ಜೋಕಟ್ಟೆಯ ರೈಲ್ವೆ ಅಂಡರ್ ಪಾಸ್ ಕಾಮಗಾರಿಯಿಂದಾಗಿ ಭೂಕುಸಿತ: ಆತಂಕದಲ್ಲಿ ಜನರು

Update: 2016-06-23 16:53 GMT

ಸುರತ್ಕಲ್, ಜೂ. 23: ಜೋಕಟ್ಟೆಯ ರೈಲ್ವೆ ಅಂಡರ್ ಪಾಸ್ ಕಾಮಗಾರಿಗಾಗಿ ಇಲ್ಲಿನ ಬೊಟ್ಟು ಪ್ರದೇಶ ವ್ಯಾಪ್ತಿಯ ಮಣ್ಣನ್ನು ಅಗೆಯಲಾಗಿತ್ತು. ಕಳೆದ ಕೆಲವು ದಿನಗಳಿಂದ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೊಟ್ಟು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿದ್ದು, ಹಲವು ಅಪಾಯಗಳಿಗೆ ಆಹ್ವಾನ ನೀಡುತ್ತಿದೆ. ಅಂಡರ್ ಪಾಸ್ ಕಾಮಗಾರಿ ಆರಂಭದ ದಿನಗಳಿಂದಲೂ ಇಲ್ಲಿನ ಜನತೆ ಇದು ಅವೈಜ್ಞಾನಿಕ ಕಾಮಗಾರಿ ಎಂದು ಹಲವಾರು ಬಾರಿ ಇಲಾಖೆಗೆ ಮನವರಿಕೆ ಮಾಡಿಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ದೂರಿದ್ದಾರೆ.
 
ಅಲ್ಲದೆ, ಬೊಟ್ಟು ಪ್ರದೇಶದಲ್ಲಿ 25 ರಿಂದ 30 ಕುಟುಂಬಗಳಿದ್ದು, ಸುಮಾರು ನಲವತ್ತಕ್ಕೂ ಹೆಚ್ಚಿನ ಮಕ್ಕಳು ಈ ಭಾಗದಿಂದ ಬೇರೆ ಬೇರೆ ಶಾಲೆ ಕಾಲೇಜುಗಳಿಗೆ ತೆರಳುವವರಿದ್ದಾರೆ. ಭೂ ಕುಸಿತದಿಂದಾಗಿ ಶಾಲಾ ವಾಹನಗಳು ಈ ಪ್ರದೇಶಕ್ಕೆ ಬರಲು ಅಂಜುತ್ತಿದ್ದು, ಮಕ್ಕಳು ವಾಹನಗಳವರೆಗೆ ನಡೆದು ಬಳಿಕ ತೆರಳಬೇಕಾಗಿದೆ. ಅಲ್ಲದೆ, ದಿನ ನಿತ್ಯ ಹಲವು ಕೆಲಸ ನಿಮಿತ್ತ ವಿವಿಧ ಸ್ಥಳಗಳಿಗೆ ಸಂಚರಿಸುವ ಜನರಿದ್ದು ಎಲ್ಲರೂ ಪರದಾಡುವಂತಾಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ಕಳೆದ ಬಾರಿ ಮಂಗಳೂರು ಸೆಝ್ನ ಕಾರ್ಯಕ್ರಮಕ್ಕೆ ಬಂದಿದ್ದ ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರಿಗೂ ಈ ಕುರಿತು ದೂರು ನೀಡಲಾಗಿತ್ತು. ಬಳಿಕ ಅವರು ಖುದ್ದಾಗಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ಆ ಬಳಿಕ ಕಾಮಗಾರಿ ವೇಗ ಪಡೆದುಕೊಂಡು ಇದೀಗ ಸಂಪೂರ್ಣಗೊಂಡಿದೆ. ಆದರೆ, ಸಾರ್ವಜನಿಕರು ಎಚ್ಚರಿಸಿದ್ದಂತೆ ಅಂಡರ್ ಪಾಸ್ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಪಕ್ಕದಲ್ಲೇ ಬೊಟ್ಟು ಪ್ರದೇಶದ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ಜನರು ಪ್ರಾಣವನ್ನು ಕೈಯ್ಯಲ್ಲಿ ಹಿಡಿದು ಸಂಚರಿಸುವಂತಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಜೋಕಟ್ಟೆ ಪ್ರದೇಶದ ಜನರ ಬಹುದಿನಗಳ ಬಹುದೊಡ್ಡ ಸಮಸ್ಯೆಯಾಗಿದ್ದ ರೈಲ್ವೆ ಕ್ರಾಸಿಂಗ್ನ್ನು ತಪ್ಪಿಸಲು ರೈಲ್ವೆ ಇಲಾಖೆ ನಿರ್ಮಿಸುತ್ತಿದ್ದ ಅಂಡರ್ ಪಾಸ್ ಜೋಕಟ್ಟೆ ಜನರ ಪಾಲಿಗೆ ಸಂತೋಷದ ಸುದ್ದಿಯಾಗಿತ್ತು. ಆದರೆ ಅದು ಅಲ್ಪಕಾಲಕ್ಕೆ ಸೀಮಿತಗೊಂಡಿದ್ದು ಮಾತ್ರ ದೊಡ್ಡ ದುರಂತ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಆದರೆ ಸದ್ಯಕ್ಕೆ ರೈಲ್ವೆ ಇಲಾಖೆ ನಿರ್ಮಿಸಿರುವ ಅಂಡರ್ ಪಾಸ್ ಖಂಡಿತಾ ಈ ಸಮಸ್ಯೆಗೆ ಪರಿಹಾರವಲ್ಲ ಎನ್ನುವುದನ್ನು ಸ್ಥಳೀಯರು ಕಾಮಗಾರಿ ಪ್ರಾರಂಭದಿಂದಲೂ ಹೇಳಿಕೊಂಡಿದ್ದರು. ಯಾಕೆಂದರೆ, ಇದು ನೀರಿನ ಒರತೆ ಹೆಚ್ಚಿರುವ ಪ್ರದೇಶವಾಗಿದೆ. ಅಲ್ಲದೆ, ಪ್ರತಿ ನಿತ್ಯ ಎಂಆರ್ಪಿಎಲ್ನ ಬೃಹತ್ ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಕೇವಲ 10 ಅಡಿ ಅಗಲದ ಅಂಡರ್ಪಾಸ್ ರಸ್ತೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುವ ಬಗ್ಗೆ ಜಿಲ್ಲಾಧಿಕಾರಿಯ ಗಮನಕ್ಕೆ ತಂದಿದ್ದ ಸ್ಥಳೀಯರು, ಫ್ಲೈ ಓವರ್ ಸೇತುವೆಯ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ಸ್ಥಳಿಯರನ್ನು ವಿಶ್ವಾಸಕ್ಕೆ ಪಡೆಯದೆ, ಅವರ ಬೇಡಿಕೆಗಳಿಗೆ ಸ್ಪಂದಿಸದ ಜಿಲ್ಲಾಧಿಕಾರಿಗಳು ಸಹಿತ ರೈಲ್ವೆ ಇಲಾಖೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಏಕ ಪಕ್ಷೀಯವಾಗಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅವೈಜ್ಞಾನಿಕವಾದ ಈ ಕಾಮಗಾರಿಯಿಂದಾಗಿ ಭೂ ಕುಸಿತ ಸಂಭವಿಸಿದ್ದು ಪ್ರದೇಶದ ಜನರ ಸಹನೆಯನ್ನು ಪರೀಕ್ಷಿಸುವಂತಿದೆ. ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆ ಶೀಘ್ರದಲ್ಲಿ ಸೂಕ್ತ ಸ್ಪಂದನೆ ನೀಡಿ ಪರಿಹಾರ ಕಲ್ಪಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಾಮಗಾರಿ ಆರಂಭಕ್ಕೂ ಮೊದಲೇ ಅವೈಜ್ಞಾನಿಕವಾಗಲಿದೆ ಎಂದು ಹೇಳಿದ್ದೆವು. ಆದರೂ ಸ್ಥಳೀಯರ ಮಾತುಗಳಿಗೆ ಬೆಲೆಕೊಡದೆ ಕಾಮಗಾರಿ ನಡೆಸಲಾಗಿದೆ. ಜೋಕಟ್ಟೆ ಪರಿಸರದ ಟ್ರಾಫಿಕ್ ಗಮನಿಸಿದರೆ ಫೈಓವರ್ ಸೇತುವೆ ಮಾತ್ರ ಈ ಸಮಸ್ಯೆಗೆ ಪರಿಹಾರ ವಾಗಲಿದೆ. ಇನ್ನಾದರೂ ಸಂಬಂಧ ಪಟ್ಟವರು ಗಮನ ಹರಿಸಿ ಅವೈಜ್ಞಾನಿಕ ಅಂಡರ್ ಪಾಸ್ ತೆರವುಗೊಳಿಸಿ ಫೈಓವರ್ ನಿರ್ಮಾಣದ ಬಗ್ಗೆ ಚಿಂತಿಸಿ ಜನರಿಗೆ ನ್ಯಾಯ ಒದಗಿಸಬೇಕಿದೆ.

ಮುಹಮ್ಮದ್ ಜಮಾಲ್, ಸ್ಥಳೀಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News