ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಲು ಶಾಲಾ ಮಕ್ಕಳ ವಾಹನ ಚಾಲಕರಿಗೆ ಎಸ್ಪಿ ಸೂಚನೆ

Update: 2016-06-23 10:19 GMT

ವಿಟ್ಲ, ಜೂ.23: ಶಾಲಾ ಮಕ್ಕಳ ಸಂಚಾರಕ್ಕೆ ಬಳಸುವ ವಾಹನಗಳಲ್ಲಿ ಚಾಲಕರು ನಿಯಮ ಮೀರಿ ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ತೀವ್ರ ಆರೋಪಗಳಿದ್ದು, ಇಂತಹ ಪ್ರಯಾಣವೇ ಘೋರ ದುರಂತಗಳಿಗೂ ಕಾರಣವಾಗುತ್ತಿದೆ. ಇದರಿಂದ ಶಾಲಾ ಮಕ್ಕಳ ವಾಹನಗಳ ಚಾಲಕರು ವಾರದೊಳಗೆ ಸಂಚಾರಿ ನಿಯಮಗಳನ್ನು ಕಡ್ಡಾಯ ಪಾಲಿಸುವಂತೆ ಎಂದು ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಾಪುರದಲ್ಲಿ ನಡೆದ ಶಾಲಾ ವಾಹನ ಅಪಘಾತದಲ್ಲಿ ಎಂಟು ಮಂದಿ ಪುಟಾಣಿಗಳು ಜೀವತೆತ್ತಿರುವುದು ತೀವ್ರ ದುಃಖಕರ ಸಂಗತಿಯಾಗಿದ್ದು, ಈ ನಿಟ್ಟಿನಲ್ಲಿ ಶಾಲಾ ಮಕ್ಕಳ ವಾಹನ ಚಾಲಕರು ಕಡ್ಡಾಯ ಸಾರಿಗೆ ನಿಯಮ ಪಾಲಿಸಲು ಒಂದು ವಾರದ ಗಡುವು ನೀಡಲಾಗುವುದು ಎಂದರು.

ಶಾಲಾ ಮಕ್ಕಳ ಸಾಗಾಟದ ವಾಹನಗಳ ಬಗ್ಗೆ ತೀವ್ರ ನಿಗಾ ಇಡುವಂತೆ ಹಾಗೂ ತಪಾಸಣೆ ಕಟ್ಟುನಿಟ್ಟಾಗಿ ಮಾಡುವಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ವಾರದಿಂದ ಸಾರಿಗೆ ನಿಯಮ ಉಲ್ಲಂಘಿಸುವ ವಾಹನ ಚಾಲಕರ ಮೇಲೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದ ಎಸ್ಪಿ ಇಂತಹ ಚಾಲಕರ ಚಾಲನಾ ಪರವಾನಿಗೆಯನ್ನೇ ರದ್ದುಪಡಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು.

ಮಿತಿ ಮೀರಿದ ಗಾಂಜಾ ಮಾಫಿಯಾ : ಗಂಭೀರ ಕ್ರಮ

ತಾಲೂಕಿನ ಮಾರಿಪಳ್ಳ ಕೇಂದ್ರೀಕೃತವಾಗಿ ಪರಂಗಿಪೇಟೆ, ಅಮೆಮಾರು, ಕುಂಪನಮಜಲು, ಬಿ ಮೂಡ, ಗೂಡಿನಬಳಿ, ಪಾಣೆಮಂಗಳೂರು, ಆಲಡ್ಕ ಮೊದಲಾದ ಕಡೆಗಳಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆಯಂತಹ ದುಷ್ಕೃತ್ಯಗಳಲ್ಲಿ ಯುವಕರು ತೊಡಗಿಸಿಕೊಂಡಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳು ಸೂಚಿಸಲಾಗಿದೆ ಎಂದು ಎಸ್ಪಿಬೊರಸೆ ತಿಳಿಸಿದರು.

ತಾಲೂಕಿನ ಹಲವು ಪದವಿ, ಪದವಿಪೂರ್ವ ಹಾಗೂ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ಗಳು ಹಾಗೂ ವಿದ್ಯಾರ್ಥಿಗಳು ಈ ದುಷ್ಕರ್ಮಿಗಳ ಜಾಲಕ್ಕೆ ಬಲಿಯಾಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಹಿನ್ನಲೆಯಲ್ಲಿ ಕಾಲೇಜು ಕ್ಯಾಂಪಸ್‌ಗಳ ಮೇಲೆ ಪೊಲೀಸ್ ಇಲಾಖೆ ವಿಶೇಷ ನಿಗಾ ವಹಿಸಲಿದೆ ಎಂದರು.

ಪೊಲೀಸ್-ಮಾಧ್ಯಮ ಜಂಟಿ ಕಾರ್ಯಾಚರಣೆ ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಮಾಧ್ಯಮ ಪ್ರತಿನಿಧಿಗಳ ವಾಟ್ಸಾಪ್ ಗ್ರೂಪ್ ಪ್ರಾರಂಭಿಸಲಾಗಿದ್ದು, ಅಪರಾಧ ಚಟುವಟಿಕೆಗಳ ಬಗ್ಗೆ ಸಚಿತ್ರ ಮಾಹಿತಿಯನ್ನು ಮಾಧ್ಯಮ ಮಂದಿ ರವಾನಿಸಿದಲ್ಲಿ ತುರ್ತಾಗಿ ಸ್ಪಂದಿಸಿ ಕ್ರಮ ಕೈಗೊಳ್ಳಲಾಗುವುದು ಎಂದ ಜಿಲ್ಲಾ ಎಸ್ಪಿ ಇಲಾಖೆಯನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕ ವಲಯಕ್ಕೂ ಇದನ್ನು ವಿಸ್ತರಿಸಲಾಗುವುದು ಎಂದರು. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕಾಗಿದೆ ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News