಕಿದು ಹಾಲು ಉತ್ಪಾದಕರ ಸಹಕಾರಿ ಸಂಘಗಳು ಅನುಕ್ರಮವಾಗಿ ‘ಅಮೃತ ವರ್ಷಿಣಿ’, ‘ಅಮೃತ ಸಿಂಧು’ ಹಾಗೂ ‘ಅಮೃತಧಾರಾ’ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ. ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘ ಸುಮಾರು 27 ವರ್ಷಗಳ ಹಿಂದೆ ಆರಂಭಗೊಳ್ಳುವ ಮೂಲಕ ಗ್ರಾಮದಲ್ಲಿ ಹೈನುಗಾರಿಕೆಗೆ ಉತ್ತೇಜನ ದೊರಕಿತ್ತು.

1994-95ರ ಅವಯಲ್ಲಿ 7 ಲೀ. ಹಾಲಿನ ಸಂಗ್ರಹದೊಂದಿಗೆ ಆರಂಭಗೊಂಡು ಇದೀಗ ಮೂರು ಸಹಕಾರಿ ಸಂಘಗಳ ಮೂಲಕ ಸುಮಾರು 270 ರೈತರು ದಿನವೊಂದಕ್ಕೆ 2,200 ಲೀಟರ್ ಹಾಲನ್ನು ಹಾಲು ಒಕ್ಕೂಟಕ್ಕೆ ನೀಡುತ್ತಿದ್ದಾರೆ. ಸುಮಾರು 300 ಲೀ. ಹಾಲನ್ನು ಸ್ಥಳೀಯವಾಗಿ ರೈತರು ಪೂರೈಕೆ ಮಾಡುತ್ತಿದ್ದಾರೆ. ಇಡ್ಕಿದು ಗ್ರಾಮದ ಸೂರ್ಯ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 96-97ರಲ್ಲಿ 37 ಸದಸ್ಯರು ದಿನವೊಂದಕ್ಕೆ 150 ಲೀಟರ್ ಹಾಲಿನಂತೆ 55,356 ಲೀಟರ್ ಹಾಲು ನೀಡುತ್ತಿದ್ದರೆ, 97-98ರಲ್ಲಿ ವಾರ್ಷಿಕ 77,487 ಲೀ. ಹಾಲು ಸಂಗ್ರಹವಾಗಿತ್ತು.

2014-15ರಲ್ಲಿ 89 ಸದಸ್ಯರಿಂದ 1,87,608 ಲೀಟರ್ ಹಾಲು ಸಂಗ್ರಹವಾಗಿದ್ದು, 15-16ನೆ ಸಾಲಿನಲ್ಲಿ 96 ಮಂದಿ ಹಾಲು ಉತ್ಪಾದಕರ ಮೂಲಕ 2,18,402 ಲೀಟರ್ ಹಾಲು ಸಂಗ್ರಹಿಸಲಾಗಿದೆ. ಸಂಘ ಸ್ಥಾಪನೆಯಾದ ಬಳಿಕ ಸ್ಥಳೀಯರು ಸಾಲ ಪಡೆದುಕೊಂಡು ದನ ಗಳನ್ನು ಖರೀದಿಸಿ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಇದರಂತೆ ಇಡ್ಕಿದು ಸಹಕಾರಿ ಸಂಘದಲ್ಲಿ ದಿನವೊಂದಕ್ಕೆ 985 ಲೀಟರ್, ಸೂರ್ಯದಲ್ಲಿ 686 ಲೀಟರ್ ಹಾಗೂ ಮಿತ್ತೂರು ಸಹಕಾರಿ ಸಂಘದಲ್ಲಿ 530 ಲೀಟರ್ ಹಾಲು ಪ್ರತಿನಿತ್ಯ ಸಂಗ್ರಹವಾಗುತ್ತಿದೆ. ಇಡೀ ಜಿಲ್ಲೆಯಲ್ಲಿ ಹಾಲಿನ ಕೊರತೆ ಕಂಡು ಬಂದಾಗಲೂ ಇಡ್ಕಿದು ಗ್ರಾಮದಲ್ಲಿ ಹಾಲಿನ ಕೊರತೆ ಆಗಿಲ್ಲದಿರುವುದು ಇಲ್ಲಿನ ವಿಶೇಷ ಎನ್ನುತ್ತಾರೆ ಸೂರ್ಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್.

ಅಡಿಕೆ ಹಾಳೆಯ ಮೇವು!

ಇಡ್ಕಿದು ಗ್ರಾಮದಲ್ಲಿ ಅಡಿಕೆ ಮುಖ್ಯ ಕೃಷಿಯಾಗಿ ರೂಪುಗೊಂಡಿದೆ. ಇಲ್ಲಿನ ರೈತರು ಬಹುತೇಕವಾಗಿ ಮುಖ್ಯ ಬೆಳೆಯಾಗಿ ಅಡಿಕೆ ಬೆಳೆಯು ತ್ತಿದ್ದು, ಅಡಿಕೆಯ ಹಾಳೆಗಳು ಇಲ್ಲಿ ಯಾವುದೇ ಕಾರಣಕ್ಕೂ ವ್ಯರ್ಥವಾಗು ವುದಿಲ್ಲ. ಬದಲಾಗಿ ಇದು ಇಲ್ಲಿ ಹಸುಗಳಿಗೆ ಪೌಷ್ಟಿಕ ಆಹಾರವಾಗಿ ಉಪಯೋಗಿಸಲ್ಪಡುತ್ತದೆ. ಜಿಲ್ಲೆಯಲ್ಲಿ ಭತ್ತದ ಕೃಷಿ ಕಡಿಮೆಯಾಗಿರುವುದರಿಂದ ದನಗಳಿಗೆ ಮೇವಿನ ರೂಪದಲ್ಲಿ ಬೈಹುಲ್ಲು ಅಪರೂಪವಾಗಿದೆ. ಬೈಹುಲ್ಲಿಗೆ ಕೆ.ಜಿ.ಗೆ 8ರಿಂದ 10 ರೂ. ದರವಿದ್ದರೆ, ಈ ಹಾಳೆ ಹುಡಿಯ ಮೇವಿಗೆ ಕಿಲೋವೊಂದಕ್ಕೆ 6 ರೂ. ದರ. ಹಾಗಾಗಿ ಇಲ್ಲಿ ಒಣಗಿದ ಅಡಿಕೆ ಎಲೆಯನ್ನು ಪುಡಿಯಾಗಿಸಿ ಮೇವಿನ ರೂಪದಲ್ಲಿ ದನಗಳಿಗೆ ನೀಡಲಾಗುತ್ತಿದೆ. ಅದಕ್ಕಾಗಿ ಸೂರ್ಯ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಳೆದ ನಾಲ್ಕು ತಿಂಗಳಿನಿಂದೀಚೆಗೆ ಅಡಿಕೆ ಹಾಳೆಯನ್ನು ಹುಡಿ ಮಾಡುವ ಯಂತ್ರವನ್ನು ನಬಾರ್ಡ್ ನೆರವಿನಲ್ಲಿ ಪಡೆಯಲಾಗಿದೆ. ಈ ಅಡಿಕೆ ಹಾಳೆ ಹುಡಿ ಆ್ಯಕ್ಸಾಲಿಕ್ ಆ್ಯಸಿಡ್ ಹೊಂದಿರುವುದರಿಂದ ಪಶುಗಳಿಗೆ ಹೆಚ್ಚು ಪೌಷ್ಟಿಕದಾಯಕ ಎನ್ನುತ್ತಾರೆ ಪಶು ವೈದ್ಯರೂ ಆಗಿರುವ ಡಾ. ಕೃಷ್ಣ ಭಟ್.

ಸ್ಥಳೀಯರ ವಲಸೆಗೆ ನಿಯಂತ್ರಣ

ಅಡಿಕೆ ಮರದ ಹಾಳೆಯಿಂದ ಪಶುಗಳಿಗೆ ಮೇವು, ಪಶುವಿನ ಗಂಜಲದಿಂದ ತೋಟ ಹಾಗೂ ಕೃಷಿಗೆ ಗೊಬ್ಬರ ಹಾಗೂ ಬಯೋಗ್ಯಾಸ್ ಉತ್ಪಾದನೆ ಹೀಗೆ ಹೈನುಗಾರಿಕೆ ಉಪ ಕಸುಬಾಗಿ ಸಾವಯವ ಕೃಷಿಗೆ ಉತ್ತೇಜನ ನೀಡಿದೆ. ಏಳು ವರ್ಷಗಳ ಹಿಂದೆ ಒಂದು ಲೀಟರ್ ಹಾಲಿಗೆ 12.70 ರೂ. ರೈತನಿಗೆ ಸಿಗುತ್ತಿದ್ದರೆ, ಇಂದು ಸರಕಾರದ ನಾಲ್ಕು ರೂ. ಸಬ್ಸಿಡಿ ಸೇರಿ ಸರಾಸರಿ 34 ರೂ. ಲೀಟರೊಂದಕ್ಕೆ ಸಿಗುತ್ತಿದೆ. ಹಾಗಾಗಿ ಅಡಿಕೆಯ ಜೊತೆ ಹೈನುಗಾರಿಕೆ, ತೆಂಗು, ಕಾಳುಮೆಣಸು, ಕೊಕ್ಕೋ ಹಾಗೂ ಇದೀಗ ಕೋಳಿ ಸಾಕಣೆ ಕೂಡಾ ಗ್ರಾಮದಲ್ಲಿ ಅಭಿವೃದ್ಧಿಯಾಗುತ್ತಿದೆ. ಇದು ಸ್ಥಳೀಯರು ಕೆಲಸಕ್ಕಾಗಿ ವಲಸೆ ಹೋಗುವ ಪ್ರಮೇಯವನ್ನೂ ಬಹುತೇಕವಾಗಿ ನಿಯಂತ್ರಿಸಿದೆ. ಕೃಷಿಯನ್ನು ಸಾವಯವಗೊಳಿಸಿದೆ. ಮಣ್ಣನ್ನು ಲವತ್ತತೆಗೊಳಿಸಿದೆ. ಹೈನುಗಾರಿಕೆ ಇಲ್ಲಿ ಲಾಭದಾಯಕವಾಗಿ ಪರಿಣಮಿಸುತ್ತಿದ್ದು, ಪ್ರಸ್ತುತ ವಿದೇಶಿ ಹಾಗೂ ಮಿಶ್ರತಳಿಯ ಹಸುಗಳನ್ನೇ ಇಲ್ಲಿ ಸಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೇಶೀ ತಳಿಯ ಹಸುಗಳನ್ನು ಅಭಿವೃದ್ಧಿಪಡಿಸುವ ಗುರಿ ಇದೆ ಎನ್ನುತ್ತಾರೆ ಡಾ.ಕೃಷ್ಣ ಭಟ್.


ಒಂದು ಅಡಿಕೆ ಹಾಳೆಯಿಂದ 7 ರೂ. ಆದಾಯ!

ಸೂರ್ಯ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅಡಿಕೆ ಹಾಳೆಗಳಿಂದ ತಟ್ಟೆಗಳನ್ನು ತಯಾರಿಸುವ ಯಂತ್ರಗಳನ್ನೂ ಅಳವಡಿಸಲಾಗಿದೆ. ಒಂದು ಅಡಿಕೆ ಹಾಳೆಯಲ್ಲಿ ಎರಡು ತಟ್ಟೆಗಳನ್ನು ಮಾಡಬಹುದಾಗಿದ್ದು, ಹಾಳೆಯ ಉಳಿದ ಚೂರುಗಳನ್ನು ಪುಡಿಯಾಗಿಸಿ ಪಶುಗಳಿಗೆ ಮೇವು ತಯಾರಿಸಲಾಗುತ್ತದೆ. ಕಳೆದ ನಾಲ್ಕು ತಿಂಗಳಲ್ಲಿ 450 ಕಿಲೋ ಮೇವು ತಯಾರಿಸಲಾಗಿದ್ದು, 216 ಕಿಲೋ ಈಗಾಗಲೇ ಮಾರಾಟವಾಗಿದೆ. ನಾಲ್ಕು ತಿಂಗಳಲ್ಲಿ ಇಬ್ಬರು ಮಹಿಳೆಯರು ಅಡಿಕೆ ತಟ್ಟೆಗಳ ತಯಾರಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅವರಿಗೆ ಉದ್ಯೋಗ ದೊರಕಿದೆ. ಮಹಿಳಾ ಸ್ವಸಹಾಯ ಸಂಘಕ್ಕೆ 4,000 ರೂ. ಬಾಡಿಗೆಗೆ ಈ ಘಟಕವನ್ನು ನಿರ್ವಹಣೆಗೆ ನೀಡಲಾಗಿದೆ.

ನಾಲ್ಕು ತಿಂಗಳ ಅವಯಲ್ಲಿ 12,600 ರೂ. ವೇತನ, 2,400 ರೂ. ಗ್ಯಾಸ್ ಸಿಲಿಂಡರ್ ವೆಚ್ಚ, 620 ರೂ. ಪ್ಯಾಕಿಂಗ್ ವೆಚ್ಚ ಸೇರಿ 42 ದಿನಗಳ ಕೆಲಸದ ಮೂಲಕ ಈ ಅಡಿಕೆ ಹಾಳೆಗಳಿಂದ ತಟ್ಟೆ ಮತ್ತು ಮೇವು ತಯಾರಿಯಿಂದ 6,461 ರೂ. ಲಾಭ ಗಳಿಸಲಾಗಿದೆ. ಗಂಟೆಗೆ 50 ತಟ್ಟೆಗಳನ್ನು ಯಂತ್ರದಲ್ಲಿ ಮಾಡಬಹುದಾಗಿದೆ. ಹಾಳೆಯೊಂದರಿಂದ 2 ತಟ್ಟೆ ಹಾಗೂ ಉಳಿದ ಚೂರು-ಪಾರಿನಿಂದ ಮೇವು ತಯಾರಿ ಸೇರಿದಂತೆ ಒಟ್ಟು 7 ರೂ. ಆದಾಯ ಗಳಿಸಬಹುದು. ಅದರಲ್ಲಿ 3.50 ರೂ.ನಿಂದ 4 ರೂ.ವರೆಗೆ ಖರ್ಚುವೆಚ್ಚ ಕಳೆದರೂ 3 ರೂ.ನಷ್ಟು ಒಂದು ತಟ್ಟೆಯಲ್ಲಿ ಲಾಭವಿದೆ ಎಂದು ಹಾಳೆ ತಟ್ಟೆ ತಯಾರಿ ಘಟಕದ ಬಗ್ಗೆ ಕೃಷ್ಣ ಭಟ್ ವಿವರ ನೀಡಿದರು.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News