ಕಳವು ಆರೋಪಿಯ ಬಂಧನಕ್ಕೆ ಸಾಹಸ ಮೆರೆದ ಬಂಟ್ವಾಳ ಪೊಲೀಸರು

Update: 2016-06-23 06:52 GMT

ವಿಟ್ಲ, ಜೂ.23: ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಪೇಟೆಯ ಜ್ಯುವೆಲ್ಲರಿ ಮಳಿಗೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಟ್ವಾಳ ಪೊಲೀಸರು ಸಾಹಸ ಮೆರೆದು ಪಶ್ಚಿಮ ಬಂಗಾಳದಿಂದ ಬಂಧಿಸಿ ಕರೆ ತಂದಿದ್ದಾರೆ.

ಬಿ.ಸಿ.ರೋಡ್ ಪೇಟೆಯ ಅಪೂರ್ವ ಜ್ಯುವೆಲ್ಲರಿ ಮಳಿಗೆಯಲ್ಲಿ 10 ವರ್ಷಗಳಿಂದ ಅಕ್ಕಸಾಲಿಗನಾಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ರಾಜ್ಯದ ಹೂಗ್ಲಿ ಜಿಲ್ಲೆಯ ಅಮರಪುರ ಕಾನಕುಲ್ ನಿವಾಸಿ ಪಿಂಟೋ ರಾವತ್ ಎಂಬಾತ ಜೂ.6ರಂದು ಸಂಜೆ ಸುಮಾರು 7.5 ಲಕ್ಷ ರೂಪಾಯಿ ವೌಲ್ಯದ 229 ಗ್ರಾಂ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಲು ಬಂಟ್ವಾಳ ನಗರ ಠಾಣೆ ಎಎಸೈ ಕೆ.ಸಂಜೀವ ನೇತೃತ್ವದಲ್ಲಿ ಇಲ್ಲಿನ ಸಿಬ್ಬಂದಿ ಅದ್ರಾಂ, ವೇಣೂರು ಠಾಣಾ ಸಿಬ್ಬಂದಿ ಪ್ರವೀಣ್ ಒಳಗೊಂಡ ಮೂವರ ತಂಡವನ್ನು ರಚಿಸಿ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿತ್ತು.

ಜ್ಯುವೆಲ್ಲರಿ ಮಾಲಕ ಸುನಿಲ್ ನೀಡಿದ ಮಾಹಿತಿಯಂತೆ ಪೊಲೀಸ್ ತಂಡ ಸುನಿಲ್ ಜೊತೆ ಸೇರಿಕೊಂಡು ವಾರದ ಹಿಂದೆ ಪಶ್ಚಿಮ ಬಂಗಾಳಕ್ಕೆ ತೆರಳಿತ್ತು. ಹೂಗ್ಲಿ ಜಿಲ್ಲೆ ಅಮರಾಪುರ ತಾಲೂಕು ಕಾನಕ್ಕುಲ್ ಎಂಬ ಕೃಷಿ ಪ್ರಧಾನ ಗ್ರಾಮೀಣ ಪ್ರದೇಶಕ್ಕೆ ತೆರಳಿದ ಪೊಲೀಸರು ಬಹಳ ಪ್ರಯಾಸಪಟ್ಟು ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ಆರೋಪಿ ರಾವತ್ ಮೊಬೈಲ್ ನಂಬರ್ ಬದಲಾಯಿಸಿ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರ ತಂಡವು ವಿಮಾನದ ಮೂಲಕ ಪಶ್ಚಿಮ ಬಂಗಾಳ ತಲುಪಿತ್ತು. ಅಲ್ಲಿನ ವಿಮಾನ ನಿಲ್ದಾಣದಿಂದ ಬಾಡಿಗೆ ಕಾರು ಗೊತ್ತುಪಡಿಸಿ ಹೂಗ್ಲಿ ನದಿಯನ್ನು ಬಿದಿರಿನ ಸೇತುವೆ ಮೂಲಕ ದಾಟಿತ್ತು. ಅಲ್ಲಿಂದ ಮತ್ತೆ ಮೋಟಾರ್ ಬೈಕ್ ಎಂಜಿನ್ ಬಳಸಿದ ಎತ್ತಿನಗಾಡಿ ಮಾದರಿಯ ಗಾಡಿಯಲ್ಲಿ ಸಾಗಿ ಬಳಿಕ ಗದ್ದೆ ಹುಣಿಯಲ್ಲಿ ನಡೆದುಕೊಂಡೇ ಆರೋಪಿ ಮನೆ ತಲುಪಿದ್ದಾರೆ. ಈ ಸಂದರ್ಭ ಆರೋಪಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ತಂದೆಯೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಈ ಪ್ರದೇಶದಸ ಬಹುತೇಕ ಮಂದಿಗೆ ಇಂತಹ ಕೃತ್ಯ ಒಂದು ದಂಧೆಯಾಗಿ ಹೋಗಿದ್ದು, ಪೊಲೀಸರನ್ನು ಕಂಡು ಊರಿನ ಜನ ಜಮಾಯಿಸಿದ್ದಾರೆ. ಈ ವೇಳೆ ಊರಿನ ಪ್ರಮುಖ ವ್ಯಕ್ತಿಯೋರ್ವ ಪೊಲೀಸರೊಂದಿಗೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿಕೊಡು ಆರೋಪಿಯನ್ನು ಬಿಟ್ಟು ಬಿಡುವಂತೆ ಪೊಲೀಸರೊಂದಿಗೆ ಡೀಲ್ ಕುದುರಿಸಲು ಮುಂದಾಗಿದ್ದಾನೆ ಎನ್ನಲಾಗಿದೆ. ಈ ಸಂದರ್ಭ ಬಂಟ್ವಾಳ ಪೊಲೀಸರು ಸ್ಥಳೀಯ ಕಾನಕ್ಕುಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಠಾಣಾಧಿಕಾರಿಯನ್ನು ಸ್ಥಳಕ್ಕೆ ಕರೆಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಲ್ಲಿನ ಪೊಲೀಸರು ಆರೋಪಿಯನ್ನು ಚಿನ್ನಾಭರಣ ಸಹಿತ ಬಂಧಿಸಿದ್ದು, ಅಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಬಂಟ್ವಾಳಕ್ಕೆ ಕರೆ ತಂದಿದ್ದಾರೆ.

ಪೊಲೀಸರ ಈ ಸಾಹಸಮಯ ಕಾರ್ಯವನ್ನು ಶ್ಲಾಘಿಸಿದ ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆ, ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ಇಲಾಖೆ ವತಿಯಿಂದ 10 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News