ದ.ಕ. ಉಡುಪಿ ಜಿಲ್ಲೆಗಳು ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿವೆ: ಸಚಿವ ಟಿ.ಬಿ. ಜಯಚಂದ್ರ

Update: 2016-06-25 15:19 GMT

ಸವಣೂರು, ಜೂ.25: ದ.ಕ. ಹಾಗೂ ಉಡುಪಿ ಜಿಲ್ಲೆಗಳು ಶಿಕ್ಷಣ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡಿದೆ. ಇಲ್ಲಿನ ವಿಶ್ವವಿದ್ಯಾನಿಲಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಈ ಜಿಲ್ಲೆಗಳು ಶಿಕ್ಷಣದ ಕಾಶಿ. ಶಿಕ್ಷಣಕ್ಕೆ ಮುಖ್ಯವಾಗಿ ಶ್ರದ್ಧೆ, ಶಿಸ್ತು, ವಿನಯತೆ ಮುಖ್ಯ. ಜಿಲ್ಲೆಯು ಗುಣಮಟ್ಟದ ಶಿಕ್ಷಣದಿಂದಾಗಿ ಇಂದು ದೇಶದ ಮೂಲೆ ಮೂಲೆಯವರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಅವರು ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಶಿಕ್ಷಣ ಸಂಸ್ಥೆ ಸ್ಥಾಪಿಸುವುದು ಮುಖ್ಯವಲ್ಲ. ಅದನ್ನು ಮೂಲಭೂತ ವ್ಯವಸ್ಥೆಗಳಿಂದ ರೂಪಿಸುವುದು ಮುಖ್ಯ. ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ವ್ಯವಸ್ಥೆಗಳಿದ್ದರೆ ಅದು ಬೆಳೆಯುತ್ತದೆ. ಊರವರ ಸಹಕಾರ ಶಿಕ್ಷಣ ಸಂಸ್ಥೆಗಳಿಗೆ ಬೇಕಿದೆ ಎಂದ ಅವರು, ಕಾಲೇಜುಗಳಿಗೆ 2,160 ಪ್ರೊಫೆಸರ್‌ಗಳನ್ನು ತಿಂಗಳೊಳಗೆ ನೇಮಕ ಮಾಡಲಾಗುವುದು. ರಾಜ್ಯದಲ್ಲಿ 1,400 ಅತಿಥಿ ಉಪನ್ಯಾಸಕರಿದ್ದಾರೆ. ಅವರ ಬೇಡಿಕೆಗೂ ಸರಕಾರ ಸ್ಪಂದಿಸಲಿದೆ. 2,000 ಅತಿಥಿ ಉಪನ್ಯಾಸಕರನ್ನು ಅರ್ಹತೆಯಾಧಾರದಲ್ಲಿ ಸರಕಾರ ಉಪನ್ಯಾಸಕರಾಗಿ ಕಾಲೇಜುಗಳಿಗೆ ಆಯ್ಕೆ ಮಾಡಲಿದ್ದು ಸಚಿವ ಸಂಪುಟದ ಅನುಮೋದನೆ ನಂತರ ಇದು ಜಾರಿಗೆ ಬರಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಹಲವು ವಿವಾದಗಳಿದ್ದರೂ ಬೆಳಂದೂರಿನಲ್ಲಿ ಕಾಲೇಜು ನಿರ್ಮಿಸಿದ ಕೀರ್ತಿ ಬೆಳಂದೂರಿನ ಜನತೆಗೆ ಸಲ್ಲಬೇಕು. ಶಿಕ್ಷಣ ಸಂಸ್ಥೆಗಳ ಬೆಳವಣಿಗೆ ಆಯಾ ಊರಿನ ಜನರ ಕೈಯಲ್ಲಿದೆ. ಯಾವುದೇ ಕೆಲಸಕ್ಕೆ ಇಚ್ಚಾಶಕ್ತಿ ಬೇಕು. ಅದನ್ನು ಬೆಳಂದೂರಿನ ಜನತೆ ಸಾಕಾರಗೊಳಿಸಿದ್ದಾರೆ. ಇಲ್ಲಿ ಸ್ಥಾಪನೆಯಾದ ಕಾಲೇಜು ಖಾಸಗಿ ಕಾಲೇಜಿಗಿಂತಲೂ ಉತ್ತಮವಾಗಿ ಬೆಳೆಯಬೇಕು. ಕಾಲೇಜು ಮಂಜೂರು ಮಾಡಿಸುವುದು ದೊಡ್ಡ ವಿಚಾರವಲ್ಲ. ಅದನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ .ಈ ಕಾಲೇಜಿಗೆ ಹಾಸ್ಟೆಲನ್ನು ಶೀಘ್ರದಲ್ಲಿ ಮಂಜೂರು ಮಾಡಲಾಗುವುದು. ಇಲ್ಲಿನ ಎಲ್ಲಾ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜು ಸ್ಥಾಪನೆಯಾಗಲು ಪ್ರಮುಖ ಕಾರಣರಾದ ಸಚಿವ ಬಿ.ರಮಾನಾಥ ರೈ, ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸಿ.ಪಿ.ಜಯರಾಮ ಗೌಡ, ನಿವೃತ ಶಿಕ್ಷಕ ಟಿ.ಎಸ್.ಆಚಾರ್‌ರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ರಾಜೀವ್ ಗಾಂಧಿ ಮುಕ್ತ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ರಘು, ಮುಂಗಳೂರು ವಿ.ವಿ.ಯ ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆ, ಮೆಸ್ಕಾಂ ನಿರ್ದೆಶಕಿ ಮಲ್ಲಿಕಾ ಪಕ್ಕಳ, ಕರ್ನಾಟಕ ಗೃಹ ಮಂಡಳಿಯ ಅಭಿಯಂತರ ಫಯಾಜುದ್ದೀನ್, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಅಪ್ಪಾಜಿ ಎಸ್.ವಿ, ಜಿ.ಪಂ.ಸದಸ್ಯರಾದ ಪಿ.ಪಿ.ವರ್ಗೀಸ್ ,ಎಂ.ಎಸ್.ಮುಹಮ್ಮದ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಪ್ಪ ಗೌಡ ಎಂ., ಕಡಬ ಬ್ಲಾಕ್ ಅಧ್ಯಕ್ಷ ವಿಜಯ ಕುಮಾರ್ ರೈ ಕರ್ಮಾಯಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಶ್ರೀಧರ್ ರೈ ಮಾದೋಡಿ, ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮಾರ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜ್‌ನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸಿ.ಪಿ.ಜಯರಾಮ ಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ಎಚ್.ಉದಯಶಂಕರ್ ಸ್ವಾಗತಿಸಿದರು. ಗ್ರಂಥಪಾಲ ರವಿಚಂದ್ರ ವಂದಿಸಿದರು. ಬಿ.ಶತ್ರುಂಜಯ ಆರಿಗ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News