ಸುಳ್ಯ: ಮಳೆಯ ಆವಾಂತರಕ್ಕೆ ಹಲವಡೆ ಹಾನಿ

Update: 2016-06-23 11:50 GMT

ಸುಳ್ಯ, ಜೂ.23: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸುಳ್ಯ ನಗರದ ವಿವಿಧೆಡೆ ಹಾನಿಯಾಗಿದೆ. ಪರಿವಾರಕಾನದಲ್ಲಿ ಮನೆಯ ಮೇಲೆ ದೊಡ್ಡ ಗಾತ್ರದ ಮರವೊಂದು ಬಿದ್ದು ಹಾನಿಯಾಗಿದೆ. ಬೂಡು ಕಾಲೋನಿಯಲ್ಲಿ ಗುಡ್ಡದಿದೆ. ಕುರುಂಜಿಗುಡ್ಡೆಯಲ್ಲಿ ಮರವೊಂದು ಬುಡಸಮೇತ ಮಗುಚಿ ಬಿದ್ದಿದೆ. ಕಳೆದೆರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಪೈಚಾರಿನಲ್ಲಿ ನದಿ ತುಂಬಿ ಹರಿಯುತ್ತಿದೆ.

ಪರಿವಾರಕಾನದ ರಾಮದಾಸ್ ರೈ ಎಂಬವರ ಮನೆಯ ಮೇಲೆ ಮನೆಯ ಪಕ್ಕದಲ್ಲಿದ್ದ ದೊಡ್ಡ ಗಾತ್ರದ ಮರವೊಂದು ಮಗುಚಿ ಬಿದ್ದಿದೆ. ಮರವು ಮನೆ ಹಾಗೂ ಕೊಟ್ಟಿಗೆಯ ಮಧ್ಯ ಭಾಗಕ್ಕೆ ಬಿದ್ದು ಎರಡು ಕಡೆಗೂ ಹಾನಿಯಾಗಿದೆ. ಹಂಚು, ಪಕ್ಕಾಸು, ರೀಪುಗಳು ತುಂಡಾಗಿವೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶಪ್ಪ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ ನಗರದ ಬೂಡು ಕಾಲೊನಿಯಲ್ಲಿ ಮುಹಮ್ಮದ್ ಅಲಿ ಎಂಬವರ ಮನೆ ಪಕ್ಕದ ಗುಡ್ಡ ಬೆಳಗ್ಗೆ 4 ಗಂಟೆ ಸುಮಾರಿಗೆ ಕುಸಿದಿದೆ. ಕುಸಿದ ಮಣ್ಣು ಕೆಳಗಿನ ಮನೆಯ ಗಂಗಮ್ಮ ಎಂಬವರ ಮನೆಯ ಜಾಗಕ್ಕೆ ಬಿದ್ದಿದ್ದು, ಶೌಚಾಲಯದ ಕೊಠಡಿಯ ಮೇಲೆ ಹಾಕಲಾಗಿರುವ ಶೀಟಿನ ಮೇಲೆ ನಿಂತಿದೆ. ಸ್ಥಳಕ್ಕೆ ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುರುಂಜಿಗುಡ್ಡೆ ಆನಂದರಾವ್ ಎಂಬವರ ಜಾಗದಲ್ಲಿ ಇದ್ದ ದೊಡ್ಡಗಾತ್ರದ ಉಪ್ಪಳಿಗೆ ಮರವೊಂದು ಬುಡಸಮೇತ ಮಗುಚಿ ರಸ್ತೆಗೆ ಬಿದ್ದಿದೆ. ಮರ ಬೀಳುವಾಗ ಅದರ ಪಕ್ಕದಲ್ಲಿ ಹಾಕಲಾಗಿದ್ದ ವಿದ್ಯುತ್ ಕಂಬವು ಜೊತೆಯಲ್ಲೇ ನೆಲಕ್ಕುರುಳಿತು. ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ನಪಂ ಸದಸ್ಯೆ ಮೋಹಿನಿಯವರ ಪತಿ ನಾಗರಾಜ ಸ್ಥಳಕ್ಕೆ ಬಂದು ರಸ್ತೆಗೆ ಅಡ್ಡವಾಗಿದ್ದ ಮರವನ್ನು ಕಡಿದು ಸಂಚಾರ ಸುಗಮಗೊಳಿಸಿದರು. ಮೆಸ್ಕಾಂ ಎ.ಇ.ಇ. ಹರೀಶ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ಸ್ಥಳಕ್ಕೆ ಬಂದು ವಿದ್ಯುತ್ ಕಂಬವನ್ನು ಅಳವಡಿಸಿ ಮಧ್ಯಾಹ್ನದ ವೇಳೆಗೆ ವಿದ್ಯುತ್ ಲೈನ್ ಸರಿಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News