ಮಣಿಪಾಲ: ಹೆಬ್ಬಾರ್ ಗ್ಯಾಲರಿ, ಕಲಾಕೇಂದ್ರ ಉದ್ಘಾಟನೆ
ಮಣಿಪಾಲ: ಹೆಬ್ಬಾರ್ ಗ್ಯಾಲರಿ, ಕಲಾಕೇಂದ್ರ ಉದ್ಘಾಟನೆ
ಮಣಿಪಾಲ, ಜೂ.24: ಮಣಿಪಾಲ ವಿವಿಯ ಮಣಿಪಾಲ ಸೆಂಟರ್ ಫಾರ್ ಫಿಲಾಸಫಿ ಮತ್ತು ಹ್ಯುಮಾನಿಟಿಯ ಆಶ್ರಯದಲ್ಲಿ ಕೆ.ಕೆ.ಹೆಬ್ಬಾರ್ ಗ್ಯಾಲರಿ ಮತ್ತು ಕಲಾ ಕೇಂದ್ರವನ್ನು ಇನ್ಫೋಸಿಸ್‌ನ ಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಇಂದು ಸಂಜೆ ಉದ್ಘಾಟಿಸಿದರು.
ದೇಶದ ಖ್ಯಾತನಾಮ ಚಿತ್ರಕಲಾವಿದರಲ್ಲಿ ಒಬ್ಬರಾದ ಮೂಲತಃ ಉಡುಪಿ ಸಮೀಪದ ಕಟ್ಟಿಂಗೇರಿಯವರಾದ ಕೆ.ಕೆ.ಹೆಬ್ಬಾರ್‌ರ ನೆನಪಿನಲ್ಲಿ ಕೆ.ಕೆ.ಹೆಬ್ಬಾರ್ ಟ್ರಸ್ಟ್ ಹಾಗೂ ಮಣಿಪಾಲ ವಿವಿ ಈ ಗ್ಯಾಲರಿಯನ್ನು ಆರಂಭಿಸಿದೆೆ. ಗ್ಯಾಲರಿಯನ್ನು ಉದ್ಘಾಟಿಸಿ ಮಾತನಾಡಿದ ನಾರಾಯಣ ಮೂರ್ತಿ, 1977ರಿಂದ ಕೆ.ಕೆ.ಹೆಬ್ಬಾರ್‌ರೊಂದಿಗಿನ ತನ್ನ ಒಡನಾಟ ವನ್ನು ಸ್ಮರಿಸಿಕೊಂಡರು
ಮಣಿಪಾಲ ವಿವಿಯ ಪ್ರೊ.ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಹೆಬ್ಬಾರ್‌ರ ಕಲಾಕೃತಿಗಳೊಂದಿಗೆ ಪುಟ್ಟದಾಗಿ ಆರಂಭಗೊಂಡ ಈ ಗ್ಯಾಲರಿಯನ್ನು ವಿಸ್ತರಿಸುವ ಉದ್ದೇಶ ವಿವಿಗಿದೆ ಎಂದರು.
ಮಣಿಪಾಲ ವಿವಿ ಚಾನ್ಸಲರ್ ಡಾ.ರಾಮದಾಸ ಎಂ.ಪೈ, ವಸಂತಿ ಆರ್. ಪೈ, ಡಾ.ರಂಜನ್ ಪೈ, ಕುಲಪತಿ ಡಾ.ಎಚ್.ವಿನೋದ್ ಭಟ್, ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್, ಕೆ.ಕೆ.ಹೆಬ್ಬಾರ್‌ರ ಪುತ್ರಿಯರಾದ ಇತಿಹಾಸಜ್ಞೆ ಪ್ರೊ.ರಜನಿ ಪ್ರಸನ್ನ, ಕಲಾವಿದೆ ರೇಖಾ ರಾವ್, ಅಳಿಯ ಪ್ರಸನ್ನ, ಸಂಸ್ಥೆಯ ಮುಖ್ಯಸ್ಥ ಡಾ.ನಿಖಿಲ್ ಗೋವಿಂದ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಹೆಬ್ಬಾರ್ ಕುರಿತು ಸಂವಾದ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಖ್ಯಾತ ಕಲಾವಿದರಾದ ಎಸ್.ಜಿ.ವಾಸುದೇವ್, ಐ.ಎಂ. ವಿಠಲಮೂರ್ತಿ ಮುಂತಾದವರು ಪಾಲ್ಗೊಂಡಿದ್ದರು.