ಮಣ್ಣಿನಡಿ ಹೂತುಹೋಗುತ್ತಿದ್ದ ದ್ವಿಚಕ್ರ ವಾಹನಗಳನ್ನು ಮೇಲಕ್ಕೆತ್ತಿದ ಸಾಹಸಿ

Update: 2016-06-25 11:30 GMT

ಕೊಣಾಜೆ, ಜೂ.25: ತೊಕೊಟ್ಟಿನ ಮಾಯಾ ಬಾರ್ ಎದುರುಗಡೆಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಮೂರು ದ್ವಿಚಕ್ರ ವಾಹನಗಳು ಧಿಡೀರನೆ ಉಂಟಾದ ಭೂಕುಸಿತದಲ್ಲಿ ಬೃಹದಾಕಾರದ ಹೊಂಡದಲ್ಲಿ ಬಿದ್ದು ಮಣ್ಣು ಪಾಲಾಗಿದ್ದು, ಸ್ಥಳೀಯ ಸಾಹಸಿಯೊಬ್ಬರು ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಕ್ರೇನ್ ಮುಖಾಂತರ ಕೆಳಗಿಳಿದು ಎರಡು ವಾಹನಗಳನ್ನು ಮೇಲಕ್ಕೆತ್ತಿದ್ದಾರೆ.

ಶುಕ್ರವಾರ ರಾತ್ರಿ 11 ಗಂಟೆಗೆ ಅನಿಲ್, ಡ್ಯಾನಿ, ವಾಝಿ ಎಂಬವರು ಬಾರೊಂದರ ಪ್ರವೇಶ ದ್ವಾರದ ಬಳಿಯೇ ಹೋಂಡಾ ಆಕ್ಟಿವಾ,ಅವೇಂಜರ್ ಬೈಕ್ ಮತ್ತು ಡಿಂೋ ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಿ ಒಳಗಡೆ ಹೋಗಿದ್ದ ಸಂದರ್ಭ ಧಿಡೀರನೆ ಮಣ್ಣು ಕುಸಿದಿದ್ದು ಮೂರು ವಾಹನಗಳು ಸುಮಾರು ಇಪ್ಪತ್ತು ಅಡಿ ಆಳವಾದ ಹೊಂಡಕ್ಕೆ ಬಿದ್ದಿದೆ. ಮಾಯಾ ಬಾರ್ ಈ ಹಿಂದೆ ಕೆಳ ಅಂತಸ್ತಲ್ಲಿದ್ದು ಹೆದ್ದಾರಿ ಅಗಲೀಕರಣ ಸಂದರ್ಭ ಕೆಳ ಅಂತಸ್ತಿಗೆ ಸಂಪೂರ್ಣವಾಗಿ ಮಣ್ಣು ಹಾಕಿ ರಸ್ತೆಯನ್ನು ಎತ್ತರ ಮಾಡಲಾಗಿತ್ತು. ಈ ಸಂದರ್ಭ ಎದುರಲ್ಲಿದ್ದ ಬಾವಿಯೊಂದನ್ನು ಸಂಪೂರ್ಣ ಮಣ್ಣು ಹಾಕಿ ಮುಚ್ಚದೆ ಬರೀ ತೆಳ್ಳನೆಯ ಕಾಂಕ್ರಿಟ್ ಹಾಕಿ ಅದರ ಮೇಲೆ ಮಣ್ಣು ಹಾಕಿ ಬಾವಿಯ ಮೇಲೆಯೇ ನವೀಕೃತ ಬಾರ್‌ನ ಪಾರ್ಕಿಂಗ್ ಸ್ಥಳ ಮಾಡಲಾಗಿತ್ತು. ಗುರುವಾರ, ಶುಕ್ರವಾರ ಸುರಿದ ಧಾರಾಕಾರ ಮಳೆಗೆ ಮಣ್ಣೆಲ್ಲ ಒದ್ದೆಯಾಗಿದ್ದು ಮೊದಲಿದ್ದ ಬಾವಿಯ ಮೇಲುಗಡೆಯೇ ಯಾವುದೇ ಅರಿವಿಲ್ಲದ ಗಿರಾಕಿಗಳು ವಾಹನಗಳನ್ನು ನಿಲ್ಲಿಸಿದ್ದರಿಂದ ಅನಾಹುತ ಸಂವಿಸಿದೆ.

ಮಣ್ಣು ಕುಸಿಯುವುದನ್ನು ಕಣ್ಣಾರೆ ಕಂಡ ರಿಕ್ಷಾ ಚಾಲಕ ಗೋವರ್ಧನ್ ಅವರು ಸಮಯಪ್ರಜ್ಞೆ ಮೆರೆದು ಪಾರ್ಕಿಂಗ್ ಪ್ರದೇಶದಲ್ಲೇ ನಿಂತಿದ್ದ ಬಾರ್‌ನ ಹಿರಿಯ ಅಡುಗೆ ಸಿಬ್ಬಂದಿ ಸೀತಾರಾಮ್ ಅವರನ್ನು ಪಕ್ಕಕ್ಕೆ ಸರಿಸಿ ಪ್ರಾಣ ಉಳಿಸಿದ್ದಾರೆ. ಘಟನೆ ನಡೆದಾಕ್ಷಣ ಮನೆಕಡೆ ತೆರಳಿದ್ದ ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ಅವರು ಪಂಪ್‌ವೆಲ್‌ನಿಂದ ಹಿಂದಕ್ಕೆ ಬಂದು ಅಗ್ನಿ ಶಾಮಕದಳದವರನ್ನು ಕರೆಸಿದ್ದು, ಸ್ಥಳಕ್ಕೆ ದೌಡಾಯಿಸಿದ ತುರ್ತು ಸೇವೆಯ ಸಿಬ್ಬಂದಿ ಬರೇ ಜನರನ್ನು ಬೈದು ದೂರ ಸರಿಸುವುದು ಬಿಟ್ರೆ ಬೇರೆ ಯಾವುದನ್ನೂ ಮಾಡಲು ವಿಫಲರಾದರು.

ಕೂಡಲೇ ಇನ್ಸ್‌ಪೆಕ್ಟರ್ ಕ್ರೇನ್ ಯಂತ್ರವನ್ನು ಸ್ಥಳಕ್ಕೆ ತರಿಸಿದ್ದು ಹೊಂಡಕ್ಕೆ ಇಳಿಯಲು ಯಾರೊಬ್ಬ ಅಗ್ನಿಶಾಮಕ ಸಿಬ್ಬಂದಿಯೂ ಮುಂದಾಗಿಲ್ಲ ಎನ್ನಲಾಗಿದೆ. ಕೊನೆಗೆ ಬಾರ್ ಮಾಲಕರ ಸ್ನೇಹಿತ ಮನೋಜ್ ಎಂಬುವವರು ಮಳೆಯನ್ನೂ ಲೆಕ್ಕಿಸದೆ ತರಬೇತಿ ಪಡೆಯದಿದ್ದರೂ ಕೂಡಾ ಕೆಳಗಿಳಿದು ಅಗ್ನಿಶಾಮಕದಳದವರೇ ನಾಚುವ ರೀತಿಯಲ್ಲಿ ಆಕ್ಟಿವಾ ಮತ್ತು ಡಿಯೋ ವಾಹನಗಳನ್ನು ಮೇಲಕ್ಕೆತ್ತಿ ಸಾಹಸ ಮೆರೆದದ್ದು ಎಲ್ಲರ ಪ್ರಶಂಸೆಗೆ ಪಾತ್ರರಾದರು. ಅಲ್ಲದೆ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ಕೂಡಾ ಮಳೆಯಲ್ಲಿ ನೆನೆದುಕೊಂಡೇ ಮನೋಜ್ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಮಣ್ಣಿನೊಳಗೆ ಹೂತು ಹೋಗಿರುವ ಇನ್ನೊಂದು ಹೊಸ ಅವೇಂಜರ್ ಬೈಕ್‌ಗಾಗಿ ಶೋಧ ಕಾರ್ಯ ಮುಂದುವರೆದಿದೆ. ಮೇಲಕ್ಕೆತ್ತಿದ ಎರಡು ವಾಹನಗಳ ಇಂಜಿನ್‌ಗಳಿಗೆ ಕೆಸರು ಹೊಕ್ಕಿದ್ದು ಉಪಯೋಗಕ್ಕೆ ಬಾರದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News