ಪುತ್ತೂರು: ಎಲ್‌ಕೆಜಿ ಸ್ಥಾಪನೆಯಿಂದ ಅಂಗನವಾಡಿಗಳಲ್ಲಿ ಮಕ್ಕಳ ಕೊರತೆ

Update: 2016-06-23 14:42 GMT

ಪುತ್ತೂರು, ಜೂ.23: ಸರಕಾರಿ ಶಾಲೆಗಳಲ್ಲಿ ಇದೀಗ ಎಲ್‌ಕೆಜಿ ಮತ್ತು ಯುಕೆಜಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿರುವ ಕಾರಣ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಮಕ್ಕಳ ಕೊರತೆ ಎದುರಾಗುತ್ತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಭೆಯಲ್ಲಿ ತಿಳಿಸಿದಾಗ ಅಧಿಕಾರಿಗಳ ಮತ್ತು ತಾ.ಪಂ. ಸದಸ್ಯರ ನಡುವೆ ಸುದೀರ್ಘ ಚರ್ಚೆ ನಡೆದ ಪ್ರಸಂಗ ಗುರುವಾರ ನಡೆದ ಪುತ್ತೂರು ತಾ.ಪಂನ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಸಭೆಯು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದರ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಪಾಲನಾ ವರದಿ ಮಂಡಿಸುತ್ತಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗ್ಡೆ, ತಾಲೂಕಿನ ಸುಮಾರು 22 ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿರುವುದರಿಂದ ಇದೀಗ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಅಂಗನವಾಡಿಗಳಲ್ಲಿ ಮಕ್ಕಳ ಕೊರತೆ ಎದುರಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್, ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣವನ್ನು ಆರಂಭಿಸುವಂತೆ ಸರಕಾರದ ಸೂಚನೆಗಳಿಲ್ಲ. ಆದರೆ ಸ್ಥಳೀಯರು ಮತ್ತು ಮಕ್ಕಳ ಪೋಷಕರು ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲು ಮುಂದಾದಲ್ಲಿ ಅದನ್ನು ತಡೆಯುವ ಅಧಿಕಾರವೂ ಇಲಾಖೆಗಿಲ್ಲ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಭೆಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ತಾಲೂಕಿನಲ್ಲಿ 22 ಶಾಲೆಗಳಲ್ಲಿ ಎಲ್‌ಕೆಜಿ ತರಗತಿ ಆರಂಭಗೊಂಡಿಲ್ಲ. 9 ಶಾಲೆಗಳಲ್ಲಿ ಮಾತ್ರ ಆರಂಭಿಸಲಾಗಿದೆ. ಅದಾಗ್ಯೂ ಅವರು ಲಿಖಿತವಾಗಿ ಇಲಾಖೆಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಿದರು.

ಈ ವಿಚಾರದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ನಡುವೆ ಕೆಲ ಕಾಲ ಮಾತಿನ ತಿಕ್ಕಾಟವೂ ನಡೆಯಿತು. ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸುವ ಕುರಿತು ಈ ತನಕ ಯಾರಿಗೂ ಲಿಖಿತ ಅನುಮತಿ ನೀಡಲಾಗಿಲ್ಲ ಎಂದು ಬಿಇಒ ಸಭೆಯಲ್ಲಿ ಸ್ಪಷ್ಟಪಡಿಸಿದರು. ಅಲ್ಲದೆ ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ನಡೆಸುವ ಪ್ರಸ್ತಾಪವನ್ನೂ ಮುಂಡಿಟ್ಟರು.

ಅಂಗನವಾಡಿಗಳಲ್ಲಿ ಪಠ್ಯಶಿಕ್ಷಣ ವ್ಯವಸ್ಥೆಗಳಿಲ್ಲ. ಶಾಲೆಗೆ ಹೋಗುವ ಮೊದಲು ಮಕ್ಕಳನ್ನು ಸಿದ್ಧಗೊಳಿಸುವುದು ಅಂಗನವಾಡಿ ವ್ಯವಸ್ಥೆಯಾಗಿರುವುದರಿಂದ ಇಲ್ಲಿ ಪಠ್ಯ ವ್ಯವಸ್ಥೆಯಲ್ಲಿನ ಎಲ್‌ಕೆಜಿ, ಯುಕೆಜಿ ಆರಂಭಿಸುವುದು ಸಾಧ್ಯವಾಗದು ಎಂದು ಸಿಡಿಪಿಒ ಶಾಂತಿ ಹೆಗ್ಡೆ ತಿಳಿಸಿದರು. ತಾ.ಪಂ. ಸದಸ್ಯೆ ಉಷಾ ಅಂಚನ್ ಅಂಗನವಾಡಿಗಳಲ್ಲಿ ಪೌಷ್ಠಿಕ ಆಹಾರ, ಮಕ್ಕಳ ಆರೋಗ್ಯದ ಕುರಿತಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇಂತಹ ವ್ಯವಸ್ಥೆ ಈಗ ಆರಂಭಿಸಿರುವ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಲ್ಲಿ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ತಾ.ಪಂ. ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ನಮಗೆ ಎರಡು ಕಣ್ಣುಗಳಿದ್ದಂತೆ. ರಾಜ್ಯದ ವಿವಿಧ ಕಡೆಗಳಲ್ಲಿ ಸರಕಾರಿ ಶಾಲೆಗಳ ಬಲವರ್ಧನೆಯ ದೃಷ್ಟಿಯಿಂದ ಎಲ್‌ಕೆಜಿ ಶಿಕ್ಷಣ ಆರಂಭಿಸಲಾಗುತ್ತಿದೆ. ಈ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ತೀರ್ಮಾನವಾಗಲಿ ಎಂದು ತಿಳಿಸಿ ಚರ್ಚೆಗೆ ತೆರೆ ಎಳೆದರು.

ನೆಟ್ಟಣಿಗೆ ಮುಡ್ನೂರು, ಮೇನಾಲ, ನಕ್ಸಲ್ ಸೂಕ್ಷ್ಮ ಪ್ರದೇಶದ ಸಿರಿಬಾಗಿಲು ಸೇರಿದಂತೆ ವಿವಿಧ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ವಿಚಾರ ಸಭೆಯಲ್ಲಿ ಚರ್ಚೆ ನಡೆದಾಗ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್, ತಾಲೂಕಿನಲ್ಲಿ 232 ಶಿಕ್ಷಕರ ಕೊರತೆ ಇದೆ. ಇದನ್ನು ಭರ್ತಿಗೊಳಿಸುವ ಕೆಲಸ ಸರಕಾರದ ಹಂತದಲ್ಲಿ ನಡೆಯಬೇಕು. ಸರಕಾರದಿಂದ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಆ ಸಂದರ್ಭದಲ್ಲಿ 100 ಶಿಕ್ಷಕರನ್ನು ತಾಲೂಕಿಗೆ ನೀಡುವ ಭರವಸೆಯನ್ನು ಇಲಾಖೆಯ ಉಪ ನಿರ್ದೇಶಕರು ನೀಡಿದ್ದಾರೆ ಎಂದರು. ಹೆಚ್ಚುವರಿ ಶಿಕ್ಷಕರನ್ನು ತಾಲೂಕಿಗೆ ನೀಡುವಂತೆ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಡೆಂಗ್, ಮಲೇರಿಯಾ ಸೇರಿದಂತೆ ರೋಗಗಳು ಬರುತ್ತಿರುವ ಈ ಸಂದರ್ಭದಲ್ಲಿ ಎಲಿಸಾ ಟೆಸ್ಟ್‌ಗೆ ಮಂಗಳೂರಿಗೆ ತೆರಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಎಲಿಸಾ ಟೆಸ್ಟ್ ಮಾಡುವ ವ್ಯವಸ್ಥೆಯನ್ನು ತಾಲೂಕು ವ್ಯಾಪ್ತಿಯಲ್ಲಿ ಮಾಡಬೇಕು ಎಂದು ಸದಸ್ಯೆ ಕೆ.ಟಿ. ವಲ್ಸಮ್ಮ ಆರೋಗ್ಯಾಧಿಕಾರಿಯನ್ನು ಆಗ್ರಹಿಸಿದರು. ಮಳೆ ಸರಾಗವಾಗಿ ಸುರಿಯಲು ಆರಂಭಿಸಿದಾಗ ರೋಗಗಳು ಕಡಿಮೆಯಾಗುತ್ತವೆ. ಎಲ್ಲಾ ಗ್ರಾ.ಪಂ.ನವರು ಫಾಗಿಂಗ್ ಮೆಶಿನ್ ಖರೀದಿಸುವಂತೆ ಜಿಲ್ಲಾ ಮೀಟಿಂಗ್‌ನಲ್ಲಿ ತಿಳಿಸಿದ್ದಾರೆ. ಇಂತಹ ವ್ಯವಸ್ಥೆ ಮಾಡಿಕೊಂಡರೆ ಉತ್ತಮ ಎಂದು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ ಹೇಳಿದರು.

ಬಿಳಿನೆಲೆ, ಕೊಂಬಾರುಗಳಲ್ಲಿ ಹಂದಿ ಸಾಕುವವರು ಗ್ರಾ.ಪಂ.ನಿಂದ ಅನುಮತಿಯನ್ನೂ ಪಡೆದಿಲ್ಲ, ಸ್ವಚ್ಛತೆಗೂ ಆದ್ಯತೆ ನೀಡುತ್ತಿಲ್ಲ. ಬಿಳಿನಲೆ ಗ್ರಾ.ಪಂ. ಈ ಕುರಿತು ಕ್ರಮ ಕೈಗೊಂಡಿದೆ. ಆದರೆ ಕೊಂಬಾರು ಗ್ರಾಪಂ ಕ್ರಮಕೈಗೊಂಡಿಲ್ಲ ಎಂದು ಸದಸ್ಯೆ ಆಶಾ ಬಿಳಿನೆಲೆ ಹೇಳಿದರು.

ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮುಕುಂದ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಪುತ್ತೂರು ತಹಶೀಲ್ದಾರ್ ಪುಟ್ಟ ಶೆಟ್ಟಿ, ಕಡಬ ತಹಶೀಲ್ದಾರ್ ನಿಂಗಯ್ಯ, ತಾಲೂಕು ಸಂಯೋಜನಾಧಿಕಾರಿ ಗಣಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿ.ಪಂ. ಸದಸ್ಯರಾದ ಸರ್ವೋತ್ತಮ ಗೌಡ, ಅನಿತಾ ಹೇಮನಾಥ ಶೆಟ್ಟಿ, ಶಯನಾ ಜಯಾನಂದ, ಪ್ರಮಿಳಾ ಜನಾರ್ದನ, ತಾ.ಪಂ. ಸದಸ್ಯರು, ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News