ಮಾದಕ ದ್ರವ್ಯ ವ್ಯಸನ ಮುಕ್ತಗೊಳಿಸುವುದು ಸಾಮಾಜಿಕ ಹೊಣೆಗಾರಿಕೆ: ಡಾ.ಸಂಜೀವ ಎಂ.ಪಾಟೀಲ್

Update: 2016-06-25 12:06 GMT

ಮಂಗಳೂರು, ಜೂ.25: ಮಾದಕದ್ರವ್ಯ ವ್ಯಸನ ತಡೆಗಟ್ಟಲು ಸಮಾಜದ ವಿವಿಧ ಸ್ತರಗಳ ಜನರು ಇದೊಂದು ಸಾಮಾಜಿಕ ಹೊಣೆಗಾರಿಕೆಯೆಂದು ಭಾವಿಸಿ ಒಂದಾಗಿ ಕೈ ಜೋಡಿಸಿದಾಗ ಈ ನಿಟ್ಟಿನಲ್ಲಿ ಯಶಸ್ಸು ಗಳಿಸಬಹುದು ಎಂದು ಮಂಗಳೂರು ಉಪ ಪೊಲೀಸ್ ಆಯುಕ್ತ ಡಾ.ಸಂಜೀವ ಎಂ.ಪಾಟೀಲ್ ತಿಳಿಸಿದ್ದಾರೆ.

ಅವರು ಇಂದು ನಗರದ ನಗರದ ವಿಕಾಸ್ ಕಾಲೇಜ್ ಸಭಾಂಗಣದಲ್ಲಿ ಕಾಲೇಜ್ ವತಿಯಿಂದ ಹಮ್ಮಿ ಕೊಂಡ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಮಾದಕ ವ್ಯಸನಕ್ಕೆ ಮಕ್ಕಳು ತುತ್ತಾಗದಂತೆ ಇರಬೇಕಾದರೆ ಪೋಷಕರು, ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಹೆಚ್ಚಿನ ಪಾತ್ರ ವಹಿಸಬೇಕಾಗುತ್ತದೆ.ವಿದ್ಯಾರ್ಥಿಗಳಿಗೆ ಹದಿಹರಯದಲ್ಲಿ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕಾಗುತ್ತದೆ.ಅವರ ಬದುಕಿನಲ್ಲಿ ಸೋಲು, ವೈಫಲ್ಯದ ಸಂದರ್ಭದಲ್ಲಿ ಅವರ ಮೇಲಿನ ಒತ್ತಡ ನಿವಾರಣೆಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಾಗಿದೆ ಎಂದು ಸಂಜೀವ ಎಂ.ಪಾಟೀಲ್ ತಿಳಿಸಿದರು. 

ಸಮಾಜದಲ್ಲಿ ಮಾದಕ ವ್ಯಸನವನ್ನು ಹೋಗಲಾಡಿಸುವುದು ನಮ್ಮೆಲ್ಲರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.ಸಮಾಜದಲ್ಲಿ ನಮ್ಮ ಕುಟುಂಬದ ಸದಸ್ಯರು ಮಾದಕ ವ್ಯಸನಕ್ಕೆ ಬಲಿಯಾಗದಂತೆ ತಡೆಯುವುದರ ಜೊತೆಗೆ ಇತರರು ಈ ಚಟಕ್ಕೆ ಬಲಿ ಬೀಳದಂತೆ ಮಾಡುವ ಮಹತ್ವದ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಮಾಜಿ ಸಚಿವ ಹಾಗೂ ವಿಕಾಸ ಕಾಲೇಜಿನ ಆಡಳಿತ ಸಮಿತಿಯ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ಮಾದಕ ವ್ಯಸನದ ಅಭ್ಯಾಸ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹತ್ತನೆ ತರಗತಿಯ ನಂತರ ಕಡ್ಡಾಯವಾಗಿ ವಿದ್ಯಾರ್ಥಿಗಳನ್ನು ಡ್ರಗ್ ಟೆಸ್ಟ್‌ಗೆ ಒಳಪಡಿಸಬೇಕು.ಇದೊಂದು ಶಿಕ್ಷೆಯೆಂದು ವಿದ್ಯಾರ್ಥಿಗಳು ಭಾವಿಸಬಾರದು ಶಾಲೆ, ಕಾಲೇಜುಗಳಲ್ಲಿ ಡ್ರಗ್ಸ್ ಮುಕ್ತಗೊಳಿಸಲು ಈ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಪಾಲೆಮಾರ್ ತಿಳಿಸಿದರು.

ಮಾದಕ ದ್ರವ್ಯ ಸೇವನೆ ಚಟ ವಿಸ್ತಾರವಾಗದಂತೆ ತಡೆಯಲು ಉತ್ತಮ ಹವ್ಯಾಸ ಬೆಳೆಸಿಕೊಳ್ಳಿ:-ಮಾದಕ ದ್ರವ್ಯ ಸೇವನೆಯ ಚಟ ನಮ್ಮ ಸಮಾಜದಲ್ಲಿ ವಿಸ್ತಾರವಾಗದಂತೆ ತಡೆಯಲು ಪರ್ಯಾಯವಾಗಿ ನಾವು ನಮ್ಮನ್ನು ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯೆನೆಪೋಯ ವಿಶ್ವ ವಿದ್ಯಾನಿಲಯದ ಪ್ರೊ.ಡಾ ಸುಧೀಂದ್ರ ಪ್ರಭು ತಿಳಿಸಿದರು.

ಪ್ರಸಕ್ತ ಕರ್ನಾಟಕ ರಾಜ್ಯದ ರಾಜಧಾನಿಯೂ ಮಾದಕ ದ್ರವ್ಯಗಳ ಚಟುವಟಿಕೆಯ ಕೇಂದ್ರವಾಗುತ್ತಿರುವುದು, ವಿವಿಧ ನಗರಗಳಲ್ಲಿ ಮಾದಕ ವ್ಯಸನದ ಜಾಲ ವಿಸ್ತಾರವಾಗುತ್ತಿರುವ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಡ್ರಗ್ಸ್ ಮಾಫಿಯಾದ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಮೂಹಿಕ ಪ್ರಯತ್ನ ಸಾಗಬೇಕಾಗಿದೆ. ಪ್ರಸಕ್ತ ವೇಗದ ಬದುಕಿನಲ್ಲಿ ಒತ್ತಡವೂ ಹೆಚ್ಚುತ್ತಿದೆ. ಈ ಒತ್ತಡ ನಿವಾರಣೆಗೆ ಕೆಲವರು ಮಾದಕ ವ್ಯಸನಿಗಳಾಗುತ್ತಾರೆ ಎನ್ನುವ ಅಭಿಪ್ರಾಯವಿದೆ. ಸಮಾಜದಲ್ಲಿ ಒತ್ತಡ ನಿವಾರಣೆಗೆ ಈ ರೀತಿಯ ತಪ್ಪು ಹಾದಿಗಳಲ್ಲಿ ಸಾಗಲು ಪ್ರೇರೇಪಣೆ ನೀಡುವವರ ಬಗ್ಗೆ ಗಮನಹರಿಸಬೇಕಾಗಿದೆ.

ನಮ್ಮ ಸಂಸ್ಕೃತಿಯಲ್ಲಿ ಒತ್ತಡ ನಿವಾರಣೆಗೆ ಯೋಗ ಧ್ಯಾನದಂತಹ ವಿವಿಧ ಮಾರ್ಗಗಳಿವೆ. ತಂಬಾಕು ಸೇವನೆ, ಬೀಡಿ, ಸಿಗರೇಟು ಸೇವನೆಯಂತಹ ಚಟುವಟಿಕೆಗಳ ಮೂಲಕ ಮಾದಕ ದ್ರವ್ಯ ಸೇವನೆಯ ಚಟವೂ ಹಂತ ಹಂತವಾಗಿ ಬೆಳೆಯಲು ಕಾರಣವಾಗುತ್ತವೆ. ಜಗತ್ತಿನಲ್ಲಿ ಪ್ರತಿವರ್ಷ ಲಕ್ಷಾಂತರ ಜನರು ಬಾಯಿ, ಮುಖಾಂಗದ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಮಾದಕ ದ್ರವ್ಯದ ಚಟವನ್ನು ಅಂಟಿಸಿಕೊಂಡವರು ಅದರಿಂದ ಹೊರಬರಲಾಗದೆ ಹೋದರೆ ಅವರ ಬದುಕು ಅಕಾಲಿಕ ಮರಣದಲ್ಲಿ ಕೊನೆಗೊಳ್ಳುವ ಸಾಧ್ಯತೆಗಳು ಹೆಚ್ಚುತ್ತಿವೆ. ವಿವಿಧ ಕಾರಣಗಳಿಂದ ಮಾದಕ ದ್ರವ್ಯ ವ್ಯಸನಕ್ಕೆ ತುತ್ತಾಗುವವರನ್ನು ಸೂಕ್ತ ವೃತ್ತಿಪರ ಸಮಾಲೋಚಕರ, ಚಿಕಿತ್ಸಕರ ಸಹಾಯದಿಂದ ವ್ಯಸನ ಮುಕ್ತರಾಗುವಂತೆ ಮಾಡಬಹುದು ಎಂದು ಡಾ.ಸುಧೀಂದ್ರ ಪ್ರಭು ತಿಳಿಸಿದರು.

ಸಮಾರಂಭದಲ್ಲಿ ವಿಕಾಸ ಕಾಲೇಜಿನ ಸಲಹೆಗಾರ ಅನಂತ ಪ್ರಭು, ಪ್ರಾಂಶುಪಾಲ ಡಾ.ವೆಂಕಟ ರಾಯಡು, ಉಪ ಪ್ರಾಂಶುಪಾಲೆ ಮೋಹನ ಆರ್.ಮೊದಲಾದವರು ಉಪಸ್ಥಿತರಿದ್ದರು. ವಿಕಾಸ ಕಾಲೇಜಿನ ಉಪನ್ಯಾಸಕಿ ಶುೃತಿ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಸನಿಲ್ ಸ್ವಾಗತಿಸಿದರು. ವೈಶಾಲಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿವಿಧ ಸ್ಫರ್ಧೆಯ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮದ ಬಗ್ಗೆ ಮೈಮ್ ಶೋ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News