ಬೆಳ್ತಂಗಡಿ: ಪೊಲೀಸರಿಂದ ಶಾಲಾ ವಾಹನಗಳ ತಪಾಸಣೆ

Update: 2016-06-22 15:38 GMT

ಬೆಳ್ತಂಗಡಿ, ಜೂ.22: ತಾಲೂಕಿನಲ್ಲಿ ಇಂದು ಅಡಿಶನಲ್ ಎಸ್ಪಿ ಡಾ. ವೇದಮೂರ್ತಿ ನೇತೃತ್ವದಲ್ಲಿ ಪೊಲೀಸರಿಂದ ವ್ಯಾಪಕವಾಗಿ ಶಾಲಾ ವಾಹನಗಳ ತಪಾಸಣೆ ಕಾರ್ಯ ನಡೆಯಿತು. ಬೆಳ್ತಂಗಡಿ, ಉಜಿರೆ, ಗುರುವಾಯನಕೆರೆ, ಧರ್ಮಸ್ಥಳ, ವೇಣೂರು, ಪೂಂಜಾಲಕಟ್ಟೆ, ಅಳದಂಗಡಿ, ಕೊಕ್ಕಡ, ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಶಾಲಾ ಮಕ್ಕಳನ್ನು ಸಾಗಿಸುವ ವಾಹನ ಚಾಲಕರಿಗೆ ಸೂಚನೆಗಳನ್ನು ನೀಡಲಾಯಿತು.

ಇಂದು ಪೊಲೀಸ್ ತಪಾಸಣೆಯ ಸೂಚನೆಯಿದ್ದ ಹಿನ್ನಲೆಯಲ್ಲಿ ಮಕ್ಕಳನ್ನು ಸಾಗಿಸುವ ರಿಕ್ಷಾಗಳು ಹಾಗೂ ವಾಹನಗಳು ಮಿತವಾಗಿಯೇ ಮಕ್ಕಳನ್ನು ವಾಹನಗಳಲ್ಲಿ ಸಾಗಿಸುತ್ತಿದ್ದುದು ಕಂಡು ಬಂತು. ಖಾಸಗಿ ಶಾಲೆಗಳಿಗೆ ತೆರಳಿದ ಪೊಲೀಸರು ಶಾಲಾಡಳಿತಗಳೊಂದಿಗೆ ಮಾತುಕತೆ ನಡೆಸಿದರು. ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಕಟ್ಟುನಿಟ್ಟಾಗಿ ಇವುಗಳನ್ನು ಪಾಲಿಸುವಂತೆ ಸೂಚನೆ ನೀಡಿದರು.

ಒಂದೆಡೆಯಿಂದ ತಪಾಸಣಾ ಕಾರ್ಯ ನಡೆಯುತ್ತಿದ್ದರೆ ಮತ್ತೊಂದೆಡೆ ಬಸ್‌ಗಳ ಕೊರತೆಯಿಂದಾಗಿ ಶಾಲಾ ಕಾಲೇಜುಗಳಿಗೆ ಬರುವ ಮಕ್ಕಳನ್ನು ಜೀಪ್‌ಗಳಲ್ಲಿ ತುಂಬಿಸಿಕೊಂಡು ಬರುವ ದೃಶ್ಯ ಸಾಮಾನ್ಯವಾಗಿತ್ತು. ತಾಲೂಕಿನ ದಿಡುಪೆ, ಸವಣಾಲು, ನೆರಿಯ, ಬೆಳಾಲು, ಕೊಯ್ಯೂರು, ಶಿಶಿಲ, ಪಟ್ರಮೆ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಇನ್ನೂ ಸರಿಯಾದ ಬಸ್ ವ್ಯವಸ್ತೆ ಇಲ್ಲವಾಗಿದ್ದು ಇರುವ ಬಸ್‌ಗಳಲ್ಲಿ ವಿದ್ಯಾರ್ಥಿಗಳು ನೇತಾಡುತ್ತಾ ಹೋಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ಈ ಪ್ರದೇಶಗಳಿಗೆ ಹೆಚ್ಚುವರಿ ಬಸ್‌ಗಳಿಗಾಗಿ ಕಳೆದ ಕೆಲವು ವರ್ಷಗಳಿಂದ ಬೇಡಿಕೆಯಿಡಲಾಗುತ್ತಿದ್ದರೂ ಬೇರೆ ಬೇರೆ ಕಾರಣಗಳನ್ನು ನೀಡುತ್ತಾ ಬಸ್‌ಗಳನ್ನು ಹಾಕಲಾಗುತ್ತಿಲ್ಲ. ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಹಾಕುವಂತೆ ವಿದ್ಯಾರ್ಥಿಗಳು ಒತ್ತಾಯ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News