ಕಾರ್ಪ್‌ಬ್ಯಾಂಕ್ ನೌಕರನಿಂದ ಕದ್ರಿಯಿಂದ- ಅಮರನಾಥ ಯಾತ್ರೆ!

Update: 2016-06-23 07:41 GMT

ಮಂಗಳೂರು,ಜೂ.23: ಕಾರ್ಪೊರೇಶನ್ ಬ್ಯಾಂಕ್‌ನ ಹೊಸದಿಲ್ಲಿ ಶಾಖೆಯ ಗುಮಾಸ್ತ (ಕ್ಲರ್ಕ್) ರಾಮ್‌ಕಿಶೋರ್ ಎಂಬವರು ನಗರದ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಿಂದ ಅಮರನಾಥ ಯಾತ್ರೆ ಕೈಗೊಂಡಿದ್ದು, ಪಾಂಡೇಶ್ವರದ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಅವರ ಪ್ರಯಾಣಕ್ಕೆ ಚಾಲನೆ ನೀಡಲಾಯಿತು.

ದ್ವಿಚಕ್ರ ವಾಹನದಲ್ಲಿ 6,900 ಕಿ.ಮೀ. ದೂರವನ್ನು ಕ್ರಮಿಸಲಿರುವ ರಾಮ್ ಕಿಶೋರ್‌ರ ಯಾತ್ರೆಗೆ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆಗಿರುವ ಜಯ ಕುಮಾರ್ ಗರ್ಗ್ ಹಸಿರು ನಿಶಾನೆ ತೋರಿದರು.

ಹೊಸದಿಲ್ಲಿಯ ನಿವಾಸಿ 51ರ ಹರೆಯದ ರಾಮ್‌ಕಿಶೋರ್ 2003ರಿಂದ ಹೊಸದಿಲ್ಲಿಯಿಂದ ದ್ವಿಚಕ್ರ ವಾಹನದಲ್ಲಿ ಪ್ರತಿ ವರ್ಷ ಅಮರನಾಥ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಈ ವರ್ಷ ಅವರು ಬ್ಯಾಂಕ್‌ನ ಪ್ರಧಾನ ಕಚೇರಿಯಿಂದ ಅಮರನಾಥ ಯಾತ್ರೆಗೆ ನಿರ್ಧರಿಸಿದ್ದು, ತಮ್ಮ ಯಾತ್ರೆಯ ಸಂದರ್ಭ ಕೇಂದ್ರ ಸರಕಾರದ ‘ಭೇಟಿ ಪಡಾವೊ, ಭೇಟಿ ಬಚಾವೊ’ ಹಾಗೂ ‘ಸ್ವಚ್ಛ ಭಾರತ್’ ಯೋಜನೆಗಳ ಬಗ್ಗೆಯೂ ಅರಿವು ಮೂಡಿಸುತ್ತಾ ಸಾಗಲು ಮುಂದಾಗಿದ್ದಾರೆ. ಅದಕ್ಕಾಗಿ ತಾವು ಪ್ರಯಾಣಿಸುತ್ತಿರುವ ದ್ವಿಚಕ್ರ ವಾಹನ(ಮಹೀಂದ್ರ ಗಸ್ಟೋ)ದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಅತ್ಯುತ್ತಮ ಬ್ಯಾಂಕ್ ಎಂಬ ಘೋಷಣೆಯ ಜೊತೆಗೆ ಕೇಂದ್ರದ ಸರಕಾರದ ಮಹತ್ವದ ಈ ಯೋಜನೆಗಳ ಘೋಷಣೆಯನ್ನೂ ಬರೆಸಿಕೊಂಡಿದ್ದಾರೆ.

‘‘ಮಂಗಳೂರಿನಿಂದ ಬೆಂಗಳೂರು, ಹುಬ್ಬಳ್ಳಿ, ಮುಂಬೈ, ಸೂರತ್, ಬರೋಡಾ, ಉದಯಪುರ, ಅಜ್ಮೀರ್, ಚಂಡೀಗಢ, ಲುಧಿಯಾನ, ಅಮೃತಸರ, ಜಮ್ಮು ಕಾಶ್ಮೀರ ಶ್ರೀನಗರ ಮಾರ್ಗವಾಗಿ ನಾನು ಅಮರನಾಥಕ್ಕೆ ತಲುಪಲಿದ್ದೇನೆ. ಸುಮಾರು 15 ದಿನಗಳ ಪ್ರಯಾಣದಲ್ಲಿ ದಾರಿಯಲ್ಲಿ ಸಿಗುವ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಗಳಿಗೆ ಭೇಟಿ ನೀಡಲಿದ್ದೇನೆ. ನನಗೆ ಹಾಗೂ ನನ್ನಂತೆ ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಕಾರ್ಪೊರೇಶನ್ ಬ್ಯಾಂಕ್‌ನ ಶ್ರೇಯೋಭಿವೃದ್ದಿಯ ಆಶಯದೊಂದಿಗೆ ನಾನು 2003ರಲ್ಲಿ ಈ ಯಾತ್ರೆಯನ್ನು ಆರಂಭಿಸಿದ್ದೇನೆ. ಕಳೆದ ವರ್ಷ ನನಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಆಗಿದ್ದು, ನಾನು ಆರೋಗ್ಯವಂತವಾಗಿದ್ದೇನೆ. ಈ ವರ್ಷ ಸ್ವಚ್ಛ ಭಾರತ್ ಹಾಗೂ ಭೇಟಿ ಪಢಾವೊ- ಭೇಟಿ ಬಚಾವೊ’ ಕೂಡಾ ನನ್ನ ಯಾತ್ರೆಯ ಪ್ರಮುಖ ಸಂದೇಶವಾಗಿದೆ. ನನಗೂ ಐದು ಹೆಣ್ಣು ಹಾಗೂ ಒಂದು ಗಂಡು ಮಗನಿದ್ದು, ನನ್ನ ಪತ್ನಿ ನನ್ನ ಈ ಯಾತ್ರೆಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ’’ ಎಂದು ರಾಮ್‌ಕಿಶೋರ್ ಅಭಿಪ್ರಾಯಿಸಿದ್ದಾರೆ.

ಹಸಿರು ನಿಶಾನೆ ನೀಡುವ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಮೆಹ್ತಾ, ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ಅಧ್ಯಕ್ಷ ಏಕನಾಥ್ ಬಾಳಿಗ, ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ, ಕಾರ್ಪ್ ಬ್ಯಾಂಕ್ ನೌಕರರ ಯೂನಿಯನ್‌ನ ವಿನ್ಸೆಂಟ್ ಡಿಸೋಜಾ ಮೊದಲಾವದರು ಉಪಸ್ಥಿತರಿದ್ದರು. ಬ್ಯಾಂಕ್‌ನ ನೂರಾರು ಮಂದಿ ನೌಕರರು, ಸಿಬ್ಬಂದಿ ಉಪಸ್ಥಿತರಿದ್ದು ರಾಮ್‌ಕಿಶೋರ್‌ರವರಿಗೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News